ವಶಪಡಿಸಿಕೊಂಡಿದ್ದ ಪ್ರಾಣಿಗಳು ವಾಪಸ್

ಕೊಳ್ಳೇಗಾಲ: ತಾಲೂಕಿನ ಇತಿಹಾಸ ಪ್ರಸಿದ್ಧ ಘನನೀಲಿ ಶ್ರೀ ಸಿದ್ದಪ್ಪಾಜಿ ಚಿಕ್ಕಲ್ಲೂರು ಜಾತ್ರೆ 5 ದಿನಗಳ ಕಾಲ ಯಶಸ್ವಿಯಾಗಿ ನಡೆದಿದ್ದು, ಈ ವೇಳೆ ಭಕ್ತರಿಂದ ವಶಪಡಿಸಿಕೊಂಡಿದ್ದ ಕುರಿ, ಕೋಳಿ ಇತ್ಯಾದಿ ಪ್ರಾಣಿಗಳನ್ನು ಶನಿವಾರ ವಾಪಸ್ ನೀಡಲಾಯಿತು.
ಜಾತ್ರೆ ಪ್ರಾರಂಭದಿಂದ ಶನಿವಾರವರೆಗೆ ಮತ್ತಿಪುರ ಕ್ರಾಸ್ ಪೊಲೀಸ್ ಚೆಕ್‌ಪೋಸ್ಟ್, ಬಾಣೂರು, ತೆಳ್ಳನೂರು, ರಾಚಪ್ಪಾಜಿನಗರ, ಹಳೇ ಮಠ, ಹೊಸ ಮಠ ಚೆಕ್ ಪೋಸ್ಟ್, ಜಾತ್ರೆಯ ಆವರಣದಲ್ಲಿ 42 ಮೇಕೆ, 5 ಕುರಿ ಹಾಗೂ 75 ಕೋಳಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಸೆಕ್ಟರ್ ಅಧಿಕಾರಿಗಳು ಮತ್ತು ಪೊಲೀಸರು ಮೂರು ಪಾಳಿಯಲ್ಲಿ ಕಾರ್ಯಾಚರಣೆ ನಡೆಸಿದ್ದರು. ಶನಿವಾರ ಪಟ್ಟಣ ಬಸ್ತಿಪುರ ಬಡಾವಣೆಯಲ್ಲಿ ಸಂಬಂಧಿಸಿದ ಭಕ್ತರಿಗೆ ಹಿಂದಿರುಗಿಸಲಾಯಿತು.
ಶನಿವಾರ ಚಿಕ್ಕಲ್ಲೂರಿನಲ್ಲಿ ಪ್ರಾಣಿಬಲಿ ನಿಷೇಧಾಜ್ಞೆ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಮೈಸೂರು, ಗುಂಡ್ಲುಪೇಟೆ, ಪಾಂಡವಪುರ, ರಾಮನಗರ, ಚನ್ನಪಟ್ಟಣ, ಚಾಮರಾಜನಗರ, ಮಳ್ಳವಳ್ಳಿ, ಕನಕಪುರ, ವರುಣ, ನಂಜನಗೂಡು ಭಾಗದ ಭಕ್ತರಿಂದ ವಶಪಡಿಸಿಕೊಂಡಿದ್ದ ಮೇಕೆ, ಕುರಿ ಮತ್ತು ಕೋಳಿಗಳನ್ನು ಪಶು ವೈದ್ಯ ಡಾ.ಶಿವಕುಮಾರ್, ಸಹಾಯಕ ವೈದ್ಯ ಡಾ.ಜಯಪ್ರಕಾಶ್ ಪರಿಶೀಲಿಸಿ ವಿತರಿಸಿದರು.
ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಲ್.ವೆಂಕಟರಾಮ್ ಪ್ರಾಣಿಗಳ ರಕ್ಷಣೆ ಜವಾಬ್ದಾರಿ ಹೊತ್ತಿದ್ದರು. ಪಟ್ಟಣದ ಬಸ್ತಿಪುರ ಬಡಾವಣೆಯಲ್ಲಿರುವ ಶಿವರಾಜ್‌ಗೆ ಸೇರಿದ ಕುರಿ ಮತ್ತು ಉಣ್ಣೆ ಸಹಕಾರ ಸಂಘದ ಆಶ್ರಯದಲ್ಲಿ 5 ದಿನಗಳ ಕಾಲ ಪ್ರಾಣಿಗಳನ್ನು ರಕ್ಷಿಸಲಾಗಿತ್ತು.
29 ಸಾವಿರ ರೂ. ಮೌಲ್ಯದ ಮದ್ಯ ಜಪ್ತಿ: ಜಿಲ್ಲಾಡಳಿತ ಚಿಕ್ಕಲ್ಲೂರಿನ 5 ಕಿಮೀ ಸುತ್ತಲಿನ ಪ್ರದೇಶದಲ್ಲಿ 6ದಿನಗಳ ಕಾಲ ಮದ್ಯ ಮಾರಾಟ ಮತ್ತು ಸಾಗಣೆ ನಿಷೇಧಿಸಲಾಗಿತ್ತು. ಅಬಕಾರಿ ಇನ್ಸ್‌ಪೆಕ್ಟರ್ ಮೀನಾ ನೇತೃತ್ವದ ತಂಡ 4 ಚೆಕ್‌ಪೋಸ್ಟ್‌ಗಳಲ್ಲಿ 29 ಸಾವಿರ ರೂ.ಮೌಲ್ಯದ ಅಕ್ರಮ ಮದ್ಯ ಸಾಗಣೆ ತಡೆಯುವಲ್ಲಿ ಯಶಸ್ವಿಯಾಗಿತ್ತು.
ಚಿಕ್ಕಲ್ಲೂರು ಜಾತ್ರೆಗೆ ಕೊಳ್ಳೇಗಾಲ ಡಿಪೋನಿಂದ 14 ಸಾರಿಗೆ ಸಂಸ್ಥೆ ಬಸ್ ನೀಡಲಾಗಿತ್ತು. 26 ಕಿ.ಮೀ.ಪ್ರಯಾಣಕ್ಕೆ 40 ರೂ. ಪ್ರಯಾಣ ದರ ನಿಗದಿಗೊಳಿಸಿದ್ದ ಸಾರಿಗೆ ಸಂಸ್ಥೆ ಬಸ್‌ಗೆ ನಿರೀಕ್ಷೆ ಮೀರಿ ಪ್ರಯಾಣಿಕರು ಹರಿದು ಬಂದರು.

ಪ್ರಾಣಿ ಬಲಿ ನಿಷೇಧ ಮತ್ತು ಮದ್ಯ ಸಾಗಣೆಯನ್ನು ತಡೆಯಲು ಅಧಿಕಾರಿಗಳು ಹಗಲು ರಾತ್ರಿ ಶ್ರಮಿಸಿದ್ದರು. ಸೋಮವಾರದಿಂದ ಜಾತ್ರಾ ಕರ್ತವ್ಯಕ್ಕೆ ಹಾಜರಾಗಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳು ಶನಿವಾರ ಬಿಡುಗಡೆಗೊಂಡು ನಿಟ್ಟುಸಿರು ಬಿಟ್ಟಿದ್ದಾರೆ.

Leave a Reply

Your email address will not be published. Required fields are marked *