More

    ಚಿಕ್ಕಲ್ಲೂರಿನಲ್ಲಿ ಭಕ್ತರಿಗೆ ನೀಲಗಾರ ದೀಕ್ಷೆ

    ಕೊಳ್ಳೇಗಾಲ: ತಾಲೂಕಿನ ಇತಿಹಾಸ ಪ್ರಸಿದ್ಧ ಚಿಕ್ಕಲೂರು ಜಾತ್ರೆಯ 3ನೇ ದಿನವಾದ ಭಾನುವಾರ ಪವಾಡ ಪುರುಷ ಘನನೀಲಿ ಶ್ರೀಸಿದ್ದಪ್ಪಾಜಿ ದೇಗುಲದಲ್ಲಿ ಭಕ್ತ ಸಮೂಹ ಮುಡಿಸೇವೆ, ನೀಲಗಾರ ದೀಕ್ಷೆ ಹಾಗೂ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿತು.
    ಹರಕೆಹೊತ್ತ ಭಕ್ತರು ಸಿದ್ದಪ್ಪಾಜಿ ದೇಗುಲದ ಸುತ್ತ ಉರುಳು ಸೇವೆ ಸೇರಿದಂತೆ ಧೂಪ, ದೀಪ ಸೇವೆ ಮತ್ತು ಪಂಜಿನ ಸೇವೆ ನೆರವೇರಿಸಿದರು.
    ಈ ನಡುವೆ ಶ್ರೀಸಿದ್ದಪ್ಪಾಜಿ ಒಕ್ಕಲಿನ ನೀಲಗಾರ ಸಂಪ್ರದಾಯಸ್ಥ ಕುಟುಂಬದ ಬಾಲಕರಿಗೆ ಮುಂದುವರಿದ ಭಾಗವಾಗಿ ಭಾನುವಾರ ಬೆಳಗ್ಗೆಯಿಂದಲೇ ಶ್ರೀಕ್ಷೇತ್ರದ ಹೊನ್ನುತ್ತದ ಬಳಿ ನೀಲಗಾರ ದೀಕ್ಷೆ ಕೊಡಿಸುವ ಮೂಲಕ ರುದ್ರಾಕ್ಷಿ ಮಂಟಪೋತ್ಸವ ಸೇವೆ ಸಲ್ಲಿಸಲು ನೂರಾರು ಭಕ್ತರು ಜಮಾಯಿಸಿದ್ದರು.
    ಬಟ್ಟಲ ಜೋಳಿಗೆ ಜಾತ್ರೆ: ಜಾತ್ರೆಯಲ್ಲಿ ಮುಡಿಸೇವೆ ಹಿನ್ನೆಲೆ ಭಕ್ತರು, ತಮ್ಮ ಕೇಶ ಮುಂಡನೆ ಮೂಲಕ ಭಕ್ತಿ ಸಮರ್ಪಿಸಿ, ಘನನೀಲಿ ಶ್ರೀಸಿದ್ದಪ್ಪಾಜಿ ಹೆಸರಿನಲ್ಲಿ ತಮ್ಮ ಪುಟ್ಟ ಬಾಲಕರು ಹಾಗೂ ಯುವಕರಿಗೆ ದೇವರ ಗುಡ್ಡನ ಬಿಡಿಸುವ(ದೀಕ್ಷೆ) ಪೂಜಾ ಕೈಂಕರ್ಯದಲ್ಲಿ ತೊಡಗಿದ್ದರು.
    ಇದೇ ವೇಳೆ ದಿಕ್ಷೆ ಪಡೆದುಕೊಳ್ಳುವವರಿಗೆ ಹೊಸ ಶ್ರೇತವಸ್ತ್ರ, ಕೊರಳಿಗೆ ರುದ್ರಾಕ್ಷಿ ಮಣಿ, ಕೈಗೊಂದು ಬಿದಿರಿನ ನಾಗಬೆತ್ತ ನೀಡಿದ ನೀಲಗಾರ ಸಂಪ್ರದಾಯದ ಶ್ರೀಸಿದ್ದಪ್ಪಾಜಿ ದೇವರ ಗುಡ್ಡರು ಘನನೀಲಿ ಸಿದ್ದಪ್ಪಾಜಿ ಹೆಸರಿನಲ್ಲಿ ಜಯ ಘೋಷಣೆ ಪಠಿಸುತ್ತಲೇ ಜಾತ್ರೆಯಲ್ಲಿ ಧರ್ಮ ಭಿಕ್ಷೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಿದರು.
