ಸೋಲೇ ಗೆಲುವಿನ ರಹದಾರಿ

ಕೊಂಡ್ಲಹಳ್ಳಿ: ಸೋಲು ಅಂತಿಮವಲ್ಲ, ಅದು ಗೆಲುವಿನ ಹೆದ್ದಾರಿ ಎಂದು ನಿವೃತ್ತ ಮುಖ್ಯಶಿಕ್ಷಕ ಬಿ.ಬೀರಪ್ಪ ತಿಳಿಸಿದರು.

ಕನಕ ನೌಕರರ ಸಂಘದಿಂದ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ, ಪಿಯು ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಾಧನೆ ಎಂಬುದು ತಪಸ್ಸಿನಂತೆ. ನಿರಂತರ ಪ್ರಯತ್ನ ಹಾಗೂ ದೈವಬಲದಿಂದ ಉನ್ನತ ಗುರಿ ತಲುಪಲು ಸಾಧ್ಯ. ಹಾಲುಮತದ ಸಮುದಾಯ ಇತ್ತೀಚೆಗೆ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವುದು ಸಂತಸದ ಸಂಗತಿ ಎಂದರು.

ಜಿಲ್ಲಾ ಸಮಾಜ ಕಲ್ಯಾಣಧಿಕಾರಿ ಎಚ್.ನಾಗರಾಜ್ ಮಾತನಾಡಿ, ತಾಯಿ, ತಂದೆ, ಗುರು, ಹಿರಿಯರಿಗೆ ಗೌರವ ನೀಡಬೇಕು. ಜೀವನದಲ್ಲಿ ಉತ್ತಮ ಮೌಲ್ಯ ರೂಢಿಸಿಕೊಳ್ಳಬೇಕು. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲು ಸಾಧ್ಯ ಎಂದು ತಿಳಿಸಿದರು.

ವಿಷಯ ಪರಿವೀಕ್ಷಕ ಎಚ್.ಟಿ.ಚಂದ್ರಣ್ಣ ಮಾತನಾಡಿ, ದೊರೆಯುವ ಅವಕಾಶಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ನೌಕರರ ಸಂಘದ ಅಧ್ಯಕ್ಷ ಕೆ.ಟಿ.ರೇವಣ್ಣ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕರಾದ ಬಾಲಚಂದ್ರಪ್ಪ, ಎಸ್.ರಾಮಣ್ಣ, ವಿ.ಮೇಘನಾಥ್, ಕೆ.ಎಂ.ತಿಪ್ಪೇಸ್ವಾಮಿ, ಮುಖಂಡರಾದ ಬಿ.ಎಸ್.ಬಸವರಾಜಪ್ಪ, ಎಂ.ಜಿ.ಸಿದ್ದಪ್ಪ, ಕೆ.ವಿ.ವೆಂಕಟೇಶ್, ಬಿ.ತಿಪ್ಪೇಸ್ವಾಮಿ ಇತರರಿದ್ದರು.