ಬಿಇ ಪದವೀಧರನ ಮಾದರಿ ತೋಟಗಾರಿಕೆ ಕೃಷಿ

blank

ಕೊಳ್ಳೇಗಾಲ: ರಾಸಾಯನಿಕ ಕೃಷಿಗೆ ಅಂತ್ಯ ಹೇಳಿ ನೈಸರ್ಗಿಕ ಹಾಗೂ ಸಹಜ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇಂಜಿನಿಯರಿಂಗ್ ಪದವೀಧರ ತೋಟಗಾರಿಕೆ ಕೃಷಿಯಲ್ಲಿ ಪ್ರಗತಿ ಸಾಧಿಸಿದ್ದು ಎಲ್ಲರ ಗಮನ ಸೆಳೆದಿದ್ದಾನೆ.

ತಾಲೂಕಿನ ಸತ್ತೇಗಾಲ ಗ್ರಾಮದ ಜೆ.ಎಸ್.ಜಯರಾಮ್ ಮತ್ತು ಲೀಲಾಂಬ ದಂಪತಿ ಪುತ್ರ ಜೆ.ಪ್ರಶಾಂತ್ ನೈಸರ್ಗಿಕ ಹಾಗೂ ಸಹಜ ಕೃಷಿ ಮೂಲಕ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಜೆ.ಪ್ರಶಾಂತ್ ಬಾಲ್ಯದಿಂದಲೂ ಕೃಷಿ ಬಗ್ಗೆ ಅತೀವ ಆಸಕ್ತಿ ಹೊಂದಿದ್ದರು. ಇಂಜಿನಿಯರಿಂಗ್ ಪದವಿ ಮುಗಿಸಿ ಕೊನೆಗೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ವಿಷಮುಕ್ತ ವ್ಯವಸಾಯ:
ತಮ್ಮ 8 ಎಕರೆ ತೋಟದಲ್ಲಿ ಉಳುಮೆ ರಹಿತವಾಗಿ ತೆಂಗು, ಬಾಳೆ, ಅರಿಶಿಣ, ಇನ್ನಿತರ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಯಾವುದೇ ರೀತಿಯ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸದೆ ವಿಷಮುಕ್ತವಾಗಿ ಬೆಳೆಯುವ ಇವರ ತೋಟದ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಇದೆ. ಅಲ್ಪ ಪ್ರಮಾಣದಲ್ಲಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ.
ತೋಟದಲ್ಲಿ ಬೆಳೆಯಲಾಗುತ್ತಿರುವ ಎಲ್ಲ ರೀತಿಯ ಬೆಳೆಯ ತ್ಯಾಜ್ಯಗಳನ್ನು ಮುಚ್ಚಿಗೆ ಮಾಡಲಾಗುತ್ತಿದೆ. ಗೊಬ್ಬರದ ಗಿಡಗಳನ್ನು ಬೇಲಿ ಮತ್ತು ಬದುಗಳ ಮೇಲೆ ಹಾಕುತ್ತಿರುವುದರಿಂದ ವಾತಾವರಣದಿಂದ ಸಾರಜನಕ ಸ್ಥಿರೀಕರಣ ಮಾಡಿ ಭೂಮಿಗೆ ಸಾರಜನಕ ಪೂರೈಕೆ ಮಾಡಲಾಗುತ್ತಿದೆ. ಒಣ ತ್ಯಾಜ್ಯ ಇಂಗಾಲದ ಮೂಲ ಮತ್ತು ಹಸಿರು ಸೊಪ್ಪು ಸಾರಜನಕ ಮೂಲ. ಎರಡನ್ನೂ ಭೂಮಿ ಮೇಲೆ ಮುಚ್ಚಿಗೆ ಮಾಡಿ ಭೂಮಿಯ ಫಲವತ್ತತೆ ಕಾಪಾಡಿಕೊಂಡಿದ್ದಾರೆ.
ವಿಶೇಷವೆಂದರೆ ಉಳುಮೆ ರಹಿತ ನೈಸರ್ಗಿಕ ಕೃಷಿ, ಬಹು ಬೆಳೆ ವೈವಿಧ್ಯತೆ ಆಯೋಜನೆ ಮತ್ತು ಮಣ್ಣಿನಲ್ಲಿ ಇಂಗಾಲದ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ರೋಗ, ಕೀಟಬಾಧೆ ಅಷ್ಟಾಗಿ ಕಂಡು ಬಂದಿಲ್ಲ. ಒಟ್ಟಾರೆ ನೈಸರ್ಗಿಕ ಹಾಗೂ ಸಹಜ ಕೃಷಿಯಿಂದ 8 ಎಕರೆಯಲ್ಲಿ ಫಲವತ್ತಾದ ತೋಟ ನಿರ್ಮಾಣವಾಗಿದೆ.

