ಕೊಳ್ಳೇಗಾಲ; ಪಟ್ಟಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ, ಬಸವ ಜಯಂತಿ ಮಹೋತ್ಸವ ಸಮಿತಿ ಮತ್ತು ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳ ಒಕ್ಕೂಟದ ಸಹಯೋಗದಲ್ಲಿ ಶುಕ್ರವಾರ ಜಗಜ್ಯೋತಿ ಬಸವೇಶ್ವರರ 891ನೇ ಜಯಂತ್ಯುತ್ಸವ ವಿಜೃಂಭಣೆಯಿಂದ ನಡೆಯಿತು.
ಎಂಜಿಎಸ್‌ವಿ ಜೂನಿಯರ್ ಕಾಲೇಜು ಮೈದಾನದಲ್ಲಿ ವಿವಿಧ ಹೂಗಳಿಂದ ಅಲಂಕೃತಗೊಳಿಸಿದ್ದ ರಥದ ಮೇಲಿದ್ದ ಶ್ರೀ ಬಸವೇಶ್ವರರ ಮೂರ್ತಿಗೆ ಸಾಲೂರು ಬೃಹನ್ಮಠಾಧ್ಯಕ್ಷ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಎಂಜಿಎಸ್‌ವಿ ಕಾಲೇಜು ಮೈದಾನದಿಂದ ಹೊರಟ ಮೆರವಣಿಗೆ ಗುರುಕಾರ್ ವೃತ್ತ, ಡಾ.ರಾಜ್‌ಕುಮಾರ್ ರಸ್ತೆ, ಮಸೀದಿ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಅಂಬೇಡ್ಕರ್ ವೃತ್ತ, ಎಡಿಬಿ ವೃತ್ತ, ನ್ಯಾಯಾಲಯದ ಮುಂದಿನ ರಸ್ತೆಯ ಮೂಲಕ ಜೆಎಸ್‌ಎಸ್ ಕಾಲೇಜು ಆವರಣಕ್ಕೆ ತಲುಪಿ ಮೆರವಣಿಗೆ ಅಂತ್ಯಗೊಂಡಿತು.
ಮೆರವಣಿಗೆಯಲ್ಲಿ ಬಸವ, ಹತ್ತಾರು ನಂದಿಕಂಬಗಳು, ವೀರಗಾಸೆ, ಮಹಿಳಾ ವೀರಗಾಸೆ, ಗಾರುಡಿಗೊಂಬೆಗಳು, ದೊಣ್ಣೆ ವರಸೆ, ಕೋಲಾಟ ನೃತ್ಯಗಳು ಎಲ್ಲರ ಕಣ್ಮನ ಸೆಳೆಯಿತು. ಮಂಗಳವಾದ್ಯ, ಡೊಳ್ಳು ಶಬ್ದಕ್ಕೆ ಯುವಕರು ಕುಣಿದು ಕುಪ್ಪಳಿಸಿದರು. ಆಲಹಳ್ಳಿ ಪಟ್ಟದ ಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಚಿಕ್ಕಿಂದುವಾಡಿ ಮಠದ ಶ್ರೀ ಬಾಲಷಡಾಕ್ಷರಿ ಸ್ವಾಮೀಜಿ, ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಎಂ.ಆರ್.ಮಂಜುನಾಥ್, ಮಾಜಿ ಸಚಿವ ಎನ್.ಮಹೇಶ್, ಮಾಜಿ ಶಾಸಕರಾದ ಆರ್.ನರೇಂದ್ರ, ಪರಿಮಳಾ ನಾಗಪ್ಪ, ಬಾಲರಾಜು, ಮಾನಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಎಸ್.ದತ್ತೇಶ್ ಕುಮಾರ್, ಹನೂರಿನ ಯುವ ಮುಖಂಡ ನಿಶಾಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಪ್ರೀತನ್ ನಾಗಪ್ಪ, ಚಾಮುಲ್ ಅಧ್ಯಕ್ಷ ನಾಗೇಂದ್ರ, ನಿರ್ದೇಶಕ ನಂಜುಂಡಸ್ವಾಮಿ, ಶಿವಪುರ ಲೋಕೇಶ್, ತಾ.ಪಂ.ಮಾಜಿ ಅಧ್ಯಕ್ಷ ಮುರುಡೇಶ್ವರ, ವೀರಶೈವ ಮಹಾಸಭಾ ಅಧ್ಯಕ್ಷ ಮಹದೇವಪ್ರಸಾದ್, ಮಲ್ಲೇಶಪ್ಪ, ಲೋಕೇಶ್, ನಂಜುಂಡಸ್ವಾಮಿ, ಉಪ್ಪಾರ ನಿಗಮ ಮಾಜಿ ಅಧ್ಯಕ್ಷ ಶಿವಕುಮಾರ್, ಕ್ರೈಸ್ತ ಸಮುದಾಯದ ಮುಖಂಡ ಸೆಲ್ವರಾಜು, ಬ್ರಾಹ್ಮಣ ಸಮುದಾಯದ ನರಸಿಂಹನ್, ದಲಿತ ಸಮುದಾಯದ ಮುಖಂಡ ನಟರಾಜ ಮಾಳಿಗೆ, ಶಾಂತರಾಜು, ನಂಜಪ್ಪ, ಮೂರ್ತಿ ಇತರರಿದ್ದರು.