ಕೊಳ್ಳೇಗಾಲದಲ್ಲಿ ಮತದಾನ ಜಾಗೃತಿ ಜಾಥಾ

ಕೊಳ್ಳೇಗಾಲ: ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆ ಪಟ್ಟಣದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿಲಯದ ವಿದ್ಯಾರ್ಥಿಗಳು ಶುಕ್ರವಾರ ಮತದಾನದ ಪ್ರಾಮುಖ್ಯತೆ ಕುರಿತು ಜಾಥಾ ನಡೆಸಿದರು.

ತಾಲೂಕು ಪಂಚಾಯಿತಿ ಕಚೇರಿ ಮುಂಭಾಗ ಜಾಥಾಗೆ ತಾ.ಪಂ.ಇಒ ಉಮೇಶ್ ಚಾಲನೆ ನೀಡಿ ಮಾತನಾಡಿ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನದ ಹಕ್ಕನ್ನು ಪ್ರತಿಯೊಬ್ಬರೂ ಅರಿಯಬೇಕು. ಎಲ್ಲರೂ ತಪ್ಪದೆ ಸಕ್ರಿಯವಾಗಿ ಮತದಾನದಲ್ಲಿ ಪಾಲ್ಗೊಳ್ಳುವ ಮೂಲಕ ಚುನಾವಣೆ ವ್ಯವಸ್ಥೆಗೆ ಪರಿಪೂರ್ಣ ಸಹಕಾರ ನೀಡಬೇಕು ಎಂದು ಕರೆ ನೀಡಿದರು.

ಪರಿಶಿಷ್ಟ ವರ್ಗಗಳ ತಾಲೂಕು ಕಲ್ಯಾಣಾಧಿಕಾರಿ ಗಂಗಾಧರ್ ಮಾತನಾಡಿ, 18 ವರ್ಷಕ್ಕೆ ಕಾಲಿಟ್ಟ ಯುವ ಮತದಾರರು ಕಡ್ಡಾಯವಾಗಿ ಮಾ.16ರೊಳಗೆ ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಲೋಕಸಭಾ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಬೇಕು ಎಂದು ಕಿವಿ ಮಾತು ಹೇಳಿದರು.

ತಾ.ಪಂ.ಕಚೇರಿಯಿಂದ ಆರಂಭಗೊಂಡ ಜಾಥಾ ಎಂಜಿಎಸ್‌ವಿ ಕಾಲೇಜು ರಸ್ತೆ, ಡಾ.ರಾಜ್ ಕುಮಾರ್, ಡಾ.ಅಂಬೇಡ್ಕರ್ ರಸ್ತೆ, ಎಡಿಬಿ ವೃತ್ತ, ಪಿಡಬ್ಲ್ಯೂಡಿ ಕಚೇರಿ ರಸ್ತೆ ಮೂಲಕ ಸಾಗಿತು. ವಿದ್ಯಾರ್ಥಿಗಳು ಮತದಾನ ಕುರಿತು ಭಿತ್ತಿಪತ್ರ ಹಿಡಿದು ಜಾಗೃತಿ ಮೂಡಿಸಿದರು.

ತಾಪಂ ನರೇಗಾ ಯೋಜನೆ ಸಹಾಯಕ ನಿರ್ದೇಶಕ ಲಿಂಗರಾಜು, ಹನೂರು ಬಿಇಒ ಸ್ವಾಮಿ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಜಯಕಾಂತ, ಪರಿಶಿಷ್ಟ ವರ್ಗಗಳ ಇಲಾಖೆಯ ನಿಲಯ ಪಾಲಕರಾದ ನಾಗರಾಜು, ಚೆಲುವರಾಜು, ಸಿದ್ದಮಾದೇವು, ಮಣಿ, ಗೋವಿಂದರಾಜು, ಮೂಕಪ್ಪ, ರಾಜಶೇಖರ್, ಸುಮತಿ, ಭವ್ಯ, ಶಿವಮ್ಮ ಸೇರಿದಂತೆ ಇತರರು ಹಾಜರಿದ್ದರು.