ಕೊಳ್ಳೇಗಾಲ: ಕಾಂಗ್ರೆಸ್‌ನ 5 ಗ್ಯಾರಂಟಿಗಳು ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳುವುದಿಲ್ಲ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಶನಿವಾರ ತಾಲೂಕು ಶಿಶು ಅಭಿವೃದ್ಧಿ ಯೋಜನೆ ಆಯೋಜಿಸಿದ್ದ ಮೇಲ್ವಿಚಾರಕಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಾತಿ, ಧರ್ಮ, ಪಕ್ಷ, ಬಡವರು, ಸಿರಿವಂತ ಎಂಬ ಭೇದವಿಲ್ಲದೆ 5 ಗ್ಯಾರಂಟಿಗಳನ್ನು ಸರ್ಕಾರ ನೀಡುತ್ತಿದೆ. ಕೆಲವರಿಗೆ ತಾಂತ್ರಿಕ ಕಾರಣದಿಂದ ಗೃಹಲಕ್ಷ್ಮೀ ಹಣ ದೊರೆಯುತ್ತಿಲ್ಲ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಲಾಗುವುದು ಎಂದರು.
ಅಂಗನವಾಡಿ ಕಾರ್ಯೆಕರ್ತೆಯರು ಸರ್ಕಾರದ ಯಾವುದೇ ಯೋಜನೆ ಅನುಷ್ಠಾನ ಕಾರ್ಯದಲ್ಲಿ ಶೇ.100 ರಷ್ಟು ಪಾಲ್ಗೊಂಡು ಯಶಸ್ವಿಗೊಳಿಸುತ್ತಾರೆ. ಇದೀಗ ಅಂಗನವಾಡಿ ಕೆಲಸ ನಿರ್ವಹಿಸಲು ಮೊಬೈಲ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ಇದರಿಂದ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಉದ್ದೇಶವು ಇದೆ. ಈ ಮೊಬೈಲ್‌ಗಳಿಂದ ಜಿಲ್ಲಾ, ರಾಜ್ಯ ಹಾಗೂ ಕೇಂದ್ರದಿಂದ ಬರುವ ಅಗತ್ಯ ಮಾಹಿತಿಗಳನ್ನು ತಿಳಿದು ಕಾರ್ಯಕರ್ತೆಯರು ಅಂಗನವಾಡಿಗಳಲ್ಲಿ ಉತ್ತಮ ಸೇವೆ ಸಲ್ಲಿಸಬೇಕು. ನಿಮ್ಮ ಮನೆಯ ಸದಸ್ಯರ ಅನುಕೂಲಕ್ಕೆ ಬಳಸಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
6ನೇ ಗ್ಯಾರಂಟಿ ಜಾರಿ ಮಾಡಿ:
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಂಧಿಸಿದ 6ನೇ ಗ್ಯಾರಂಟಿ ಜಾರಿ ಮಾಡುವುದಾಗಿ ಭರವಸೆ ನೀಡಿದ್ದರು. ಇದರಿಂದ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ 15 ಸಾವಿರ ರೂ. ಏರಿಕೆಯಾಗಲಿದೆ ಎಂಬ ಆಶಾಭಾವನೆ ಬೆಳೆದಿತ್ತು. ಸರ್ಕಾರ ಇತ್ತ ಗಮನಹರಿಸಬೇಕೆಂದು ಶಾಸಕರಿಗೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರು, ಉಪವಿಭಾಗಾಧಿಕಾರಿ ಮಹೇಶ್, ತಾ.ಪಂ ಇಒ ಶ್ರೀನಿವಾಸ್, ಸಿಡಿಪಿಒ ನಂಜಮಣಿ ಮತ್ತಿತರಿದ್ದರು.