ಕೊಳ್ಳೇಗಾಲ ; ತಾಲೂಕಿನ ಶಿವನಸಮುದ್ರ ಗ್ರಾಮದ ಸಮೂಹ ದೇವಾಲಯಗಳಲ್ಲಿ ಒಂದಾದ ಮುಜರಾಯಿ ಇಲಾಖೆಗೆ ಸೇರಿದ ಆದಿ ಶಕ್ತಿ ಮಾರಮ್ಮನ ದೇವಾಲಯದಲ್ಲಿ ನಿಯಮ ಬಾಹಿರವಾಗಿ ಭಕ್ತರಿಗೆ ತೀರ್ಥ ಬಾಟಲಿ ಮಾರಾಟ ಮಾಡಲಾಗುತ್ತಿದ್ದರೂ ಅಧಿಕಾರಿ ವರ್ಗ ಕಣ್ಮುಚ್ಚಿ ಕುಳಿತಿದೆ.
ದೇವಸ್ಥಾನಕ್ಕೆ ಸಂಬಂಧಿಸಿದಂತೆ ಭಕ್ತರಿಗೆ ನೀಡುವ ಪ್ರಸಾದ, ಅಂಗಡಿ ಮಳಿಗೆಗಳು ಇನ್ನಿತರ ಯಾವುದೇ ವಸ್ತುಗಳನ್ನು ಮಾರಾಟ ಮಾಡಬೇಕೆಂದರೂ ನಿಯಮಾನುಸಾರ ಮಾಡಬೇಕಿರುತ್ತದೆ. ಮುಜರಾಯಿ ಇಲಾಖೆ ನಿಯಮದಂತೆ ಟೆಂಡರ್ ಪ್ರಕ್ರಿಯೆಯಲ್ಲಿ ತೀರ್ಥ ಬಾಟಲಿ ಮಾರಾಟಕ್ಕೆ ಯಾವುದೇ ಟೆಂಡರ್ ಆಗಿಲ್ಲ. ಇಷ್ಟಾದರೂ ಟೆಂಡರ್‌ದಾರರು ಅಕ್ರಮವಾಗಿ ತೀರ್ಥ ಬಾಟಲಿಯನ್ನು ಭಕ್ತರಿಗೆ ಒಂದು ಬಾಟಲಿಗೆ 20 ರೂ.ನಂತೆ ಮಾರಾಟ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಪ್ರಸಾದದ ಜತೆ ಮಾರಾಟ: ಶ್ರೀ ಆದಿಶಕ್ತಿ ಮಾರಮ್ಮನ ದೇವಾಲಯಕ್ಕೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಾರೆ. ಭಕ್ತಿ-ಭಾವದಿಂದ ದೇವಾಲಯಕ್ಕೆ ಆಗಮಿಸಿ ದೇವರ ಸೇವೆ ಮಾಡುತ್ತಾರೆ. ಇಂತಹ ಮುಗ್ಧ ಜನರಿಗೆ ನೀರಿಗೆ ಕುಂಕುಮ ಬೆರೆಸಿ ತೆಳುವಾದ ಕೆಂಪು ಬಣ್ಣದ ನೀರನ್ನು ಬಾಟಲಿನಲ್ಲಿ ತುಂಬಿ ತೀರ್ಥ ಎಂದು ಲಾಡು, ಕಲ್ಲುಸಕ್ಕರೆ ಜತೆಗೆ ನೀಡಲಾಗುತ್ತಿದೆ.
ಸಿಸಿ ಕ್ಯಾಮರಾವಿದ್ದರೂ ಪ್ರಯೋಜವಿಲ್ಲ: ಸುರಕ್ಷತೆ ದೃಷ್ಟಿಯಿಂದ ಮುಜರಾಯಿ ಇಲಾಖೆ ದೇವಾಲಯದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದೆ. ಇದರಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ದೇವಾಲಯಕ್ಕೆ ಸಂಬಂಧಿಸಿದ ಸಮೂಹ ದೇವಾಲಯಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆಗಾಗ್ಗೆ ವೀಕ್ಷಿಸುತ್ತಿರಬೇಕು. ದೇವರ ದರ್ಶನ ಭಕ್ತರಿಗೆ ವ್ಯವಸ್ಥಿತವಾದ ಸೇವೆ ಸಿಗುತ್ತಿದೆಯೇ? ಎಂದು ಖಾತ್ರಿಪಡಿಸಿಕೊಳ್ಳಬೇಕು. ಆದರೆ, ಭಕ್ತರಿಗೆ ನಿಯಮಬಾಹಿರವಾಗಿ ತೀರ್ಥ ಬಾಟಲಿ ಮಾರಾಟ ಮಾಡಿ ಹಣ ವಸೂಲಿ ಮಾಡುತ್ತಿದ್ದರು ಸಹ ಜಾಣಕುರುಡು ಪ್ರದರ್ಶಿಸುತ್ತಿರುವುದು ಅನುಮಾನಕ್ಕೀಡು ಮಾಡಿದೆ.