ಎಚ್.ಬಿ.ಸಿ.ಸಿ ತಂಡಕ್ಕೆ ಪ್ರಶಸ್ತಿ

ಕೊಳ್ಳೇಗಾಲ: ಪಟ್ಟಣದ ಎಂ.ಜಿ.ಎಸ್.ವಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಅಫಿಶಿಯಲ್ ರಿಕ್ರಿಯೇಷನ್ ಕ್ಲಬ್ ನೇತೃತ್ವದಲ್ಲಿ 3 ದಿನಗಳ ಕಾಲ ನಡೆದ ಜಿಲ್ಲಾ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಮರಾಜನಗರದ ಎಚ್.ಬಿ.ಸಿ.ಸಿ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಪ್ರಕಾಶ್ ಶಂಕನಪುರ, ಯುವ ಮುಖಂಡ ಪ್ರಜ್ವಲ್, ಚರಣ್ ಅವರ ಸಹಯೋಗದೊಂದಿಗೆ ಅಫಿಶಿಯಲ್ ರಿಕ್ರಿಯೇಷನ್ ಕ್ಲಬ್ ಜ.25ರಿಂದ ಕ್ರಿಕೆಟ್ ಪಂದ್ಯಾವಳಿಯನ್ನು ಪಟ್ಟಣದಲ್ಲಿ ಆಯೋಜಿಸಿತ್ತು. ಈ ವೇಳೆ 8 ತಂಡ ಪಂದ್ಯದಲ್ಲಿ ಪಾಲ್ಗೊಂಡು ರೋಚಕ ಪ್ರದರ್ಶನ ನೀಡಿದವು.

ಚಾಮರಾಜನಗರದ ಎಚ್.ಬಿ.ಸಿ.ಸಿ ತಂಡ ಪ್ರಥಮ ಸ್ಥಾನ ಪಡೆದು 50 ಸಾವಿರ ರೂ.ನಗದು ಹಾಗೂ ಟ್ರೋಫಿ ತನ್ನದಾಗಿಸಿಕೊಂಡರೆ, ಇದೇ ತಂಡದ ಪ್ರಶಾಂತ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ದ್ವಿತೀಯ ಬಹುಮಾನವಾಗಿ 30 ಸಾವಿರ ನಗದನ್ನು ಕೊಳ್ಳೇಗಾಲದ ಭೀಮಾ ವಾರಿಯರ್ಸ್‌ ಪಡೆದುಕೊಂಡಿತು. ವಿಜೇತ ತಂಡಕ್ಕೆ ಶಾಸಕ ಎನ್.ಮಹೇಶ್ ಬಹುಮಾನ ವಿತರಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಎಸ್.ರಮೇಶ್, ತಾ.ಪಂ.ಮಾಜಿ ಉಪಾಧ್ಯಕ್ಷ ಬಿ.ಬಸವಣ್ಣ, ಯುವ ಶಕ್ತಿ ವೇದಿಕೆ ರಾಜ್ಯ ಸಂಚಾಲಕ ಎಸ್.ಸಿದ್ದಪ್ಪಾಜಿ, ಕ್ರಿಕೆಟ್ ಪಂದ್ಯಾವಳಿ ವ್ಯವಸ್ಥಾಪಕ ಪ್ರಜ್ವಲ್, ಪ್ರಕಾಶ್ ಶಂಕನಪುರ, ಚರಣ್, ಮುಖಂಡರಾದ ಪಿ.ರಾಜೇಂದ್ರ, ಶ್ರೀಧರ್, ಜಗದೀಶ್ ಶಂಕನಪುರ, ನಿಂಗರಾಜ್ ಇದ್ದರು.