ಲೋಕಕಲ್ಯಾಣ ಕೈಂಕರ್ಯದಿಂದ ಭಾರತಕ್ಕೆ ವಿಶ್ವಗುರು ಸ್ಥಾನ

< ಕೊಂಡೆವೂರು ಧರ್ಮ ಸಂದೇಶ ಸಭೆಯಲ್ಲಿ ವಿದ್ವಾಂಸ ಉಳಿಯತ್ತಾಯ ವಿಷ್ಣು ಆಸ್ರ ಅಭಿಮತ>

ಉಪ್ಪಳ: ಪ್ರಕೃತಿಯಲ್ಲಿರುವ ಶಕ್ತಿಗಳು ಜೀವಕೋಟಿಗಳನ್ನು ಸಂರಕ್ಷಿಸುತ್ತದೆ ಎಂಬ ಕಲ್ಪನೆ ಭಾರತೀಯ ಪರಂಪರೆಯ ಹಿರಿಮೆಯಾಗಿದೆ. ಪ್ರಾಚೀನ ಕಾಲದಿಂದಲೂ ಭಾರತ ಯಾಗ ಭೂಮಿಯಾಗಿ ಲೋಕೋದ್ಧಾರದ ಕೈಂಕರ್ಯದ ಮೂಲಕ ವಿಶ್ವಗುರುತ್ವಕ್ಕೆ ಪಾತ್ರವಾಗಿತ್ತು ಎಂದು ಹಿರಿಯ ವಿದ್ವಾಂಸ ಉಳಿಯತ್ತಾಯ ವಿಷ್ಣು ಆಸ್ರ ಹೇಳಿದರು.

ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಆರಂಭಗೊಂಡಿರುವ ಅತಿರಾತ್ರ ಸೋಮಯಾಗದ ಪ್ರಥಮ ದಿನವಾದ ಸೋಮವಾರ ಸಂಜೆ ಧರ್ಮ ಸಂದೇಶ ಸಭೆಯಲ್ಲಿ ಮಾತನಾಡಿದರು.
ವೇದಗಳು ಜಗತ್ತಿನ ಸ್ತಂಭಗಳಾಗಿದ್ದು, ಕೊಂಡೆವೂರಿನಲ್ಲಿ ನಡೆಯುತ್ತಿರುವ ವೇದ ಅರ್ಚನೆ ವಿಶಿಷ್ಟವಾಗಿ ನೆಮ್ಮದಿ ನೀಡುತ್ತದೆ. ಅಹಂಕಾರ-ಅಹಂಭಾವ ರಹಿತರಾಗಿ ಬದುಕನ್ನು ಸಾರ್ಥಕಪಡಿಸುವ ಮನಸ್ಸು ಯಾಗಗಳಿಂದ ಹುಟ್ಟಿಕೊಳ್ಳಲಿ ಎಂದು ಆಶಿಸಿದರು.

ಸಮಾರಂಭದಲ್ಲಿ ವಿವಿಧ ಸಮಾಜದ ಪ್ರಮುಖರಾದ ಕೇಶವ ಆಚಾರ್ಯ ಉಳಿಯತ್ತಡ್ಕ(ವಿಶ್ವಕರ್ಮ), ಮಧುಸೂಧನ ಅಯರ್(ಯಾದವ), ರವೀಂದ್ರ ಮನ್ನಿಪ್ಪಾಡಿ(ಕುಲಾಲ), ಉಜಾರು(ಕೊರಗ), ಪದ್ಮನಾಭ ನರಿಂಗಾನ (ಬಾಕುಡ), ನಾರಾಯಣ ಎಂ.(ಮೊಗೇರ) ಅನಂತ ಐಲ (ದೇವಾಡಿಗ), ತಿಮ್ಮಪ್ಪ ಭಂಡಾರಿ(ಭಂಡಾರಿ ಸಮಾಜ), ಕರುಣಾಕರ ಬೆಳ್ಚಪ್ಪಾಡ(ಬೋವಿ), ರಾಮಕೃಷ್ಣ ಮಾಂಬಾಡಿ, ರಘು ಸಫಲ್ಯ(ಗಾಣಿಗ), ಕೃಷ್ಣನ್ ಮುಳ್ಳೇರಿಯ (ದೇವಾಂಗ), ಗೋಪಾಲ ನಿಡಿಂಬಿರಿ (ಮಡಿವಾಳ), ಮಹಾಲಿಂಗ ಜೋಗಿ ಸಜಕಿಲ (ಜೋಗಿ) ಅವರನ್ನು ಸಮಾಜದ ಪರವಾಗಿ ಗಣ್ಯರು ಅಭಿನಂದಿಸಿದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನಗೈದರು. ಕಟೀಲು ಕ್ಷೇತ್ರದ ಕಮಲಾದೇವಿ ಪ್ರಸಾದ ಆಸ್ರಣ್ಣ, ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಅವಧಾನಿ, ಯಾಗ ಸಮಿತಿ ಕಾರ್ಯಾಧ್ಯಕ್ಷ ಮೋನಪ್ಪ ಭಂಡಾರಿ, ಡಾ.ನಾರಾಯಣ್, ಕಾರ್ಯದರ್ಶಿ ಶ್ರೀಧರ ಭಟ್ ಉಪ್ಪಳ, ಪರವರನ್ ಅಚ್ಯುತ್ತನ್ ನಂಬೂದಿರಿ ಉಪಸ್ಥಿತರಿದ್ದರು.

ರಾಮಚಂದ್ರ ಸಿ.ಉಪ್ಪಳ ಸ್ವಾಗತಿಸಿ, ಗಂಗಾಧರ ಮತ್ತು ಪುರುಷೋತ್ತಮ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

ರಾಷ್ಟ್ರದ ಪ್ರಾಚೀನ ಪರಂಪರೆ ಪ್ರತಿಯೊಂದು ಜಾತಿ ವಿಭಾಗಗಳನ್ನೂ ವೃತ್ತಿ ಧರ್ಮದಡಿ ನಿರ್ವಹಿಸುತ್ತಿತ್ತೆಂಬುದರ ಪ್ರತೀಕವಾಗಿ ಯಾಗ ಶಾಲೆಗೆ ಅವರವರ ಕುಲಧರ್ಮಕ್ಕೆ ಅನುಸರಿಸಿ ಯಾಗ ಸಂಬಂಧಿ ವಸ್ತುಗಳನ್ನು ಒದಗಿಸುವ ಮೂಲಕ ಮರು ಚಿಂತನೆಗೆ ಅವಕಾಶ ನೀಡಿರುವುದು ಪ್ರಸ್ತುತವಾಗಿದೆ.
– ಉಳಿಯತ್ತಾಯ ವಿಷ್ಣು ಆಸ್ರ, ಹಿರಿಯ ವಿದ್ವಾಂಸ