ಕೊಳ್ಳೇಗಾಲ: ಶರಣರ ವಚನಗಳು ನಮ್ಮ ಜೀವನವನ್ನು ಸರಿದಾರಿಗೆ ಕರೆದ್ಯೊಯುತ್ತವೆ ಎಂದು ಸಾಹಿತಿ ಇಂದ್ವಾಡಿ ಶಿವಣ್ಣ ಹೇಳಿದರು.
ಪಟ್ಟಣದ ವಿಶ್ವಚೇತನ ಸಂಸ್ಥೆ ಆವರಣದಲ್ಲಿ ಜೆಎಸ್ಬಿ ಪ್ರತಿಷ್ಠಾನದ ವತಿಯಿಂದ ಎಚ್ಕೆ ಟ್ರಸ್ಟ್ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ‘ವಚನ ಶ್ರಾವಣ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶರಣರ ಬದುಕೆ ನಮಗೆ ದಾರಿದೀಪ, ಮಾರ್ಗದರ್ಶನ. ಮನಸ್ಸು ಮಲಿನಗೊಂಡಿರುವ ಸಮಯದಲ್ಲಿ ನಾವು ಸುಂದರ ಸಮಾಜ ಕಟ್ಟಲು ವಚನಗಳ ಆಂದೋಲನ ನಡೆಸ ಬೇಕಿದೆ. ಮಾನವೀಯ ಮೌಲ್ಯಗಳ ನೆಲೆಗಟ್ಟಿನಲ್ಲಿ ಅನುಭಾವ ಸಾರವನ್ನು ಕಟ್ಟಿಕೊಟ್ಟವರು ನಮ್ಮ ಬಸವಾದಿ ಶರಣರು. ಆದರೆ, ಇತ್ತೀಚಿನ ದಿನಗಳಲ್ಲಿ ವಚನ ದರ್ಶನ ಎನ್ನುವ ವಿಕೃತ ಕೃತಿಗಳ ಮೂಲಕ ಬಸವಾದಿ, ಶರಣರ ನಿಜವಾದ ವಚನಗಳನ್ನು ತಿರುಚಿ, ಬಲಪಂಥೀಯ ಮಾಡಲು ಕೆಲವು ವಿಕೃತ ಮನಸ್ಸುಗಳು ಹಪಹಪಿಸುತ್ತಿವೆ. ಇಂದಿನ ಯುವಪೀಳಿಗೆಯು ಅದನ್ನು ಒಪ್ಪದೆ ಖಂಡಿಸಬೇಕು ಎಂದು ನುಡಿದರು.
ಶರಣರ ನಿಜವಾದ ಆಶಯವನ್ನು ಅರಿಯಬೇಕು. ವಚನಗಳ ನಿಜಾರ್ಥ ಸಮಾಜಕ್ಕೆ ತಿಳಿಸುವ ಕೆಲಸವಾಗಬೇಕು. ಶರಣರ ಮಾತುಗಳೆಂದರೆ ಅದು ಜ್ಯೋರ್ತಿಲಿಂಗ. ಶರಣರು ಸರ್ವಕಾಲಕ್ಕೂ ಶ್ರೇಷ್ಠರು. ಯಾವುದೇ ಭೇದ-ಭಾವವಿಲ್ಲದೆ ಸಮ ಸಮಾಜದ ಕನಸನ್ನು ನನಸು ಮಾಡಿದವರು. ಶ್ರಮಿಕ ವರ್ಗದ ಜನರು ಕಟ್ಟಿದ ಕಲ್ಯಾಣ ಸಾಮ್ರಾಜ್ಯ ನಿಜಕ್ಕೂ ಬಹಳ ಸುಂದರ. ಶರಣರ ಶ್ರೇಷ್ಠತೆಯು ಅವರ ನಡೆ-ನುಡಿಯಲ್ಲಿದೆ. ನುಡಿದಂತೆ ನಡೆ, ನಡೆದಂತೆ ನುಡಿ ಅವರ ಜೀವನ. ಸಮಾಜದ ಸ್ವಾಸ್ಥ್ಯ ಕಾಪಾಡಲು, ಸತ್ಯ ಶುದ್ಧ ಜೀವನ ನಡೆಸಲು ಬಸವಾದಿ ಶರಣರು ನಮಗೆ ಕೊಟ್ಟ ವಚನ ಸಾಹಿತ್ಯವು, ಸಾಮಾಜಿಕ ಜೀವನದಲ್ಲಿ ನಮ್ಮನ್ನು ಯೋಗ್ಯ ಮನುಷ್ಯನನ್ನಾಗಿ ಮಾಡಲು ಬಹಳ ಉಪಯುಕ್ತವಾಗಿವೆ ಎಂದು ಹೇಳಿದರು.