    ಇಂದಿಲ್ಲಿ ಆರಂಭವಾದ ನೀಲಗಾರ ದೀಕ್ಷೆ ಧರ್ಮ ಪರಂಪರೆ ಜೀವನದುದ್ದಕ್ಕೂ ನೂತನ ದೇವರ ಗುಡ್ಡರು ಪಾಲಿಸುವ ಪದ್ಧತಿ ಇದಾಗಿದೆ. ತಾವು ವಾಸಿಸುವ ಸುತ್ತಮುಲ್ಲ ಪ್ರದೇಶದಲ್ಲಿ ವಾರಕ್ಕೊಮ್ಮೆಯಾದರೂ ಕೈಯಲ್ಲಿ ನಾಗಬೆತ್ತ, ಜಾಗಟೆ, ಕಂಕುಳಲ್ಲಿ ಜೋಳಿಗೆ ಧರಿಸಿ ಸಿದ್ದಪ್ಪಾಜಿ ಹೆಸರಿನಲ್ಲಿ ಧರ್ಮ ಪ್ರಚಾರ ಮತ್ತು ಭಿಕ್ಷೆ ಮುಂದುವರಿಸುವಂತೆ ದೀಕ್ಷೆ ಬೋಧಿಸಿದ ಹಿರಿಯ ದೇವರ ಗುಡ್ಡರು ಕಿವಿಮಾತು ಹೇಳಿದರು.
    ಭಕ್ತರ ಸಂಖ್ಯೆಯಲ್ಲಿ ಇಳಿಮುಖ: ಜಾತ್ರೆಯಲ್ಲಿ ಪ್ರಾಣಿಬಲಿ ನಿಷೇಧ ಕಟ್ಟುನಿಟ್ಟಾಗಿ ಜಾರಿಗೊಳಿಸಿರುವ ಹಿನ್ನೆಲೆ ಚಂದ್ರಮಂಡಲೋತ್ಸವದ ನಂತರ ಜಾತ್ರೆಗೆ ಭಕ್ತರ ಆಗಮನ ಕ್ಷೀಣಿಸಿದೆ. ನೂರಾರು ಸಂಖ್ಯೆಯಲ್ಲಿ ನೀಲಗಾರ ದೀಕ್ಷೆಗೆ ಆಗಮಿಸುತ್ತಿದ್ದ ಜಾತ್ರೆಯಲ್ಲಿ ಸುಮಾರು 72 ಜನರು ಮಾತ್ರ ದೀಕ್ಷೆ ಪಡೆದಿದ್ದಾರೆ. ಮುಡಿಸೇವೆಯಲ್ಲಿಯೂ ಇದೇ ವಾತಾವರಣ ಕಂಡು ಬಂದಿದ್ದು, ಭಾನುವಾರ ಸುಮಾರು 915 ಜನರು ಮುಡಿ ಸೇವೆಗೆ ಬಂದಿದ್ದರು.
    ಪ್ರಾಣಿ, ಮದ್ಯ ಸಾಗಣೆ ಪರಿಶೀಲನೆ: ಈ ನಡುವೆ ಪ್ರಾಣಿಬಲಿ ನಿಷೇಧ ಹಿನ್ನೆಲೆ ಜಿಲ್ಲಾಢಳಿತದ ನಿರ್ದೇಶನದಂತೆ ಚಿಕ್ಕಲ್ಲೂರು ಜಾತ್ರೆ ಪ್ರವೇಶಿಸುವ ಮಾರ್ಗವಾದ ಪಾಳ್ಯ, ಮತ್ತಿಪುರ, ಸುಂಡ್ರಳ್ಳಿ, ಬಾಣೂರು, ತೆಳ್ಳನೂರು ಹಾಗೂ ರಾಚಪ್ಪಾಜಿನಗರ ಭಾಗಗಳಲ್ಲಿ ಪೊಲೀಸರು ಚೆಕ್‌ಪೋಸ್ಟ್ ನಿರ್ಮಿಸಿದ್ದು, ಕಳೆದೆರೆಡು ದಿನಗಳಂತೆ ಭಾನುವಾರವೂ ಭಕ್ತರ ವಾಹನಗಳನ್ನು ತಡೆದು ಒಳಗೆ ಕುರಿ, ಮೇಕೆ, ಕೋಳಿ ಸೇರಿದಂತೆ ಮದ್ಯ ಸಾಗಣೆ ಪರಿಶೀಲನೆ ನಡೆಸಿದರು.
