ಬೆಳ್ಳುಬ್ಬಿ ಬಿಜೆಪಿಗೆ ಸೇರ್ಪಡೆ

ಕೊಲ್ಹಾರ: ಬಸವನಬಾಗೇವಾಡಿ ಮತಕ್ಷೇತ್ರದ ಮಾಜಿ ಶಾಸಕ ಎಸ್.ಕೆ. ಬೆಳ್ಳುಬ್ಬಿ ಭಾನುವಾರ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಯಾದರು.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಾತನಾಡಿ, ಈ ಹಿಂದೆ ಆದ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಯಾವುದೇ ತಪ್ಪುಗಳು ಆಗದಂತೆ ಮುಂಜಾಗ್ರತೆ ವಹಿಸಿ ಬೆಳ್ಳುಬ್ಬಿಯವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಒದಗಿಸಲಾಗುವುದು. ಬೆಳ್ಳುಬ್ಬಿಯವರ ಅವಶ್ಯಕತೆ ಬಿಜೆಪಿಗಿದೆ. ಮರಳಿ ಬಿಜೆಪಿ ಸೇರಲು ಬೆಳ್ಳುಬ್ಬಿಯವರು ಮನಸ್ಸು ಮಾಡಿರುವುದು ಸಂತಸ ತಂದಿದೆ ಎಂದರು. ಸಿಹಿ ವಿತರಿಸಿ ಹೂಮಾಲೆ ಹಾಕಿ ಬೆಳ್ಳುಬ್ಬಿ ಅವರನ್ನು ಬಿಜೆಪಿಗೆ ಬರಮಾಡಿಕೊಳ್ಳಲಾಯಿತು.

ಮಾಜಿ ಸಚಿವ ಗೋವಿಂದ ಕಾರಜೋಳ, ಶಾಸಕ ಮುರುಗೇಶ ನಿರಾಣಿ, ಮುಖಂಡರಾದ ಎಸ್.ಐ. ಚಿಕ್ಕನಗೌಡರ, ಸಂಗನಗೌಡ ಚಿಕ್ಕೊಂಡ ಹಾಗೂ ಕ್ಷೇತ್ರದ ವಿವಿಧ ಗ್ರಾಮಗಳ ಪ್ರಮುಖರು ಇದ್ದರು.