ಕೊಳ್ಳೇಗಾಲ : ತಾಲೂಕಿನ ಕುಣಗಳ್ಳಿ ಗ್ರಾಮದಲ್ಲಿ 7 ಸೀಳು ನಾಯಿಗಳನ್ನು ವಿಷವಿಕ್ಕಿ ಕೊಂದಿದ್ದ ಆರೋಪಿಯನ್ನು ಬುಧವಾರ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ತಾಲೂಕಿನ ಅರೇಪಾಳ್ಯ ಗ್ರಾಮದ ರಾಜಣ್ಣ (39) ಬಂಧಿತ. ಶ್ರೀಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಕೊಳ್ಳೇಗಾಲ ಬಫರ್ ಜೋನ್ ವ್ಯಾಪ್ತಿಗೆ ಬರುವ ಹಿತ್ತಲದೊಡ್ಡಿಗೆ ಗ್ರಾಮಕ್ಕೆ ಸಂಪರ್ಕ ಬೆಸೆಯುವ ಕಚ್ಚಾ ರಸ್ತೆಯ ಬದಿಯಲ್ಲಿರುವ ಸರ್ಕಾರಿ ಮಾಳದ ಜಾಗದಲ್ಲಿ ಸೋಮವಾರ 6 ಸೀಳುನಾಯಿಗಳ ಕಳೇಬರ ಪತ್ತೆಯಾಗಿತ್ತು. ಮಂಗಳವಾರವೂ ಅರಣ್ಯ ಸಿಬ್ಬಂದಿ ಹೆಚ್ಚಿನ ಪರಿಶೀಲನೆ ನಡೆಸಿದಾಗ ಮತ್ತೊಂದು ಸೀಳುನಾಯಿಯ ಕಳೇಬರ ದೊರೆತ್ತಿತ್ತು. 7 ಸೀಳು ನಾಯಿಗಳು ಅನುಮಾನಾಸ್ಪದವಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಅರಣ್ಯಾಧಿಕಾರಿಗಳು ತನಿಖೆ ಕೈಗೊಂಡಿದ್ದರು.
ವಿಷ ಆಹಾರ ಸೇವಿಸಿ ಸೀಳುನಾಯಿಗಳು ಮೃತಪಟ್ಟಿರುವುದೆಂದು ತನಿಖೆಯಲ್ಲಿ ಗೊತ್ತಾಗಿತ್ತು. ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ ಅರೇಪಾಳ್ಯದ ನಿವಾಸಿ ರಾಜಣ್ಣನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮೇಕೆ ಬೇಟೆಯಾಡಿದ್ದ ದ್ವೇಷಕ್ಕೆ ಬಲಿ: ಆರೋಪಿ ರಾಜು ಮೇಕೆ ಸಾಕಣೆ ಮಾಡುತ್ತಿದ್ದು, ನಿತ್ಯವೂ ಕುಣಗಳ್ಳಿ ಗ್ರಾಮದ ಸುತ್ತಮುತ್ತ ಮೇಕೆಗಳನ್ನು ಮೇಯಿಸಿಕೊಂಡಿದ್ದ. ಇತ್ತೀಚೆಗಷ್ಟೆ 2 ಮೇಕೆಗಳನ್ನು ಯಾವುದೋ ಕಾಡುಪ್ರಾಣಿಗಳು ಬೇಟೆಯಾಡಿದ್ದವು. ಇದರಿಂದ ಆಕ್ರೋಶಗೊಂಡಿದ್ದ ರಾಜಣ್ಣ ಕಾಡುಪ್ರಾಣಿ ಬೇಟೆಯಾಡಿ ಅರ್ಧ ಉಳಿದಿದ್ದ ಮೇಕೆಯ ದೇಹಕ್ಕೆ ವಿಷ ಹಾಕಿರುವುದು ಅರಣ್ಯ ಇಲಾಖೆ ಅಧಿಕಾರಿಗಳ ತನಿಖೆಯಲ್ಲಿ ಬಯಲಾಗಿದೆ. ವಿಷ ಹಾಕಿದ್ದ ಸತ್ತ ಮೇಕೆಯನ್ನು ತಿಂದ 7 ಸೀಳುನಾಯಿಗಳು ಮೃತಪಟ್ಟಿದ್ದವು.