ಅಯ್ಯಪ್ಪ ಭಕ್ತರಿಂದ ಪ್ರತಿಭಟನಾ ಮೆರವಣಿಗೆ

ಕೊಳ್ಳೇಗಾಲ: ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ನಡೆಯುತ್ತಿರುವ ಭಕ್ತರ ಮೇಲಿನ ಹಲ್ಲೆ ಹಾಗೂ ನಿಷೇಧಾಜ್ಞೆ ವಿರೋಧಿಸಿ ಪಟ್ಟಣದಲ್ಲಿ ಗುರುವಾರ ಸ್ಥಳೀಯ ಶ್ರೀಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಭಕ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪಟ್ಟಣದ ಬಸ್ ನಿಲ್ದಾಣದಿಂದ ಮೆರವಣಿಗೆ ಆರಂಭಿಸಿದ ಭಕ್ತರು, ಪ್ರಮುಖ ರಸ್ತೆಗಳಲ್ಲಿ ಸಾಗಿ ಮಿನಿ ವಿಧಾನಸೌಧದ ಆವರಣದಲ್ಲಿ ಉಪ ವಿಭಾಗಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರಿಗೆ ಮನವಿ ಸಲ್ಲಿಸಿದರು.

ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ಖಜಾಂಚಿ ಡಿ.ನಾಗರಾಜು ಮಾತನಾಡಿ, ಕೇರಳದ ಶಬರಿಮಲೆಯಲ್ಲಿ ಭಕ್ತರ ಮೇಲೆ ನಡೆಯುತ್ತಿರುವ ಹಲ್ಲೆ ಹಾಗೂ ದೇವಸ್ಥಾನದ ಸುತ್ತಲೂ ಅಲ್ಲಿನ ಸರ್ಕಾರ ಹೇರಿರುವ ನಿಷೇಧಾಜ್ಞೆ ಖಂಡನೀಯ. ಶಬರಿಮಲೆಗೆ ತೆರಳುವ ಭಕ್ತರನ್ನು ಸರ್ಕಾರ ಉಗ್ರರಂತೆ ಬಿಂಬಿಸುತ್ತಿರುವುದು ಸರಿಯಲ್ಲ, ರಾತ್ರಿ ವೇಳೆ ಭಕ್ತರನ್ನು ದೇವಸ್ಥಾನದ ಬಳಿ ಉಳಿದುಕೊಳ್ಳಲು ಬಿಡುತ್ತಿಲ್ಲ ಎಂದರಲ್ಲದೆ, ಈ ಕೂಡಲೇ ಇದೆಲ್ಲವನ್ನು ಬಿಟ್ಟು ಮೊದಲಿನಂತೆ ಭಕ್ತರು ದೇವರ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಟ್ರಸ್ಟ್ ಅಧ್ಯಕ್ಷ ವಿ.ತ್ಯಾಗರಾಜ್, ಕಾರ್ಯದರ್ಶಿ ನಾಗೇಂದ್ರ, ಖಜಾಂಚಿ ಟಿ.ಬಿ.ಸುರೇಶ್ ಬಾಬು, ಮೇಲ್ವಿಚಾರಕ ಪಿ.ನಂಜಯ್ಯ, ಭಕ್ತರಾದ ಲಕ್ಷ್ಮೀಪತಿ, ಟಿ.ವಿ.ನಂದಕುಮಾರ್, ಶಿವಮೂರ್ತಿ, ಜಿ.ಪಿ.ಶಿವಕುಮಾರ್, ರಾಜಶೇಖರ್, ನಾರಾಯಣ್, ಶಾಂತರಾಜ್, ಕುಮಾರ್, ನಾಗೇಂದ್ರ, ಚಂದ್ರು, ಬಾಬು ಮತ್ತಿತರರಿದ್ದರು.