ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ

ಕೊಳ್ಳೇಗಾಲ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಶನಿವಾರ ಸಂಜೆ ಪಟ್ಟಣದ ಹಳೇ ಕುರುಬರ ಬೀದಿಯಲ್ಲಿ ಹೆಂಚಿನ ಮನೆಯೊಂದು ಸುಟ್ಟು ಹೋಗಿದೆ.

ನಿವಾಸಿ ಮಲ್ಲಮ್ಮ ಎಂಬುವರಿಗೆ ಸೇರಿದ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದೆ. ಇದರಿಂದ ಮನೆಯಲ್ಲಿದ್ದ ಗೃಹ ಬಳಕೆ ವಸ್ತು, ಬಟ್ಟೆಗಳು ಬೆಂಕಿಗಾಹುತಿಯಾಗಿವೆ. ಅವಘಡದ ವೇಳೆ ಛಾವಣಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಅಕ್ಕ ಪಕ್ಕದ ಮನೆಯವರು ಗಮನಿಸಿ ಬೆಂಕಿಯನ್ನು ನಂದಿಸಲು ಮುಂದಾದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಅಧಿಕಾರಿ ರಮೇಶ್, ಸಿಬ್ಬಂದಿ ಚೆನ್ನಪ್ಪಶೆಟ್ಟಿ, ಹೇಮಂತ್, ಶ್ರೀಧರ್, ಪ್ರದೀಪ್, ಸಾಗರ್ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಸ್ಥಳಕ್ಕೆ ಶಾಸಕ ಎನ್.ಮಹೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಸೆಸ್ಕ್ ಇಲಾಖೆ ಮೂಲಕ ಸೂಕ್ತ ಪರಿಹಾರ ದೊರಕಿಸುವ ಭರವಸೆ ನೀಡಿದರು.