ಸಮಗ್ರ ಬೇಸಾಯಕ್ಕೆ ಒತ್ತು
8 ಎಕರೆ ತೋಟದಲ್ಲಿ ಉಳುಮೆ ರಹಿತವಾಗಿ ಸಮಗ್ರ ಬೆಳೆಗಳನ್ನು ಬೆಳೆದಿದ್ದಾರೆ. ತೆಂಗು, ಅಡಕೆ, ಬಾಳೆ, ಅರಿಶಿಣ, ಕಾಳುಮೆಣಸು, ಬಟರ್ ಫ್ರೂಟ್, ಹಲಸು, ನಿಂಬೆ, ಮಾವು, ನೇರಳೆ, ಸೀತಾಫಲ, ರಾಮಫಲ, ನುಗ್ಗೆ, ಸುವರ್ಣಗಡ್ಡೆ, ಮರಗೆಣಸು, ಬಿದಿರು ಮತ್ತು ಮನೆ ಬಳಕೆಗೆ ಬೇಕಾಗುವ ತರಕಾರಿಗಳನ್ನು ಬೆಳೆದಿದ್ದಾರೆ. ವಿಶೇಷವಾಗಿ ಸ್ಥಳೀಯ ತೆಂಗಿನ ಕಾಯಿ ತಳಿಯ 350 ತೆಂಗಿನ ಮರಗಳಿದ್ದು ಈ ಪೈಕಿ 200 ತೆಂಗಿನ ಮರಗಳು ಫಲ ಕೊಡುತ್ತಿವೆ. 1,200 ಅಡಕೆ ಗಿಡಗಳನ್ನು ಬೆಳೆಯಲಾಗಿದೆ. ನಂಜನಗೂಡು ರಸ ಬಾಳೆ ಮತ್ತು ಏಲಕ್ಕಿ ಬಾಳೆಯನ್ನು ಗುಂಪು ಬಾಳೆ ಮಾದರಿಯಲ್ಲಿ ಬೆಳೆಯುತ್ತಿದ್ದಾರೆ.

ಅರಣ್ಯ ಕೃಷಿ
ತೋಟದ ಬದುಗಳ ಮೇಲೆ ಸುಮಾರು 100 ತೇಗ, 200 ಸಿಲ್ವರ್ ಮರಗಳನ್ನು ಬೆಳೆಸಿದ್ದು, ಇದರಲ್ಲಿ 150 ಸಿಲ್ವರ್ ಮರಗಳನ್ನು ಈಗಾಗಲೇ ಮಾರಾಟ ಮಾಡಿದ್ದಾರೆ. ಹೊಂಗೆ, ಬೇವು, ಶ್ರೀಗಂಧ, ಅಂಕೋಲೆ, ಬೀಟೆ, ಬಿದಿರು ಮತ್ತು ಇತರ ಕಾಡು ಜಾತಿಯ ಮರಗಳನ್ನು ಬೆಳೆದಿದ್ದಾರೆ.

