ಸವಿತಾ ಮಹರ್ಷಿ ಜಯಂತಿ

ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಶಾಸಕ ಸಲಹೆ

ಕೊಳ್ಳೇಗಾಲ: ಸವಿತಾ ಮಹರ್ಷಿ ಸಾಕ್ಷಾತ್ ಪರಶಿವನ ಬಲಗಣ್ಣಿನಿಂದ ಸೃಷ್ಟಿಯಾದ ಮಹಾಪುರುಷ ಎಂದು ಹನೂರು ಶಾಸಕ ಆರ್.ನರೇಂದ್ರ ಬಣ್ಣಿಸಿದರು.
ಪಟ್ಟಣದ ಗುರುಭವನದಲ್ಲಿ ಶುಕ್ರವಾರ ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಾಶಿಯಲ್ಲಿ ಸಿಕ್ಕಿರುವ ನಾವಿಕ್ ಎಂಬ ಪೌರಾಣಿಕ ಗ್ರಂಥದಲ್ಲಿ ಸವಿತಾ ಮಹರ್ಷಿ ಜನ್ಮ ರಹಸ್ಯ ಅಡಕವಾಗಿದೆ. ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು ಯಜ್ಞ ಮಾಡುವಾಗ ನಿರತರಾಗಿದ್ದ ವೇಳೆ ತಮ್ಮ ಸೇವೆಗೆಂದು ಪರಶಿವ ತನ್ನ ಬಲಗಣ್ಣಿನಿಂದ ಸವಿತಾ ಮಹರ್ಷಿಯನ್ನು ಸೃಷ್ಟಿ ಸುತ್ತಾನೆ. ಬಳಿಕ ನನಗೆ ಸಲ್ಲಿಸಿದ ಸೇವೆಯನ್ನು ಭೂ ಲೋಕದ ಜನರಿಗೂ ಸಲ್ಲಿಸುವಂತೆ ಅಗತ್ಯ ಸಲಕರಣೆ, ಡೋಲು, ನಗಾರಿಯೊಂದಿಗೆ ಸಂಗೀತ ಕಲೆಯನ್ನು ವರವನ್ನಾಗಿ ನೀಡಿ ಕಳುಹಿಸುತ್ತಾನೆ. ಆ ಸಂತತಿ ಇದೀಗ ಸವಿತಾ ಸಮಾಜವಾಗಿದೆ ಎಂದು ತಿಳಿಸಿದರು.
ಕ್ಷೌರಿಕ ಕಾಯಕ ಕೀಳಲ್ಲ. ಇದೊಂದು ಕುಲ ಕಸುಬಾಗಿದೆಯಾದರೂ, ಕುಟುಂಬದ ಒಬ್ಬ ಸದಸ್ಯನಿಗೆ ಇದನ್ನು ಮೀಸಲಿಟ್ಟು ಉಳಿ ದವರು ಹಿಂದುಳಿದ ವರ್ಗಗಳ ಇಲಾಖೆಯಿಂದ ದೊರೆಯುವ ಸವಲತ್ತುಗಳನ್ನು ಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ತಿಳಿಸಿದರು.
ಪಟ್ಟಣದ ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಆರ್.ಕುಮಾರ್ ಮಾತನಾಡಿ, ಶಿವನ ಬಲಗಣ್ಣಿನಿಂದ ಜನಿಸಿದ ಸವಿತಾ ಮಹರ್ಷಿ ಆಯುರ್ವೇದ ಶಕ್ತಿಯುಳ್ಳ ಅಮೃತ ಕುಂಬವನ್ನು ವರವಾಗಿ ಪಡೆದು ಭೂ ಲೋಕದಲ್ಲಿ ಕಾಣಿ ಸಿಕೊಳ್ಳುತ್ತಾನೆ ಎಂಬುದು ಗ್ರಂಥವೊಂದರಿಂದ ತಿಳಿಯುತ್ತದೆ. ಇತಿಹಾಸ ಪುಟಗಳಲ್ಲಿ ಭಾರತದ ಮೊದಲ ರಾಜ ಮನೆತನ ಸವಿತಾ ಸಮಾಜದವರದ್ದು ಎಂದು ತಿಳಿದು ಬರುತ್ತದೆ. ಮಗಧ ಸಾಮ್ರಾಜ್ಯವನ್ನು ನವ ನಂದಕರು ಆಳ್ವಿಕೆ ಮಾಡಿದರು. ನೀರಾವರಿ ಯೋಜ ನೆಗಳನ್ನು ಇವರ ಕಾಲದಲ್ಲಿ ತರಲಾಯಿತು. ನಂತರ ಕುತಂತ್ರದಿಂದ ಸವಿತಾ ಸಮಾಜದ ಸಾಮ್ರಾಜ್ಯ ಅಳಿಯಿತು ಎಂದು ಹೇಳಿದರು.
