ಅಸ್ವಸ್ಥರು ಗುಣಮುಖರಾಗಲೆಂದು ಪೂಜೆ

ಕೊಳ್ಳೇಗಾಲ: ಹನೂರು ತಾಲೂಕಿನ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇಗುಲದಲ್ಲಿ ವಿಷಯುಕ್ತ ಪ್ರಸಾದ ಸೇವಿಸಿ ಅಸ್ವಸ್ಥಗೊಂಡು ಜೀವನ್ಮರಣದ ಹೋರಾಟ ನಡೆಸುತ್ತಿರುವವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿ ಪಟ್ಟಣದ ಮಳಿಗೆ ಮಾರಮ್ಮ ದೇವಾಲಯದಲ್ಲಿ ಭಾನುವಾರ ಮೃತ್ಯುಂಜಯ ಹೋಮ ನಡೆಸಲಾಯಿತು.

ಪಟ್ಟಣದ ಆಂಧ್ರ ದೇವಾಂಗ ಹಿತರಕ್ಷಣಾ ವೇದಿಕೆ ಆಯೋಜಿಸಿದ್ದ ಮೃತ್ಯುಂಜಯ ಹೋಮ, ಹವನ, ದೇವಾಂಗ ಕುಲಗುರು ಪೂಲಾ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆಯಿತು. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನದವರೆಗೂ ಹತ್ತಕ್ಕೂ ಹೆಚ್ಚು ಅರ್ಚಕರ ತಂಡ ಹೋಮ, ಹವನ ನಡೆಸಿ, ಅಸ್ವಸ್ಥರ ಜೀವ ಉಳಿವಿಗೆ ಪ್ರಾರ್ಥಿಸಿದರು.

ಇದೇ ವೇಳೆ ದೇವಾಂಗಪೇಟೆ ಬಡಾವಣೆಯ ನೂರಾರು ನಿವಾಸಿಗಳು ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ಅಸ್ವಸ್ಥರನ್ನು ರಕ್ಷಿಸುವಂತೆ ದೇವರಲ್ಲಿ ಬೇಡಿದರು.

ಮಾಜಿ ಶಾಸಕ ಭಾರತಿ ಶಂಕರ್, ಆಂಧ್ರ ದೇವಾಂಗ ಹಿತರಕ್ಷಣಾ ವೇದಿಕೆ ಅಧ್ಯಕ್ಷ ರವಿ, ಉಪಾಧ್ಯಕ್ಷ ರವೀಂದ್ರನಾಥ್, ಪದಾಧಿಕಾರಿಗಳಾದ ರಂಗಪ್ಪ, ಬಾಲಚಂದ್ರ, ಮಲ್ಲಪ್ಪ, ಪಿ.ಡಿ. ರುದ್ರಯ್ಯ, ಸಿ. ಶಿವಕುಮಾರ್, ಸಿ.ಡಿ. ಬಾಬು, ನಾಗರಾಜು ಸೇರಿದಂತೆ ಇತರರು ಭಾಗವಹಿಸಿದ್ದರು.