ಕೊಳ್ಳೇಗಾಲ: ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧ ವಿದ್ಯಾ ಸಂಸ್ಥೆಗಳಲ್ಲಿ ಮಂಗಳವಾರ ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಪರ ಶಾಸಕ ಎ.ಆರ್.ಕೃಷ್ಣಮೂರ್ತಿ ಮತಯಾಚಿಸಿದರು.
ಪಟ್ಟಣದ ಶ್ರೀ ವಾಸವಿ ವಿದ್ಯಾ ಸಂಸ್ಥೆ, ವಿಶ್ವಚೇತನ ಸಮೂಹ ವಿದ್ಯಾ ಸಂಸ್ಥೆ, ಸರ್ಕಾರಿ ಎಸ್.ವಿ.ಕೆ ಕಾಲೇಜು, ಸಂತ ಫ್ರಾನಿಸ್ಸ್ ಶಾಲೆ, ಆರ್.ಸಿ.ಎಂ ಶಾಲೆ, ಮಾನಸ ಶಿಕ್ಷಣ ಸಂಸ್ಥೆ, ಜೆಎಸ್‌ಎಸ್ ಮಹಿಳಾ ಕಾಲೇಜು, ಲಯನ್ಸ್ ಕಾಲೇಜು, ಎಂಜಿಎಸ್‌ವಿ ಜೂನಿಯರ್ ಕಾಲೇಜು, ಶ್ರೀ ಮಹದೇಶ್ವರ ಪ್ರಥಮ ದರ್ಜೆ ಕಾಲೇಜು, ವರ್ಮ ಐಟಿಐ ಕಾಲೇಜು, ಮಹದೇಶ್ವರ ಐಟಿಐ ಕಾಲೇಜುಗಳಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಪ್ರಚಾರ ಮಾಡಿದರು.
ಶ್ರೀ ವಾಸವಿ ವಿದ್ಯಾ ಸಂಸ್ಥೆಗೆ ಭೇಟಿ ನೀಡಿದ್ದ ವೇಳೆ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, 5 ಬಾರಿ ವಿಧಾನಪರಿಷತ್‌ಗೆ ಜನ ಸೇವೆ ಮಾಡಲು ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ನಿಂತಿರುವ ಮರಿತಿಬ್ಬೇಗೌಡರು ತಮಗೆಲ್ಲ ತಿಳಿದವರು. ಸರಳ, ಸಜ್ಜನ ಹಾಗೂ ಪ್ರಬುದ್ಧ ರಾಜಕಾರಣಿ. ವಿಧಾನ ಪರಿಷತ್ ಸದಸ್ಯರಾಗಿ ಪದವೀಧರು, ಶಿಕ್ಷಕರ ಪರವಾಗಿ ಸದನದಲ್ಲಿ ಧ್ವನಿ ಎತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಶಿಕ್ಷಕರ ಬೇಡಿಕೆಯ ಪೂರಕವಾಗಿ ಹಿಂದಿನಿಂದಲೂ ಸ್ಪಂದಿಸಿದೆ. ಮುಂದೆಯು ನಿಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತದೆ ಎಂದರು. ಆದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡರಿಗೆ ನಿಮ್ಮ ಮೊದಲ ಪ್ರಾಶಸ್ತ್ಯದ ಮತ ನೀಡುವಂತೆ ಮನವಿ ಮಾಡಿದರು.
ಉಗ್ರಾಣ ನಿಗಮ ಅಧ್ಯಕ್ಷ ಎಸ್.ಜಯಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಜಿಲ್ಲಾಧ್ಯಕ್ಷ ಚಂದ್ರು, ನಗರಸಭೆ ಸದಸ್ಯರಾದ ಶಂಕರನಾರಾಯಣಗುಪ್ತ, ಮಂಜುನಾಥ್ ಹಾಗೂ ಶಿಕ್ಷಕರು ಇದ್ದರು.