ಎರಡು ಸಾವಿರ ಕಾಫಿ ಗಿಡ
ಚಂದ್ರಗಿರಿ ತಳಿಯ ಸುಮಾರು 2,000 ಕಾಫಿ ಗಿಡಗಳನ್ನು ನರ್ಸರಿ ಮಾಡಿದ್ದು ಆಗಸ್ಟ್‌ನಲ್ಲಿ ತೆಂಗು ಮತ್ತು ಅಡಕೆ ಮಧ್ಯೆ ಅಂತರ ಬೆಳೆಯಾಗಿ ಬೆಳೆಯಲು ತೀರ್ಮಾನಿಸಿದ್ದಾರೆ. ಉತ್ತಮ ಕೃಷಿಕರೆಂದು ಹೆಸರು ಪಡೆದಿರುವ ಪ್ರಶಾಂತ್ ಅವರು ನಾಡೋಜ ನಾರಾಯಣ ರೆಡ್ಡಿ ಅವರ ಕೃಷಿ ಕ್ರಮ ಮತ್ತು ಚಿಂತನೆಗಳನ್ನು ದಾಖಲಿಸಿ ತಮ್ಮ ಕೃಷಿ ಅನುಭವವನ್ನು ಬರೆದ ನಾರಾಯಣ ರೆಡ್ಡಿ ಅವರ ಸುಸ್ಥಿರ ಕೃಷಿ ಪಾಠಗಳು ಪುಸ್ತಕದ ಮೂಲಕ ಜನರಿಗೆ ಪರಿಚಯಿಸುವ ಕೆಲಸ ಮಾಡಿದ್ದಾರೆ. ಈ ಪುಸ್ತಕ ಪ್ರಕಟಣೆಗೊಂಡ 2 ವರ್ಷದಲ್ಲಿ 3 ಮರು ಮುದ್ರಣವನ್ನೂ ಕಂಡಿದೆ. ಅಂತೆಯೇ, ರೈತರಿಗೆ ಬೆಳೆ ಆಯೋಜನೆ, ಜಮೀನಿನ ವಿನ್ಯಾಸ, ಕೃಷಿ ಉತ್ಪನ್ನಗಳ ನೇರ ಮಾರಾಟ ಇನ್ನಿತರ ಕೃಷಿ ಸಂಬಂಧಿತ ಮಾಹಿತಿಗಳನ್ನು ರೈತರಿಗೆ ತಿಳಿಸುತ್ತಾರೆ. ಮಂಗಳೂರು ಆಕಾಶವಾಣಿ ಮತ್ತು ಶಿವಮೊಗ್ಗ ಎಫ್‌ಎಂನಲ್ಲಿ ಕೃಷಿಗೆ ಸಂಬಂಧಿಸಿದಂತೆ ಸಂದರ್ಶನ ನೀಡಿದ್ದಾರೆ.

ರಾಸಾಯನಿಕ ಕೃಷಿಗೆ ಆಯಸ್ಸು ಕಡಿಮೆ. ನೈಸರ್ಗಿಕ ಹಾಗೂ ಸಾವಯವ ಕೃಷಿಗೆ ಇತಿಹಾಸವಿದೆ. 40 ರಿಂದ 50 ವರ್ಷದಲ್ಲಿ ರಾಸಾಯನಿಕ ಕೃಷಿಯಿಂದ ಮಣ್ಣಿನ ಫಲವತ್ತತೆ ಕಳೆದುಕೊಳ್ಳುತ್ತೇವೆ. ಸಾವಯವ ಕೃಷಿ ಸತ್ಯ ಹಾಗೂ ಶಾಶ್ವತ. ಈ ಹಿನ್ನೆಲೆಯಲ್ಲಿ ವಿಷಮುಕ್ತ ಆಹಾರಕ್ಕೆ ಸಾವಯವ ಕೃಷಿ ಅಗತ್ಯ.
ಜೆ.ಪ್ರಶಾಂತ್, ಮಾದರಿ ರೈತ ಸತ್ತೇಗಾಲ

Share This Article

Spirituality: ಇರುವೆಗಳಿಗೆ ಆಹಾರ ನೀಡಿದರೆ ಶನಿದೇವನ ಪ್ರಭಾವ ಇರುವುದಿಲ್ಲವೇ?

Spirituality: ನಮ್ಮಲ್ಲಿರುವ ವಸ್ತು ಅಥವಾ ಯಾವುದೇ ಪದಾರ್ಥವನ್ನು ಇಲ್ಲದವರಿಗೆ ದಾನ ಮಾಡಿದರೆ ದೇವರ ಅನುಗ್ರಹ ಸದಾ…

2025ರಲ್ಲಿ ಸಾಲದ ಸುಳಿಗೆ ಸಿಲುಕಲಿದ್ದಾರಂತೆ ಈ 3 ರಾಶಿಯವರು!? ಹಣಕಾಸಿನ ವಿಚಾರದಲ್ಲಿ ಬಹಳ ಎಚ್ಚರ | Money

Money : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು…

30 ನೇ ವಯಸ್ಸಿನಲ್ಲಿಯೇ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತಿದೆಯೇ? White Hair ಆಗಿದ್ರೆ ಇಲ್ಲಿದೆ ಉಪಯುಕ್ತ ಮಾಹಿತಿ

White Hair : ಇಂದಿನ ಕಾಲದಲ್ಲಿ ಜನರ ಕೂದಲು ಚಿಕ್ಕ ವಯಸ್ಸಿನಲ್ಲೇ ಬೆಳ್ಳಗಾಗುತ್ತಿದೆ. ಇನ್ನು ಕೆಲವರು…