ಯಾಗಭೂಮಿಯಲ್ಲಿ ಭಕ್ತಸಾಗರ

ಕಾಸರಗೋಡು: ಮಂಜೇಶ್ವರ ಸನಿಹ ಉಪ್ಪಳ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಅತ್ಯಪೂರ್ವ ವಿಶ್ವಜಿತ್ ಅತಿರಾತ್ರ ಸೋಮಯಾಗ ಮತ್ತು ವೇದಮಾತೆ ಶ್ರೀ ಗಾಯತ್ರಿ ದೇವಿ ಹಾಗೂ ಭಗವಾನ್ ಶ್ರೀ ನಿತ್ಯಾನಂದ ಗುರುಗಳ ಪುನಃ ಪ್ರತಿಷ್ಠಾಪನಾ ಅಷ್ಟಬಂಧ, ಸಾನ್ನಿಧ್ಯ ಕಲಶಾಭಿಷೇಕ ಮಹೋತ್ಸವ ನಡೆಯುತ್ತಿದ್ದು, ಭಕ್ತ ಜನಪ್ರವಾಹ ಹರಿದು ಬರಲಾರಂಭಿಸಿದೆ. ಫೆ.18ರಂದು ಯಾಗ ಆರಂಭವಾಗಿದ್ದು, ನಿತ್ಯಾನಂದ ಯೋಗಾಶ್ರಮ ಅಕ್ಷರಶಃ ಯಾಗ ಯಜ್ಞಾದಿಗಳ ತಾಣವಾಗಿ ಮಾರ್ಪಟ್ಟಿದೆ.

ಕೊಂಡೆವೂರು ಪ್ರದೇಶದಲ್ಲಿ ಯಾಗದ ಧೂಮ ಗಗನ ಚುಂಬಿಸುತ್ತಿದೆ. ಪುರೋಹಿತರ ಮಂತ್ರೋಚ್ಛಾರಣೆಯ ನಿನಾದ ಮಾರ್ದನಿಸುತ್ತಿದೆ. ಶ್ರೀ ನಿತ್ಯಾನಂದ ಸ್ವಾಮಿಯ ಪಾದಸ್ಪರ್ಶದಿಂದ ಪಾವನವಾಗಿರುವ ಕೊಂಡೆವೂರು ಪ್ರದೇಶದಲ್ಲಿ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರ ವಿಶ್ವಜಿತ್ ಅತಿರಾತ್ರ ಸೋಮಯಾಗ ನಡೆಯುತ್ತಿದೆ.

ಯಾಗ-ತಪೋಭೂಮಿ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಅವಧೂತ ಶ್ರೀ ನಿತ್ಯಾನಂದ ಸ್ವಾಮಿಗಳ ಶಕ್ತಿಕೇಂದ್ರಿತವಾದ ಪಾವನ ಭೂಮಿ. ಪ್ರಸ್ತುತ ಶ್ರೀ ಯೋಗಾನಂದ ಸರಸ್ವತಿ ಶ್ರೀಗಳು ಇಲ್ಲಿ ಆಶ್ರಮ ಸ್ಥಾಪಿಸಿ ಆಧ್ಯಾತ್ಮಿಕ, ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳ ಮೂಲಕ ಗಮನ ಸೆಳೆದಿದ್ದಾರೆ. ಕೊಂಡೆವೂರು ಶ್ರೀಗಳ ನೇತೃತ್ವದಲ್ಲಿ ಮೂರು ಪ್ರಮುಖ ಯಾಗಗಳು ಈಗಾಗಲೇ ಸಂಪನ್ನಗೊಂಡಿವೆ. ಸಹಸ್ರ ಚಂಡಿಕಾಯಾಗ (2012), ಚತುರ್ವೇದ ಸಂಹಿತಾ ಯಾಗ ಮತ್ತು ಬೃಹತ್ ಗಾಯತ್ರೀ ಘೃತ ಸಂಪ್ರಾಪ್ತಿ ಯಾಗ(2015), ನಕ್ಷತ್ರೇಷ್ಠಿ ಯಾಗ(2018)ಗಳು ಭಕ್ತ ಜನರ ನೆರವಿನೊಂದಿಗೆ ವ್ಯವಸ್ಥಿತವಾಗಿ ನಡೆದಿದೆ.

