ಕೊಳ್ಳೇಗಾಲ: ತಾಲೂಕಿನ ಮಧುವನಹಳ್ಳಿ ಗ್ರಾಮದ ಆರವನಪುರ ಬೀದಿಯಲ್ಲಿ ಕಲುಷಿತ ನೀರು ಸೇವಿಸಿ ಕಳೆದ ಎರಡು ದಿನಗಳಿಂದ 15ಕ್ಕೂ ಹೆಚ್ಚು ಜನರಿಗೆ ವಾಂತಿ, ಭೇದಿ ಕಾಣಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕೊಳ್ಳೇಗಾಲ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಆರವನಪುರ, ಉಪ್ಪಾರ ಬಡಾವಣೆಯಲ್ಲಿ ಗುರುವಾರದಿಂದ ಕೆಲವರಿಗೆ ವಾಂತಿ, ಭೇದಿ ಆರಂಭವಾಗಿದೆ. ಶನಿವಾರವೂ ಸಹ ಆರವನಪುರದ ಬೀದಿಯ ರಶ್ಮಿ ಹಾಗೂ ಅವರ ಪುತ್ರಿ ನಿಖಿತಾ ಕೊಳ್ಳೇಗಾಲ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಇನ್ನು ಕೆಲವರು ಚಿಕಿತ್ಸೆ ಪಡೆದು ಗ್ರಾಮಕ್ಕೆ ಹಿಂತಿರುಗಿದ್ದಾರೆ.
ಮಾಹಿತಿ ತಿಳಿದ ಮಧುವನಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಹರೀಶ್ ತಂಡ ಆರವನಪುರಕ್ಕೆ ಭೇಟಿ ನೀಡಿ ನೀರನ್ನು ಪರೀಕ್ಷೆಗೊಳಪಡಿಸಿದಾಗ ನೀರು ಕಲುಷಿತ ಆಗಿರುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ನೀರಿನ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದ್ದು, ಕುಡಿಯಲು ಬೇರೆ ನೀರು ಬಳಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಮನೆ ಮನೆಗೆ ಭೇಟಿ: ಆರವನಪುರಕ್ಕೆ ಸರಬರಾಜು ಆಗುತ್ತಿದ್ದ ನೀರು ಕಲುಷಿತವಾಗಿದೆ ಎಂದು ತಿಳಿದ ಕೂಡಲೇ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಮಾಹಿತಿ ಪಡೆಯುತ್ತಿದ್ದಾರೆ. ಅಲ್ಲದೆ, ನೀರನ್ನು ಕಾಯಿಸಿ ಕುಡಿಯುವಂತೆ ಅರಿವು ಮೂಡಿಸುತ್ತಿದ್ದಾರೆ.
ವಾಂತಿ, ಭೇದಿ ಪ್ರಕರಣ ಬೆಳಕಿಗೆ ಬಂದ ಕೂಡಲೇ ಆರವನಪುರ ಬೀದಿಯ ಸರಬರಾಜಗುತ್ತಿದ್ದ ನೀರನ್ನು ಪರೀಕ್ಷೆಗೊಳಪಡಿಸಲಾಗಿತ್ತು. ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿ ಬಂದಿದ್ದರಿಂದ ತಕ್ಷಣ ಸರಬರಾಜು ಸ್ಥಗಿತಗೊಳಿಸಿದ್ದೇವೆ. ಟ್ಯಾಂಕರ್ ಮೂಲಕ ನೀರು ಕೊಡಲು ಸೂಚಿಸಿದ್ದೇನೆ.
ಶ್ರೀನಿವಾಸ್, ಇಒ, ತಾ.ಪಂ. ಕೊಳ್ಳೇಗಾಲಗುರುವಾರದಿಂದ ಇಲ್ಲಿಯವರೆಗೆ 15 ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ. ಈ ಸುದ್ದಿ ತಿಳಿಯುತ್ತಿದಂತೆ ಆರವನಪುರ ಬೀದಿಯ ಅಂಗನವಾಡಿ ಕೇಂದ್ರದಲ್ಲಿ ತಾತ್ಕಾಲಿಕವಾಗಿ ಆಸ್ಪತ್ರೆ ತೆರೆದಿದ್ದೇವೆ. ವ್ಯೆದ್ಯರಾದ ಅರುಣ್ ರಾಟೆ ಚಿಕಿತ್ಸೆ ನೀಡುತ್ತಿದ್ದಾರೆ. ಆತಂಕ ಪಡುವ ಅಗತ್ಯವಿಲ್ಲ.
ಗೋಪಾಲ್, ಟಿಎಚ್‌ಒ, ಕೊಳ್ಳೇಗಾಲ.ಆರವನಪುರ ಬೀದಿಯ ಕುಡಿಯುವ ನೀರಿನ ಬೋರ್‌ವೆಲ್ ಪರಿಶೀಲಿಸಿದಾಗ ನೀರು ಕಲುಷಿತವಾಗಿರುವುದು ತಿಳಿಯಿತು. ಸುರಕ್ಷತೆ ದೃಷ್ಟಿಯಿಂದ ಬೋರ್‌ವೆಲ್ ಸ್ಥಗಿತಗೊಳಿಸಿದ್ದೇವೆ. ಈ ನೀರನ್ನು ಮೈಸೂರಿನ ಮೈಕ್ರೋ ಬಯಾಲಿಜಿಕಲ್ ಲ್ಯಾಬ್‌ಗೆ ಕಳುಹಿಸುತ್ತೇವೆ. ಮೇಲ್ನೋಟಕ್ಕೆ ಮಳೆ ಬಂದಾಗ ಚರಂಡಿ ನೀರು ಬೋರ್ ನೀರಿಗೆ ಮಿಶ್ರಣ ಆಗಿರುವುದು ಬೆಳಕಿಗೆ ಬಂದಿದೆ. ಬೇರೆ ಬೋರ್‌ಗಳಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ.
ಹರೀಶ್, ಎಇಇ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ.