ಎಂ.ಪವನ್‌ಕುಮಾರ್ ಕೊಳ್ಳೇಗಾಲ
ದೇಸಿ ಕಲೆ ತಬಲ ಮತ್ತು ಮೃದಂಗ ನುಡಿಸುವುದರಲ್ಲಿ ಛಾಪು ಮೂಡಿಸಿರುವ ವಿದ್ವಾನ್ ಡಾ.ಎ.ವಿ.ದಶಪಾಲ್, ಗ್ರಾಮೀಣ ಹಾಗೂ ಬಡ ಮಕ್ಕಳಿಗೆ ಉಚಿತವಾಗಿ ತಬಲ ಮತ್ತು ಮೃದಂಗ ಕಲೆಯನ್ನು ಧಾರೆ ಎರೆಯುತ್ತಿದ್ದಾರೆ.
ಸತತ 47 ವರ್ಷಗಳಿಂದ ಈ ಕಲೆಯನ್ನು ಉಳಿಸಿ ಬೆಳೆಸುವುದರ ಜತೆಗೆ ಕಲಿಸುವ ನಿಟ್ಟಿನಲ್ಲಿ ಶ್ರಮ ವಹಿಸುತ್ತಿದ್ದಾರೆ. ಪಟ್ಟಣದ ದೇವಾಂಗ ಪೇಟೆ ಗರಡಿ ಬೀದಿಯ ನಿವಾಸಿ ತಬಲ ವಿದ್ವಾನ್ ದಿ.ಅಚ್ಗಾಳ್ ವೀರಭದ್ರಯ್ಯ ಮತ್ತು ದಿ.ಮುದ್ದಮ್ಮ ದಂಪತಿ ಪುತ್ರ ಡಾ.ಎ.ವಿ.ದಶಪಾಲ್. ಈ ಕಲೆಯನ್ನು ಕರಗತ ಮಾಡಿಕೊಳ್ಳಬೇಕೆನ್ನುವವರಿಗೆ ದಶಪಾಲ್ ಸ್ಫೂರ್ತಿಯಾಗುವುದರ ಜತೆಗೆ ಮಾರ್ಗದರ್ಶಕರೂ ಆಗಿದ್ದಾರೆ.
4ನೇ ತರಗತಿಗೆ ಶಿಕ್ಷಣ ಮೊಟಕುಗೊಳಿಸಿದ ಇವರು, 15ನೇ ವಯಸ್ಸಿಗೆ ಸಂಪೂರ್ಣವಾಗಿ ತಬಲ ನುಡಿಸುವುದರಲ್ಲಿ ತೊಡಗಿಸಿಕೊಂಡರು. ಈವರೆಗೆ ಸುರ್ದೀಘ 47 ವರ್ಷಗಳಿಂದ ತಬಲ ಮತ್ತು ಮೃದಂಗ ವಾದನದಲ್ಲಿ ತಮ್ಮದೇ ಆದ ಚಮತ್ಕಾರ ಮಾಡಿದ್ದು, ಹಳೇ ಮೈಸೂರು ಪ್ರಾಂತ್ಯದಲ್ಲಿ ಚಿರಪರಿಚಿತರಾಗಿದ್ದಾರೆ. ದಶಪಾಲ್ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು.
ತಬಲದ ಮೇಲೆ ಇವರು ಬೆರಳು ಆಡಿಸಲು ಪ್ರಾರಂಭಿಸಿದರೆ ಇವರ ಕಲಾಪ್ರೌಢಿಮೆಗೆ ತಲೆದೂಗದವರಿಲ್ಲ. ನಾಟಕ, ಹರಿಕಥೆ, ಸಂಗೀತಗೋಷ್ಠಿ ಸೇರಿದಂತೆ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಬಲ ಮತ್ತು ಮೃದಂಗ ನುಡಿಸಿರುವ ಹೆಗ್ಗಳಿಕೆ ಇವರದ್ದು. 62 ವಯಸ್ಸಿನಲ್ಲೂ 12 ಗಂಟೆಗೂ ಹೆಚ್ಚು ಸಮಯ ಕುಂತಲ್ಲೇ ಕುಳಿತು ತಬಲ ಬಾರಿಸುತ್ತಾರೆ.
ತಬಲ ಮತ್ತು ಮೃದಂಗ ನುಡಿಸುವುದನ್ನು ಧ್ಯಾನಿಸುವ ಇವರು, ಈ ಕಲೆಯನ್ನು ಸಂಪಾದನೆಗೆ ಸೀಮಿತ ಮಾಡಿಕೊಂಡಿಲ್ಲ. ಬದಲಾಗಿ ಇಂತಹ ಸಾಂಸ್ಕೃತಿಕ ಕಲೆಯನ್ನು ಮುಂದಿನ ಪೀಳಿಗೆಗೆ ಕಲಿಸಿ, ಉಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಇವರಿಂದ ತಬಲ, ಮೃದಂಗ ಕಲಿತವರು ಉತ್ತಮ ಜೀವನ ಕಂಡುಕೊಂಡಿದ್ದಾರೆ. ಸಾಧನೆ ಸುಲಭದ ದಾರಿಯಲ್ಲ. ಇಲ್ಲಿ ಏಳು-ಬೀಳಿದ್ದು, ಗುರಿ ಮುಟ್ಟಲು ಪರಿಶ್ರಮ ಹಾಕಲೇಬೇಕು. ಇಂತಹ ಕಠಿಣ ಹಾದಿಯಲ್ಲಿ ದಶಪಾಲ್ ನಡೆದು ಬಂದಿದ್ದಾರೆ. ಇವರ ಅನನ್ಯ ಸಾಧನೆಗೆ ಸಿಜಿಕೆ ರಂಗಪ್ರಶಸ್ತಿ, ಇಂಟರ್‌ನ್ಯಾಷನಲ್ ಗ್ಲೋಬಲ್ ಪೀಸ್ ಯೂನಿವರ್ಸಿಟಿ ವತಿಯಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ, ಜೋಗಿರಂಗ ಜೋಳಿಗೆ ರಂಗ ರತ್ನ ಪ್ರಶಸ್ತಿ, ವಿವಿಧ ಸಂಘ-ಸಂಸ್ಥೆಗಳು ಪ್ರಶಸ್ತಿಗಳು ದೊರೆತಿವೆ. ಕಲೆಯನ್ನು ಉಳಿಸಿ ಬೆಳೆಸುವ ಇಂತಹ ಅಪರೂಪದ ಕಲಾವಿದರನ್ನು ಸರ್ಕಾರ ಗುರುತಿಸಿ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಪ್ರಶಂಸಿಸುವ ಕಾರ್ಯ ಆಗಬೇಕಿದೆ. ಆಗ ಮಾತ್ರ ಇಂದಿನ ಯುವ ಪೀಳಿಗೆಗೆ ಪುರಾತನ ಕಲೆಗಳ ಸತ್ವದ ಮಹತ್ವ ತಿಳಿದಂತಾಗುತ್ತದೆ. ಜತೆಗೆ ಇದನ್ನು ಕಲಿಯಬೇಕೆಂಬ ಆಸಕ್ತಿ ಮೂಡುತ್ತದೆ.
ಉಚಿತ ತರಬೇತಿ
ಎ.ವಿ.ದಶಪಾಲ್ ಅವರು ತಮ್ಮ ಮನೆಯಲ್ಲಿ ವಿವಿಧ ರೀತಿಯ ತಬಲ, ಡಗ್ಗಗಳ ಸಂಗ್ರಹಿಸಿದ್ದಾರೆ. ಗ್ರಾಮೀಣ ಮಕ್ಕಳು ಹಾಗೂ ಕಲಿಯುವ ಆಸಕ್ತಿವುಳ್ಳ ಬಡ ಮಕ್ಕಳಿಗೆ ಉಚಿತವಾಗಿ ತಬಲ ಬಾರಿಸುವ ತರಬೇತಿ ನೀಡುತ್ತಿದ್ದಾರೆ. ಇವರ ಗರಡಿಯಲ್ಲಿ ಕಲಿತ ಶಿಷ್ಯ ವೃಂದವೇ ಇದೆ.
ವಿವಿಧೆಡೆ ಕಾರ್ಯಕ್ರಮ ಆಯೋಜನೆ
ದಶಪಾಲ್ ಅವರು ದೆಹಲಿ, ವಾರಾಣಸಿ, ತಮಿಳುನಾಡು, ಧರ್ಮಸ್ಥಳ, ರಾಮನಗರ, ತುಮಕೂರು, ಬೆಂಗಳೂರು, ಮಂಡ್ಯ, ಮೈಸೂರು ಸೇರಿದಂತೆ ಹಳೇ ಮೈಸೂರು ಪ್ರಾಂತ್ಯದ ಬಹುತೇಕ ಹಳ್ಳಿಗಳಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. 9 ರಿಂದ 10 ಸಾವಿರ ನಾಟಕಗಳಿಗೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಈ ಹಿಂದೆ, ವಿದ್ವಾಸರಾದ ನಾಗರಾಜಪ್ಪ, ಮಲ್ಲಿಕಾರ್ಜುನ್, ಪ್ರಭಾಕರ್, ನಾಗಪ್ಪ ಅವರೊಂದಿಗೆ ಕಾರ್ಯಕ್ರಮ ನೀಡಿದ್ದಾರೆ. ಇದೀಗ ವಿದ್ವಾನ್ ವೆಂಕಟೇಶ್ ಹಾಗೂ ದಶಪಾಲ್ ಜೋಡಿ ಕಾರ್ಯಕ್ರಮವೆಂದರೆ ನಾಟಕ ಪ್ರಿಯರಿಗೆ ಅಚ್ಚು ಮೆಚ್ಚು.
ಮೂರು ತಲೆಮಾರಿನ ಕಲಾ ಸೇವೆ
ತಬಲ ಕಲೆ ಎ.ವಿ.ದಶಪಾಲ್ ಅವರಿಗೆ ರಕ್ತಗತವಾಗಿ ಬಂದಿದೆ. ಇವರ ತಂದೆ ದಿ.ಅಚ್ಗಾಳ್ ವೀರಭದ್ರಯ್ಯ ಪ್ರಖ್ಯಾತ ತಬಲ ವಾದಕರೆಂಬ ಹೆಸರು ಪಡೆದಿದ್ದರು. ದಶಪಾಲ್ ಅವರು ಈ ಕಲೆಯನ್ನು ಕರಗತ ಮಾಡಿಕೊಂಡು ಪಸರಿಸುತ್ತಿದ್ದಾರೆ. ಅಂತೆಯೆ ಇವರ ಪುತ್ರ ಡಿ.ಅರ್ಜುನ್ ರಿದಮ್ ಪ್ಯಾಡ್ ನುಡಿಸುವುದರಲ್ಲಿ ಪರಿಣಿತಿ ಪಡೆದಿದ್ದಾರೆ. ಒಟ್ಟಾರೆ ಈ ಕುಟುಂಬ 3 ತಲೆಮಾರಿನಿಂದ ಕಲಾ ಕ್ಷೇತ್ರದ ಸೇವೆಯಲ್ಲಿ ತೊಡಗಿಸಿಕೊಂಡಿದೆ.
ಡಾ.ಎ.ವಿ.ದಶಪಾಲ್ ಕರ್ನಾಟಕ ಸಂಗೀತ ತಬಲ, ಹಿಂದುಸ್ತಾನಿ ತಬಲ, ಮೃದಂಗ, ತಾಳ ವಾದ್ಯಗಳು ಹಾಗೂ ಚರ್ಮವಾದ್ಯಗಳಲ್ಲಿ ಪರಿಣತಿ ಪಡೆದಿದ್ದಾರೆ. ಈ ಕಲೆಯನ್ನು ಕಲಿಯುವ ಆಸಕ್ತಿ ಹೊಂದಿರುವವರು ಮೊ. 988677661, 9739502448 ಸಂಪರ್ಕಿಸಬಹುದು. ಹಾಗೆಯೇ, ಫೇಸ್‌ಬುಕ್ ಖಾತೆ ತೆರೆದರೆ ಇವರು ನುಡಿಸಿರುವ ನಾಟಕಗಳ ವಿಡಿಯೋ ನೋಡಬಹುದು.
ತಬಲ ಮತ್ತು ಮೃದಂಗ ಕಲೆ ಉಳಿಸುವ ನಿಟ್ಟಿನಲ್ಲಿ 47 ವರ್ಷಗಳಿಂದ ಶ್ರಮಿಸುತ್ತಿದ್ದೇನೆ. ಈ ಕಲೆ ನನಗೆ ಬದುಕು, ಸಂಪಾದನೆ, ಗೌರವವನ್ನು ನೀಡಿದೆ. ಈ ನೆಲದ ಕಲೆ ಉಳಿಸುವ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು.
ಡಾ.ಎ.ವಿ ದಶಪಾಲ್, ತಬಲ ಮತ್ತು ಮೃದಂಗ ವಾದಕರು, ಕೊಳ್ಳೇಗಾಲ