ಶೌಚಗೃಹ ನಿರ್ಮಿಸಿಕೊಂಡು ಪರಿಸರ ಸಂರಕ್ಷಿಸಿ

ಕೊಳ್ಳೇಗಾಲ: ತಾಲೂಕಿನ ಪಾಳ್ಯದ ಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿ ಸ್ಥಳಿಯ ಗ್ರಾಪಂ ಆಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಂಗನವಾಡಿ ಕೇಂದ್ರದ ಆಶ್ರಯದಲ್ಲಿ ಸೋಮವಾರ ವಿಶ್ವ ಶೌಚಗೃಹ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪಾಳ್ಯ ಗ್ರಾಪಂ ಉಪಾಧ್ಯಕ್ಷ ರವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಪಂ ವತಿಯಿಂದ ಉಚಿತವಾಗಿ ಶೌಚಗೃಹ ನಿರ್ಮಿಸಿಕೊಡುವ ಸಂಬಂದ ಗ್ರಾಪಂ ವ್ಯಾಪ್ತಿಯ ಪ್ರತಿ ಮನೆಗೂ 10 ಬಾರಿ ತೆರಳಿ ಮಾಹಿತಿ ನೀಡಲಾಗಿದೆ. ಶೌಚಗೃಹ ನಿರ್ಮಾಣ ಮತ್ತು ಬಳಕೆಯಿಂದಾಗುವ ಪ್ರಯೋಜನಗಳ ಕುರಿತು ಅರಿವು ಮೂಡಿಸಲಾಗಿದೆ. ಆದರೆ ಯಾರು ಸಹ ಶೌಚಗೃಹ ನಿರ್ಮಾಣಕ್ಕೆ ಮುಂದೆ ಬಾರದೆ ಬಯಲು ಶೌಚದ ಕಡೆ ಮುಖ ಮಾಡುವ ಮೂಲಕ ಗ್ರಾಮದ ಪರಿಸರ ನೈರ್ಮಲ್ಯ ಹಾಳು ಮಾಡಲು ಕಾರಣರಾಗುತ್ತಿರುವುದು ಸರಿಯಲ್ಲ ಎಂದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ಮಾತನಾಡಿ, ಎಲ್ಲರೂ ತಮ್ಮ ಮನೆಗಳಲ್ಲಿ ದೇವರಕೋಣೆ ನಿರ್ಮಿಸಿಕೊಳ್ಳಲು ಪ್ರಮುಖ ಆದ್ಯತೆ ನೀಡುವಂತೆ ಶೌಚಗೃಹ ನಿರ್ಮಾಣಕ್ಕೂ ಹೆಚ್ಚಿನ ಗಮನ ನೀಡುವ ಮೂಲಕ ಮನೆಯ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಸಲಹೆ ನೀಡಿದರು.

ವಿದ್ಯಾರ್ಥಿಗಳು ಶೌಚಗೃಹದ ಅಗತ್ಯ, ಪರಿಸರದ ಮಹತ್ವವನ್ನು ಮನೆಯ ಎಲ್ಲರಿಗೂ ತಿಳಿಸಿ ಅರಿವು ಮೂಡಿಸಿ ಶೌಚಗೃಹ ನಿರ್ಮಿಸಿಕೊಳ್ಳಲು ಪ್ರೇರೇಪಿಸಬೇಕು. ಈ ಮೂಲಕ ಗ್ರಾಮ ನೈರ್ಮಲ್ಯಕ್ಕೆ ಮುಂದಾಗಬೇಕು. ಶೌಚಗೃಹ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡುತ್ತಿದ್ದು. ಈ ಹಣದಿಂದ ವೈಯಕ್ತಿಕ ಶೌಚಗೃಹ ಹಾಗೂ ಸಾಮೂಹಿಕ ಶೌಚಗೃಹ ನಿರ್ಮಿಸಿಕೊಳ್ಳಲು ಸಹಾಯ ಮಾಡಲಾಗುತ್ತಿದೆ ಎಂದರು.

ಕೊಳ್ಳೇಗಾಲ ಶೈಕ್ಷಣಿಕ ವಲಯದ ಬಿಆರ್‌ಸಿ ಮಂಜುಳಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ನೀಲಮ್ಮ, ಸದಸ್ಯರಾದ ನಂಜುಂಡಸ್ವಾಮಿ, ಹುಚ್ಚಯ್ಯ, ಪಿಡಿಒ ಜಮೀರ್‌ಅಹಮದ್, ಮುಖ್ಯ ಶಿಕ್ಷಕ ಕೃಷ್ಣ, ಶಿಕ್ಷಕರಾದ ನವೀನ್‌ಕುಮಾರ್, ಸಿಆರ್‌ಪಿ ಶಾಂತರಾಜು, ಪುಷ್ಪಾ ಹಾಜರಿದ್ದರು.