ಪ್ರಸಕ್ತ ನಡೆಯುತ್ತಿರುವ ಅತಿರಾತ್ರ ಸೋಮಯಾಗದ ಪೂರ್ವಭಾವಿಯಾಗಿ ವರ್ಷದ ಹಿಂದೆ ಶ್ರೀವಿಷ್ಣು ಸಹಸ್ರನಾಮ ಪರ್ಯಟನೆ ಆರಂಭಗೊಂಡಿತ್ತು. ಶ್ರೀ ವಿಷ್ಣು ಸಹಸ್ರನಾಮ ಪ್ರಚಾರಕ್ಕಾಗಿ ಕಾಸರಗೋಡು -ಕಣ್ಣೂರು, ದಕ್ಷಿಣ ಕನ್ನಡ, ಮುಂಬೈಗಳಲ್ಲಿ ರಥಯಾತ್ರೆ ನಡೆದು ಆಧ್ಯಾತ್ಮಿಕ ಪರಿಜ್ಞಾನ ನಿರೂಪಿಸುವಲ್ಲಿ ಯಶಸ್ವಿಯಾಗಿದೆ.

ಕುಲ ಕಸುಬಿನ ನೆನಪು ಸಾಕಾರ: ಸೋಮಯಾಗದ ಪೂರ್ವಭಾವಿಯಾಗಿ ಜಿಲ್ಲೆಯ ವಿವಿಧ ಸಮುದಾಯದವರನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಆಯಾ ಸಮುದಾಯದ ಕುಲ ಕಸುಬನ್ನು ಮತ್ತೆ ಸಾಕಾರಗೊಳಿಸಲಾಗಿದೆ. ಯಾಗದ ಬಳಕೆಗೆ, ಯಾಗಭೂಮಿಗೆ ಅಗತ್ಯವಿರುವ ಚಪ್ಪರ ಸಾಮಗ್ರಿ, ಬಟ್ಟೆ, ಮಣ್ಣಿನ ಮಡಕೆಗಳು, ಯಾಗ ಪಾತ್ರೆಗಳು, ಹಸೆ, ಬುಟ್ಟಿ, ಪೊರಕೆ, ಸೌಟು ಸಹಿತ ವಿವಿಧ ವಸ್ತುಗಳನ್ನು ಜಿಲ್ಲೆಯ ಹಲವೆಡೆಯಿಂದ ವಿವಿಧ ಸಮುದಾಯ ಬಾಂಧವರು ತಯಾರಿಸಿ ನೀಡಿದ್ದಾರೆ. ಈ ಮೂಲಕ ಸಮಗ್ರ ಹಿಂದು ಸಮಾಜ ತನ್ನ ಒಗ್ಗಟ್ಟನ್ನು ತೋರಿಸಿ, ಪರಂಪರೆ ನೆನಪಿಸುವುದರ ಜತೆಗೆ ಸಾಮರಸ್ಯಕ್ಕೆ ಹೊಸ ಭಾಷ್ಯ ಬರೆಯುವಲ್ಲಿ ಯಶಸ್ವಿಯಾಗಿದೆ.

24ರಂದು ಪೂರ್ಣಾಹುತಿ: ಫೆ.24ರಂದು ಬೆಳಗ್ಗೆ ಪ್ರಾಯಶ್ಚಿತ್ತಾದಿ ಯಜ್ಞಪುಚ್ಛ, ಅವಭೃತ ಸ್ನಾನ, ಉದಯನಿಯೇಷ್ಟಿ, ಮೈತ್ರಾವರುಣ್ಯೇಷ್ಟಿ, ಉದವಸಾನೀಯ, ಪೂರ್ಣಾಹುತಿ ನಡೆಯಲಿದೆ. ಕೊಂಡೆವೂರಿನ ಶ್ರೀ ಗಾಯತ್ರೀ ಸಭಾ ಮಂಟಪದಲ್ಲಿ ಅಪರಾಹ್ಣ 2.30ಕ್ಕೆ ಸಮಾರೋಪ ಸಮಾರಂಭ, ಧಾರ್ಮಿಕ ಸಭೆ ನಡೆಯಲಿದೆ. ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ಕಟೀಲು ಕ್ಷೇತ್ರದ ಆನುವಂಶಿಕ ಪ್ರಧಾನ ಅರ್ಚಕ ಬ್ರಹ್ಮಶ್ರೀ ಅನಂತಪದ್ಮನಾಭ ಆಸ್ರಣ್ಣ ಉಪಸ್ಥಿತರಿರುವರು. ಮುಂಬೈ ಉದ್ಯಮಿ ಕುಸುಮೋಧರ ಡಿ.ಶೆಟ್ಟಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವರಾದ ಸುರೇಶ್ ಪ್ರಭು, ಶ್ರೀಪಾದ್ ಯಸ್ಸೋ ನಾಯಕ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ, ಶಾಸಕ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಶ್ರೀರಾಮಲು, ಡಾ.ಪ್ರಭಾಕರ ಭಟ್ ಕಲ್ಲಡ್ಕ ಪಾಲ್ಗೊಳ್ಳುವರು.