    ವ್ಯಾಪಾರದಲ್ಲಿ ಕುಸಿತ: ಜಾತ್ರೆಯಲ್ಲಿ ಗೃಹೋಪಯೋಗಿ ವಸ್ತು ಹಾಗೂ ಕೃಷಿ ಪರಿಕರಗಳ ಮಾರಾಟ ಬಲು ಜೋರಾಗಿ ನಡೆಯಬೇಕಿತ್ತು. ಮಿಠಾಯಿ ಅಂಗಡಿ, ಹೋಟೆಲ್ ವ್ಯಾಪಾರ, ಜವಳಿ, ತಂಪುಪಾನೀಯ ಹಾಗೂ ಪೂಜಾ ಸಾಮಗ್ರಿ ವ್ಯಾಪಾರದಲ್ಲಿಯೂ ಕುಸಿತ ಕಂಡು ಬಂದಿತು. ಹೊರಗಿನಿಂದ ಜಾತ್ರೆಗೆ ಆಗಮಿಸಿ ಅಂಗಡಿ ಮುಂಗಟ್ಟು ನಿರ್ಮಿಸಿದ್ದ ವರ್ತಕರು ವ್ಯಾಪಾರ ವಹಿವಾಟು ಕೈಕೊಟ್ಟ ಹಿನ್ನೆಲೆ ಕಂಗಾಲಾಗಿದ್ದರು. ದಿನವಿಡೀ ಗಿಜಿಗುಡಬೇಕಾಗಿದ್ದ ಜಾತ್ರೆ ಜನರಿಲ್ಲದೆ ಭಣಗುಡುತ್ತಿತ್ತು. ಈ ನಡುವೆ ಸಿದ್ದಪ್ಪಾಜಿ ಜಾತ್ರೆ ಹಾಗೂ ಪವಾಡಗಳ ಕುರಿತ ವಿಡಿಯೋ ಹಾಗೂ ಧ್ವನಿ ಸುರುಳಿ ಕ್ಯಾಸೆಟ್ ಮಾರಾಟ ಬಲು ಜೋರಾಗಿತ್ತು.
    ಸೋಮವಾರ ಪಂಕ್ತಿಸೇವೆ: ಚಿಕ್ಕಲ್ಲೂರು ಜಾತ್ರೆಯ 4ನೇ ದಿನವಾದ ಸೋಮವಾರ ಪಂಕ್ತಿ ಸೇವೆ(ಮಾಂಸಾಹಾರ) ನಡೆಯಲಿದ್ದು, ಜಾತ್ರೆಗೆ ಆಗಮಿಸಿದ ಭಕ್ತರು, ಅಲ್ಲಲ್ಲಿ ಹಾಕಿರುವ ತಮ್ಮ ಬಿಡಾರಗಳಲ್ಲಿ ಬಾಡೂಟ ತಯಾರಿಸಿ ನೆಂಟರಿಷ್ಟರೊಂದಿಗೆ ಸೇರಿ ಸಹ ಭೋಜನ ಮಾಡಲಿದ್ದಾರೆ. ಈ ನಡುವೆ ಜಿಲ್ಲಾಡಳಿತ ಜಾತ್ರಾ ಆವರಣಕ್ಕೆ ಪ್ರಾಣಿ ಸಾಗಣೆಯನ್ನು ನಿರ್ಬಂಧಿಸಿದ್ದು, ಪಂಕ್ತಿಸೇವೆಗೆ ಕಳೆದ ವರ್ಷದಂತೆ ಸಾಕಷ್ಟು ಹಿನ್ನೆಡೆಯಾಗುವ ಸಾಧ್ಯತೆಯಿದೆ ಹೆಚ್ಚಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts