
ದೊಡ್ಡಬಳ್ಳಾಪುರ: ಕರ್ನಾಟಕದ ನಾಡಧ್ವಜ ಸುಟ್ಟು ಕನ್ನಡಿಗರ ಹಾಗೂ ಮರಾಠಿಗರ ಕೋಮು ಸೌಹಾರ್ದ ಕದಡಿ ಗಡಿಯಲ್ಲಿ ಉದಿಗ್ನ ಪರಿಸ್ಥಿತಿ ಉಂಟುಮಾಡುತ್ತಿರುವ ಶಿವಸೇನೆ ಹಾಗೂ ಎಂಇಎಸ್ ಸಂಘಟನೆ ನಿಷೇಧಿಸಬೇಕೆಂದು ಕರವೆ ಪ್ರವೀಣ್ ಶೆಟ್ಟಿ ಬಣದ ಕಾರ್ಯದರ್ಶಿ ರಾಜಘಟ್ಟ ರವಿ ಒತ್ತಾಯಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ದಿಂದ ತಾಲೂಕು ಕಚೇರಿ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಕನ್ನಡಿಗರು ಶಾಂತಿ ಪ್ರಿಯರು, ಸಹಿಷ್ಣುಗಳು. ಆದರೆ ಗಡಿಭಾಗಗಳಲ್ಲಿರುವ ರಾಜ್ಯಗಳು ವಿನಾಕಾರಣ ಸದಾ ಒಂದಿಲ್ಲೊಂದು ವಿಚಾರದಲ್ಲಿ ಕೆದಕಿ ಕನ್ನಡಿಗರ ಮೇಲೆ ಆಕ್ರಮಣ ಮಾಡಿ, ಕನ್ನಡಿಗರ ಸಹನೆ ಕೆಣಕುತ್ತಿದ್ದಾರೆ. ಇತ್ತೀಚೆಗಷ್ಟೆ ಮಹಾರಾಷ್ಟ್ರದಲ್ಲಿ ನಾಡ ಧ್ವಜ ಸುಟ್ಟು, ರಾಜ್ಯದ ಮುಖ್ಯಮಂತ್ರ್ರಿಗಳ ಪ್ರತಿಕೃತಿ ದಹಿಸಿ, ಗಡಿ ಭಾಗಗಳಲ್ಲಿ ಕನ್ನಡ ಚಲನಚಿತ್ರದ ಪ್ರದರ್ಶನ ನಿಲ್ಲಿಸಿ ನಾಮಫಲಕಗಳಿಗೆ ಮಸಿ ಬಳಿದು ಕನ್ನಡಿಗರ ಸ್ವಾಭಿಮಾನ ಕೆಣಕ್ಕಿದ್ದಾರೆ ಎಂದು ಕಿಡಿಕಾರಿದರು.
ಕರ್ನಾಟಕ ಕಾಂಗ್ರೆಸ್ ಪಕ್ಷ ಕೇಂದ್ರದ ಹೈಕಮಾಂಡ್ ಮೇಲೆ ಒತ್ತಡ ಹೇರಿ ಶಿವಸೇನೆಗೆ ನೀಡಿರುವ ಬೆಂಬಲ ಹಿಂಪಡೆದು ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ನೀಡಬೇಕಿದೆ. ದೇಶದ ಒಕ್ಕೂಟ ವ್ಯವಸ್ಥೆಗೆ ಮೂಲ ಉದ್ದೇಶ ಬುಡಮೇಲು ಮಾಡುತ್ತಿರುವ ಶಿವಸೇನೆ ಹಾಗೂ ಎಂಇಎಸ್ ಸಂಘಟನೆ ನಿಷೇಧಿಸಬೇಕೆಂದು ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್ ಮಾತನಾಡಿ, ಕೇರಳ ರಾಜ್ಯದ ಬೇಟಿಗೆ ತೆರಳಿದ್ದ ರಾಜ್ಯದ ಮುಖ್ಯಮಂತ್ರಿ ಮೇಲೆ ಹಲ್ಲೆಗೆ ಮುಂದಾಗಿದ್ದ ಘಟನೆ ಸಂಭವಿಸಿದ್ದು, ಒಂದು ರಾಜ್ಯದ ಮುಖ್ಯಮಂತ್ರಿಗೆ ಸೂಕ್ತ ಭದ್ರತೆ ಕಲ್ಪಿಸಲಾಗದ ಕೇರಳ ಸರ್ಕಾರದ ಮುಖ್ಯಮಂತ್ರಿ ವೈಯಕ್ತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ತಮಿಳುನಾಡಿನಲ್ಲಿ ಕನ್ನಡ ಧ್ವಜವನ್ನು ವಾಹನದಲ್ಲಿ ಕಟ್ಟಿದ್ದಕ್ಕೆ ವಾಹನ ಚಾಲಕನ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಮತ್ತೆ ಇಂತಹ ಘಟನೆ ಕಂಡುಬಂದಲ್ಲಿ ಪರಿಣಾಮ ಎದುರಿಸಬೇಕಾಗುವುದು ಎಂದು ಎಚ್ಚರಿಕೆ ನೀಡಿದರು.
ಕರವೇ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ರಮೇಶ್ ವಿರಾಜ್, ತಾಲೂಕು ಪ್ರಧಾನ ಕಾರ್ಯದರ್ಶಿ ಎಸ್‌ಎಲ್‌ಎನ್ ವೇಣು, ಕಾರ್ಯದರ್ಶಿ ಜೋಗಹಳ್ಳಿ ಅಮ್ಮ, ತಾಲೂಕು ಗೌರವಾಧ್ಯಕ್ಷ ಪು.ಮಹೇಶ್, ಕಾನೂನು ಸಲಹೆಗಾರ ಆನಂದ್, ಖಜಾಂಚಿ ಆನಂದ್, ಸಂಚಾಲಕ ಮಂಜುನಾಥ್, ನಗರಾಧ್ಯಕ್ಷ ಶ್ರೀನಗರ ಬಶೀರ್, ನಗರ ಪ್ರಧಾನ ಕಾರ್ಯದರ್ಶಿ ಸುಬ್ರಮಣಿ, ಕಾರ್ಯಕರ್ತರಾದ ಮುರಳಿ, ರವಿ, ಕೋಡಹಳ್ಳಿ ಬಾಬು, ದಯಾನಂದ್, ಕರಾಟೆ ಮಂಜು, ರಾಘವೇಂದ್ರ, ಘಾಟಿ ತಿಮ್ಮರಾಜು ಮತ್ತಿತರರಿದ್ದರು.