ಶರಣರ ವಚನ ಸಾಹಿತ್ಯ ಅಜ್ಞಾನದಿಂದ ಜ್ಞಾನದ ಕಡೆಗೆ ನಮ್ಮನ್ನು ಕರೆದೊಯ್ಯುತ್ತದೆ. ಈ ನಿಟ್ಟಿನಲ್ಲಿ ಇಂತಹ ಉಪನ್ಯಾಸಗಳು ವಿಶೇಷವಾಗಿ ಯುವಜನರಿಗೆ ಜೀವನದ ಮೌಲ್ಯ, ಮಾರ್ಗದರ್ಶನ ಸಿಗುವಂತೆ ಮಾಡುತ್ತವೆ. ಜಗತ್ತಿನ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯ ಕೊಟ್ಟಂತಹ ಅತ್ಯಂತ ಶ್ರೀಮಂತ ಸಾಹಿತ್ಯ ಪ್ರಕಾರವೇ ವಚನ ಸಾಹಿತ್ಯ ಎಂದು ಸ್ವತಃ ಬೇಂದ್ರೆಯವರ ತಿಳಿಸಿದ್ದಾರೆ. ಜಗತ್ತಿಗೆ ವಚನಗಳು ಆಂದೋಲನದ ಸ್ವರೂಪದಲ್ಲಿ ಬಂದವು. ಇಂದಿಗೂ ಅವುಗಳು ಬಹಳ ಪ್ರಸ್ತುತವಾಗಿವೆ. ಅದ್ದರಿಂದ ವಚನ ಸಾಹಿತ್ಯ ಅಧ್ಯಯನ ಇಂದಿನ ಅವಶ್ಯಕ. ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ವಚನವನ್ನು ಉಲ್ಲೇಖಿಸಿ ಅಂಧಕಾರ ಅಳಿದಾಗ ಮಾತ್ರ ಸುಜ್ಞಾನ ಬರಲು ಸಾಧ್ಯ. ಇದರಿಂದ ಅಂತರಂಗದ ವಿಕಾಸವಾಗುತ್ತದೆ ಎಂದು ತಿಳಿಸಿದರು.
ವಿಶ್ವ ಚೇತನ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ ಮಾತನಾಡಿ, ದಿನಕ್ಕೊಂದು ವಚನಗಳನ್ನು ಓದುವುದರಿಂದ ನಾವು ಉನ್ನತ ಸ್ಥಾನ ಏರುತ್ತೇವೆ. ಎಲ್ಲರೂ ಇಂದಿನಿಂದ ವಚನಗಳನ್ನು ಅಧ್ಯಯನ ಮಾಡೋಣ ಎಂದರು.
ಜೆಎಸ್ಬಿ ಪ್ರತಿಷ್ಠಾನದ ಎಸ್.ಶಶಿಕುಮಾರ್ ಮಾತನಾಡಿ, ಕಾರ್ಯಕ್ರಮ ನಿಮಿತ್ತ ಸಂಸ್ಥೆಯಲ್ಲಿ ನಡೆದ ವಚನ ವಾಚನ, ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನ ನೀಡಲಾಯಿತು. ಕೆ.ಶಿವನಂಜು ಸಂಗೀತ ಗಾಯನ ನಡೆಸಿಕೊಟ್ಟರು.
ಬಸವಲಿಂಗಪ್ಪ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅಕ್ಬರ್, ವಿಶ್ವ ಚೇತನ ಸಂಸ್ಥೆಯ ಭಾಸ್ಕರನ್, ಜಗದೀಶ, ರಾಜಶೇಖರ, ಲೋಕೇಶ, ಚೇತನ, ಮೋಹನ, ನಂದಿನಿ, ಕವಿತಾ, ವಿನುತಾ, ನಿರ್ಮಲಾ, ರಾಜೇಶ, ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ಇದ್ದರು.