ಅಕ್ರಮ ಮನೆ ಕೂಡಲೇ ತೆರವುಗೊಳಿಸಿ

ಕೊಳ್ಳೇಗಾಲ: ತಾಲೂಕಿನ ಪಾಳ್ಯ ಗ್ರಾಮದ ಸರ್ಕಾರಿ ಸ್ಥಳದಲ್ಲಿ ಗ್ರಾಪಂ ಬಿಲ್ ಕಲೆಕ್ಟರ್ ಸಿದ್ದಪ್ಪಸ್ವಾಮಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಯನ್ನು ಕೂಡಲೇ ತೆರವುಗೊಳಿಸುವಂತೆ ತಹಸೀಲ್ದಾರ್ ರಾಯಪ್ಪ ಹುಣಸಗಿ ಅವರಿಗೆ ಗುರುವಾರ ಚಾಮರಾಜನಗರ ಜಿಲ್ಲಾ ಲೋಕಾಯುಕ್ತ ಇನ್ಸ್‌ಪೆಕ್ಟರ್ ಬಿ.ವಿ.ರೂಪಶ್ರೀ ಸೂಚಿಸಿದರು.

ಪಟ್ಟಣದ ಪಿಡಬ್ಲುೃಡಿ ಅತಿಥಿಗೃಹದಲ್ಲಿ ಬೆಳಗ್ಗೆ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ವೇಳೆ ಪಾಳ್ಯ ಗ್ರಾಮದ ಆರ್‌ಟಿಐ ಕಾರ್ಯಕರ್ತ ರಂಗಸ್ವಾಮಿ, ಲೋಕಾಯುಕ್ತ ಇನ್ಸ್‌ಪೆಕ್ಟರ್ ಅವರಿಗೆ ಅಕ್ರಮ ಮನೆ ನಿರ್ಮಾಣದ ಕುರಿತು ದೂರು ನೀಡಿ, ಡಿಸಿಯವರು ಸಹ ಮನೆ ನಿರ್ಮಿಸಿರುವ ಜಾಗ ಸರ್ಕಾರಕ್ಕೆ ಸೇರಿದೆ ಎಂದು ತಿಳಿಸಿದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಮನೆ ತೆರವಿಗೆ ಪಾಳ್ಯ ನಾಡಕಚೇರಿಯ ಉಪ ತಹಸೀಲ್ದಾರ್‌ಗೆ ಆದೇಶಿಸಿದ್ದರೂ ಈವರೆಗೂ ತೆರವಾಗಿಲ್ಲ ಎಂದರು. ಈ ವೇಳೆ ತಹಸೀಲ್ದಾರ್‌ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಬಿ.ವಿ.ರೂಪಶ್ರೀ ಸೂಚಿಸಿದರು.

ತಾರತಮ್ಯ ಆರೋಪ: ಪಟ್ಟಣದ ಎಪಿಎಂಸಿ ರಸ್ತೆ ವಿಸ್ತರಣೆ ವೇಳೆ ನಗರಸಭೆ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸಿದ್ದಾರೆ ಎಂದು ಇಲ್ಲಿನ ನಿವಾಸಿ ರವಿಕುಮಾರ್ ಅಳಲು ತೋಡಿಕೊಂಡರು. ರಸ್ತೆಯನ್ನು 60 ಅಡಿಗೆ ವಿಸ್ತರಣೆ ಮಾಡುವ ಸಂದರ್ಭ ನಮಗೆ ಸೇರಿದ ಅಂಗಡಿ ಮಳಿಗೆ ಮುಂದೆ ಇತರ ಸ್ಥಳಗಳಂತೆ 55 ಅಡಿ ರಸ್ತೆ ನಿರ್ಮಿಸಿ ಎಂದಿದ್ದಕ್ಕೆ ಒಪ್ಪಲಿಲ್ಲ ಎಂದಾಗ, ಇನ್ಸ್‌ಪೆಕ್ಟರ್ ಅವರು, ಕೂಡಲೇ ಅಳತೆ ಮಾಡಿಸಿ ವರದಿ ನೀಡುವಂತೆ ನಗರಸಭೆ ವ್ಯವಸ್ಥಾಪಕ ಲಿಂಗರಾಜು ಅವರಿಗೆ ಸೂಚಿಸಿದರು.

ಸರ್ಕಾರಿ ನೌಕರನಿಗೂ ಮನೆ: ಪಾಳ್ಯ ಗ್ರಾಮದ ನಿವಾಸಿ ರವಿ ಎಂಬಾತ ಕೊಳ್ಳೇಗಾಲ ಪಿಎಲ್‌ಡಿ ಬ್ಯಾಂಕ್‌ನ ನೌಕರನಾಗಿದ್ದರೂ ಪಾಳ್ಯ ಗ್ರಾಪಂನಿಂದ ಮನೆ ಮಂಜೂರಾಗಿದೆ ಎಂದು ಸಿದ್ದಮಹದೇವನಾಯ್ಕ ಎಂಬುವವರು ದೂರು ನೀಡಿದರು. ಈ ಕುರಿತು ಪರಿಶೀಲಿಸಿ ವರದಿ ನೀಡಲು ತಾಪಂ ವ್ಯವಸ್ಥಾಪಕ ಶಂಕರ್ ಅವರಿಗೆ ಇನ್ಸ್‌ಪೆಕ್ಟರ್ ಖಡಕ್ ಸೂಚನೆ ನೀಡಿದರು.

ಲೋಕಾಯುಕ್ತ ಸಿಬ್ಬಂದಿ ಕೆಲಸವೂ ಆಗ್ತಿಲ್ಲ: ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸವಾಗದಿರುವ ಬಗ್ಗೆ ದೂರು ಆಲಿಸುತ್ತಿದ್ದ ಲೋಕಾಯುಕ್ತ ಇನ್ಸ್‌ಪೆಕ್ಟರ್ ಅವರಿಗೆ ತಮ್ಮ ಕಚೇರಿಯ ಕ್ಲರ್ಕ್ ಒ.ಕೆ.ಚಿತ್ರಾ ಅವರ ಕೆಲಸ 6 ತಿಂಗಳಿಂದ ಆಗದಿರುವ ಬಗ್ಗೆ ಗರಂ ಆದರು. ಪಟ್ಟಣದ ಗರಡಿಬೀದಿಯಲ್ಲಿರುವ ಒ.ಕೆ.ಚಿತ್ರಾ ಮನೆಗೆ ತೆರಳುವ ಪುದುವಿನ ಜಾಗ 318 ಅಡಿಯಷ್ಟನ್ನು ಅಸೆಸ್‌ಮೆಂಟ್ ಸಂಖ್ಯೆ 432ರ ಆಸ್ತಿ ಮಾಲೀಕರಿಗೆ ನಗರಸಭೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದೆ.

ಇದನ್ನು ತೆರವುಗೊಳಿಸುವಂತೆ ಒ.ಕೆ.ಚಿತ್ರ ಹಾಗೂ ಅವರ ಸಹೋದರ ಒ.ಕೆ.ನಾಗೇಂದ್ರ 6 ತಿಂಗಳಿಂದ ಲೋಕಾಯುಕ್ತ ಇನ್ಸ್‌ಪೆಕ್ಟರ್ ಅವರಿಂದ ನಗರಸಭೆ ಅಧಿಕಾರಿಗಳಿಗೆ ಮೌಖಿಕವಾಗಿ ಸೂಚಿಸಿದರೂ ಪ್ರಯೋಜನವಾಗಿಲ್ಲ ಎಂಬ ವಿಚಾರ ಇಂದೂ ಪುನರಾವರ್ತನೆಗೊಂಡಿತು. ಇದಕ್ಕೆ ಸಿಟ್ಟಾದ ಇನ್ಸ್‌ಪೆಕ್ಟರ್, ನಗರಸಭಾ ವ್ಯವಸ್ಥಾಪಕ ಲಿಂಗರಾಜು ಮತ್ತು ಖಾತಾ ವಿಭಾಗದ ವಿಷಯ ನಿರ್ವಹಕ ಪ್ರದೀಪ್‌ಗೆ ತರಾಟೆ ತೆಗೆದುಕೊಂಡರು.