ಸವಿತಾ ಮಹರ್ಷಿ ಜಯಂತಿ ಆಚರಣೆಯಿಂದ ಈ ಸಮುದಾಯದ ಜನರ ಜಾತಿ, ಘನತೆ ಮತ್ತು ಇತಿಹಾಸ ತಿಳಿಯಲು ಅವಕಾಶ ವಾಗುತ್ತದೆ. ಜಾತಿ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಪ್ರಗತಿ ಸಾಧಿಸಲು ದೃಢ ಮನಸ್ಸು ಮಾಡಬೇಕು. ಸಮಾಜದಲ್ಲಿ ತನ್ನ ಸಮುದಾಯವನ್ನು ಗುರುತಿಸಿಕೊಳ್ಳಲು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಅಭಿಪ್ರಾಯಪಟ್ಟರು. ತಾಪಂ ಅಧ್ಯಕ್ಷ ರಾಜೇಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್‌ಕುಮಾರ್, ತಹಸೀಲ್ದಾರ್ ಕೆ.ಕುನಾಲ್, ಬಿಇಒ ಎಸ್.ಚಂದ್ರಪಾಟೀಲ್, ಸಾಹಿತಿ ದೊರೆಸ್ವಾಮಿ ಮದ್ದೂರು, ಸವಿತಾ ಸಮಾಜ ಸಂಘದ ಅಧ್ಯಕ್ಷ ಸೋಮಣ್ಣ, ಗೌರವಾಧ್ಯಕ್ಷ ನಾರಾಯಣಶೆಟ್ಟಿ, ಉಪಾಧ್ಯಕ್ಷ ಸುರೇಶ್, ಪ್ರಧಾನ ಕಾರ್ಯದರ್ಶಿ ಎಸ್.ರಾಚಶೆಟ್ಟಿ(ತಮ್ಮಯ್ಯ), ಕಾರ್ಯದರ್ಶಿ ಮಹೇಶ್, ಸಹ ಕಾರ್ಯದರ್ಶಿ ನಾಗಣ್ಣ, ಮುಖಂಡರಾದ ರಂಗಸ್ವಾಮಿ, ಮಂಟಯ್ಯ, ಮಹದೇವು, ಡಿ.ಎಂ.ಮಹದೇವು, ಮಹೇಂದ್ರ, ಪುಟ್ಟಲಿಂಗಶೆಟ್ಟಿ, ಪುನೀತ್ ಹಾಜರಿದ್ದರು.
ಅದ್ದೂರಿ ಮೆರವಣಿಗೆ: ಟ್ಟಣದ ಬಸ್ ನಿಲ್ದಾಣದ ವರಸಿದ್ಧಿ ವಿನಾಯಕ ದೇಗುಲದಿಂದ ಗುರುಭವನದವರೆಗೆ ಸಮಾರಂಭಕ್ಕೂ ಮುನ್ನ ಅದ್ದೂರಿ ಮೆರವಣಿಗೆ ನಡೆಯಿತು. ಸವಿತಾ ಮಹರ್ಷಿ ಭಾವಚಿತ್ರವನ್ನು ಪುಷ್ಪಾಲಂಕೃತಗೊಂಡ ತೆರೆದ ವಾಹನದಲ್ಲಿರಿಸಿ ಮೆರವಣಿಗೆ ನಡೆಸಲಾಯಿತು. ಸರ್ಕಲ್ ಇನ್ಸ್‌ಪೆಕ್ಟರ್ ಆರ್.ಶ್ರೀಕಾಂತ್ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ವೀರಗಾಸೆ ಕುಣಿತ ಹಾಗೂ ಮಂಗಳವಾದ್ಯದ ಮೇಳಕ್ಕೆ ಯುವಕರು ಕುಣಿದು ಕುಪ್ಪಳಿಸಿದರು.