ತಾಳೆ ಹಣ್ಣಿನತ್ತ ಜನರ ಚಿತ್ತ

ಕೊಂಡ್ಲಹಳ್ಳಿ: ಬೇಸಿಗೆ ಬಿಸಿಲಿನ ಝಳ, ತಾಪ ಹಾಗೂ ದಾಹ ಶಮನಕ್ಕೆ ಜನರು ಮಜ್ಜಿಗೆ, ನೀರು, ತಂಪು ಪಾನೀಯ ಮೊರೆ ಹೋಗುತ್ತಿದ್ದಾರೆ.

ಬೇಸಿಗೆ ತಿಂಗಳಲ್ಲಿ ಮಾತ್ರ ಫಲಕ್ಕೆ ಬರುವ ತಾಳೆ ಕಾಯಿ, ದೇಹದ ಉಷ್ಣ ನಿವಾರಣೆಗೆ ಪರಿಣಾಮಕಾರಿ. ಸೀಮಾಂಧ್ರ ಗಡಿಯ ರಾಯದುರ್ಗ ಸುತ್ತಲಿನ ಪ್ರದೇಶದದಿಂದ ತಾಳೆ ಮಾರಾಟಗಾರರು ಆಗಮಿಸುತ್ತಾರೆ. 20 ರೂಪಾಯಿಗೆ ಒಂದರಂತೆ ತಾಳೆ ಮಾರಾಟವಾಗುತ್ತವೆ. ವರ್ಷಕ್ಕೊಂದು ಬಾರಿ ದೊರೆಯುವ ಈ ಕಾಯಿ ಖರೀದಿಸಲು ಜನ ಮುಗಿಬೀಳುತ್ತಾರೆ.

ಇದು ಉರಿಮೂತ್ರೆ ಬಾಧೆಯಿಂದ ನರಳುವರಿಗೆ ದಿವ್ಯೌಷಧ. ಬಿಸಿಲ ನಾಡಲ್ಲಿ ಇದಕ್ಕೆ ಬೇಡಿಕೆ ಇದೆ ಎನ್ನುತ್ತಾರೆ ತಾಳೆಹಣ್ಣು ಮಾರಾಟಗಾರ ಸೀಮಾಂಧ್ರದ ಗಲ್‌ಗಲ್ ಗ್ರಾಮದ ಓಬಳೇಶ್.