More

  ಹಳ್ಳ ಹಿಡಿಯುತ್ತಿರುವ ಮೌಲ್ಯಗಳು: ಶಾಸಕ ಎಟಿಆರ್ ಕಳವಳ

  ಅರಕಲಗೂಡು: ದೇಶದ ಎಲ್ಲ ಕ್ಷೇತ್ರಗಳಲ್ಲೂ ಮೌಲ್ಯಗಳು ಹಳ್ಳ ಹಿಡಿಯುತ್ತಿದ್ದು ಕಟ್ಟಕಡೆಯದಾಗಿ ಇದಕ್ಕೆ ನ್ಯಾಯಾಂಗ ವ್ಯವಸ್ಥೆ ಕೂಡ ಹೊರತಾಗಿಲ್ಲ ಎಂದು ಶಾಸಕ ಎ.ಟಿ. ರಾಮಸ್ವಾಮಿ ಕಳವಳ ವ್ಯಕ್ತಪಡಿಸಿದರು.

  ತಾಲೂಕಿನ ಕೊಣನೂರು ಬಿ.ಎಂ. ಶೆಟ್ಟಿ ಸರ್ಕಾರಿ ಪ್ರಥಮ‌ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಭಾವಗೀತೆ, ರಸಪ್ರಶ್ನೆ ಹಾಗೂ ಜನಪದ ಸಮೂಹ ನೃತ್ಯ ಸ್ಪರ್ಧೆಗಳ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

  ಅಭಿವೃದ್ಧಿ ಕೆಲಸಗಳು ಈಗ ಯಾರಿಗೂ ಬೇಡವಾಗುತ್ತಿದ್ದು ಎಲ್ಲರೂ ಸ್ವಾರ್ಥಿಗಳೇ ಆಗಿದ್ದಾರೆ.‌ ದೇಶಕ್ಕೆ ತನ್ನದೇನು ಕೊಡುಗೆ ಎನ್ನುವ ಚಿಂತನೆ ಇಲ್ಲವಾಗಿದ್ದು ಅನ್ಯಾಯ, ಅಕ್ರಮ, ಭ್ರಷ್ಟಾಚಾರಗಳೇ ವಿಜೃಂಭಿಸುತ್ತಿದ್ದು ಪ್ರಾಮಾಣಿಕತೆ ಮರೆಯಾಗುತ್ತಿದೆ. ಇದು ಸ್ವಾಸ್ಥ್ಯ ಸಮಾಜಕ್ಕೆ ಮಾರಕವಾಗುತ್ತಿದೆ ಎಂದು ಬೇಸರ‌‌ ವ್ಯಕ್ತಪಡಿಸಿದರು.

  ಮೌಲ್ಯಗಳು ಮತ್ತು ಪ್ರಾಮಾಣಿಕತೆ ಯಾರಲ್ಲೂ ಉಳಿದಿಲ್ಲ, ಬಡವರಿಗೊಂದು ಬಲಾಢ್ಯರಿಗೊಂದು ಕಾನೂನಾಗುತ್ತಿದೆ. ಅನ್ಯಾಯಕ್ಕೊಳಗಾಗಿ ಕಟ್ಟಕಡೆಯದಾಗಿ ನ್ಯಾಯಾಲಯದ ಮೊರೆ ಹೋದರೂ ನ್ಯಾಯ ಸಿಗದ ವಾತಾವರಣವಿದೆ. ಧಾರ್ಮಿಕ ಕ್ಷೇತ್ರದಲ್ಲೂ ಮೌಲ್ಯ ಮಸುಕಾಗಿದೆ. ಇನ್ನು ಸಾರ್ವಜನಿಕ ಕ್ಷೇತ್ರದಲ್ಲಿ ಹೇಳಲಸಾಧ್ಯವಾಗುತ್ತಿದೆ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಕೆಟ್ಟದರ ಕುರಿತು ಧ್ವನಿ‌ ಎತ್ತದಿದ್ದರೆ ಬದುಕು ಸಾರ್ಥಕತೆ ಪಡೆಯುವುದಿಲ್ಲ ಎಂದು ಪ್ರತಿಪಾದಿಸಿದರು.

  ವಿಶ್ರಾಂತ ಕುಲಪತಿ ಪ್ರೊ. ಬಿ.ಕೆ. ಅನಂತನಾರಾಯಣ ಮಾತನಾಡಿದರು. ಪ್ರಾಂಶುಪಾಲ ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ತಾಪಂ‌ ಸದಸ್ಯ ಇಮ್ರಾನ್ ಮೊಕ್ತಾರ್, ಸಮಾಜ ಸೇವಕ ಹಾಗೂ ಕನ್ನಡಪರ‌ ಹೋರಾಟಗಾರ ಸಿ.ಕೆ. ಮೂರ್ತಿ, ಉದ್ಯಮಿ ಎಂ.ಆರ್. ರಂಗಸ್ವಾಮಿ, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಚೌಡೇಗೌಡ,‌ ಸದಸ್ಯರಾದ ಮೊಗಣ್ಣಗೌಡ, ಪಾಂಡು, ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.
  ಕಾರ್ಯಕ್ರಮದಲ್ಲಿ ‘ಕೊಳಲು’ ಕಾಲೇಜು ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಲಾಯಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts