ಮಹಿಳೆಗೆ ಸಿಗದ ಸೂಕ್ತ ಸ್ಥಾನಮಾನ

ಮಾಜಿ ಶಾಸಕಿ ಕೆ.ಎಸ್.ಪರಿಮಳನಾಗಪ್ಪ ಬೇಸರ

ವಿಜಯವಾಣಿ ಸುದ್ದಿಜಾಲ ಕೊಳ್ಳೇಗಾಲ
ಶತಮಾನ ಕಳೆದರೂ ಮಹಿಳೆಯರಿಗೆ ಸಮಾಜದಲ್ಲಿ ಸೂಕ್ತ ಸ್ಥಾನಮಾನ ದೊರಕಿಲ್ಲ ಎಂದು ಮಾಜಿ ಶಾಸಕಿ ಕೆ.ಎಸ್.ಪರಿಮಳಾ ನಾಗಪ್ಪ ಬೇಸರಿಸಿದರು.
ಪಟ್ಟಣದ ಜೆಎಸ್‌ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಅಕ್ಕನ ಬಳಗ ವೀರಶೈವ ಮಹಿಳಾ ವೇದಿಕೆ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪುರುಷ ಪ್ರಧಾನ ಸಮಾಜದಲ್ಲಿ ವಿಶೇಷ ಪಾತ್ರ ನಿರ್ವಹಿಸುವ ಮಹಿಳೆಗೆ ಸಾಮಾಜಿಕ ಮತ್ತು ಬೌದ್ಧಿಕ ಗೌರವ ಸಲ್ಲಬೇಕು. ಕೇವಲ ಭೋಗದ ವಸ್ತುವಾಗಿ ಮಹಿಳೆಯನ್ನು ಕಾಣದೆ ಪ್ರಧಾನ ಅಥವಾ ಸಮಾನತೆ ಸ್ಥಾನಗಳಲ್ಲಿಟ್ಟು ಮಾನ್ಯತೆ ನೀಡಬೇಕು. ಭಕ್ತಿ ಭಂಡಾರಿ ಬಸವಣ್ಣ ಅವರ ಕಾಲದಲ್ಲಿ ಮಹಿಳೆಯರಿಗೆ ದೊರೆಯುತ್ತಿದ್ದ ಸಂಸ್ಕಾರ ಮರುಕಳಿಸಬೇಕು ಎಂದು ಅಭಿಪ್ರಾಯಪಟ್ಟರು.
ಬೆಂಗಳೂರಿನ ಕಲಾಕೃಷಿ ಫೌಂಡೇಷನ್ ಅಧ್ಯಕ್ಷೆ ಎಂ.ಎಸ್.ಜಯಶ್ರೀ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನ ಹಾಗೂ ಗೌರವ ದೊರಕುವ ದಿನ ದೂರವಿಲ್ಲ. ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಮಹಿಳೆಯ ಶಕ್ತಿ ಮತ್ತು ಮಹತ್ವ ಎಲ್ಲೆಡೆ ಜಗಜ್ಜಾಹೀರಾಗಿದೆ. ಆಧುನಿಕ ಯುಗದಲ್ಲಿ ಹಲವಾರು ಪ್ರಪ್ರಥಮಗಳನ್ನು ಸಾಧಿಸಿದ್ದಾರೆ. ಮಹಿಳೆಯರನ್ನು ಎಲ್ಲರೂ ಪ್ರೋತ್ಸಹಿಸಿದ್ದಲ್ಲಿ ತಕ್ಕ ಪ್ರತಿಫಲ ಸಿಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಎಂ.ಎಸ್.ಜಯಶ್ರೀ ಅವರನ್ನು ಸನ್ಮಾನಿಸಲಾಯಿತು.ವೇದಿಕೆ ಸದಸ್ಯರು ನಡೆಸಿಕೊಟ್ಟ ವೀಣಾ ವಾದನ ಹಾಗೂ ಫ್ಯಾಷನ್ ಶೋ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಪಟ್ಟಣದ ಹಿರಿಯ ವೈದ್ಯ ಡಾ.ಶಿವರುದ್ರಸ್ವಾಮಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಕಜ್ಜಿಹುಂಡಿ ಪುಟ್ಟಮಲ್ಲಪ್ಪ, ಜೆಎಸ್‌ಎಸ್ ಮಹಿಳಾ ಕಾಲೇಜಿನ ಪ್ರಾಚಾರ್ಯ ಉಮೇಶ, ವೇದಿಕೆ ಅಧ್ಯಕ್ಷೆ ರೂಪಾ ತೋಟೇಶ್, ಕಾರ್ಯದರ್ಶಿ ಗೀತಾ ಮಂಜುನಾಥ್ ಉಪಸ್ಥಿತರಿದ್ದರು.