ಕಲಾಪ ಬಹಿಷ್ಕರಿಸಿ ಪ್ರತಿಭಟನೆ

ಕೊಳ್ಳೇಗಾಲ: ಗುಂಡ್ಲುಪೇಟೆ ಸರ್ಕಲ್ ಇನ್ಸ್‌ಪೆಕ್ಟರ್ ಬಾಲಕೃಷ್ಣ ಅವರು ವಕೀಲ ರವಿ ವಿರುದ್ಧ ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ಬಂಧಿಸಿರುವ ಕ್ರಮ ಖಂಡಿಸಿ ಪಟ್ಟಣದ ವಕೀಲರ ಸಂಘದ ಪದಾಧಿಕಾರಿಗಳು ನ್ಯಾಯಾಲಯದ ಕಲಾಪದಿಂದ ಗುರುವಾರ ಹೊರಗುಳಿಯುವ ಮೂಲಕ ಪ್ರತಿಭಟಿಸಿದರು.

ನ್ಯಾಯಾಲಯ ಕಟ್ಟಡದಲ್ಲಿರುವ ವಕೀಲರ ಸಂಘದ ಕಚೇರಿಯಲ್ಲಿ ಬೆಳಗ್ಗೆ ಪದಾಧಿಕಾರಿಗಳು ವಕೀಲರೊಡಗೂಡಿ ಸಭೆ ನಡೆಸಿ, ಪ್ರಕರಣದ ಕುರಿತು ಚರ್ಚಿಸಿದರಲ್ಲದೆ, ಘಟನೆಯನ್ನು ಖಂಡಿಸಿದರು. ಬಳಿಕ ನ್ಯಾಯಾಲಯದ ಕಲಾಪದಿಂದ ಒಂದು ದಿನದ ಮಟ್ಟಿಗೆ ಹೊರಗುಳಿಯಲು ಸರ್ವಾನುಮತದಿಂದ ತೀರ್ಮಾನ ಕೈಗೊಂಡರು.

ಇದೇ ವೇಳೆ ಸಂಘದ ಅಧ್ಯಕ್ಷ ಡಿ.ಎಸ್.ಬಸವರಾಜು ಮಾತನಾಡಿ, ಹಿಂದಿನಿಂದಲೂ ವಕೀಲರ ಮೇಲೆ ಹಲ್ಲೆ, ನಿಂದನೆ ಪ್ರಕರಣಗಳು ನಡೆಯುತ್ತಲೇ ಬಂದಿವೆ. ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಶ್ರಮಿಸುವ ವಕೀಲರ ಬಗ್ಗೆ ಅಗೌರವ ತೋರುವುದು ಸರಿಯಲ್ಲ. ತಕ್ಷಣದಲ್ಲಿಯೇ ಸರ್ಕಾರ ವಕೀಲರಿಗೆ ಸೂಕ್ತ ಕಾನೂನು ಭದ್ರತೆ ಒದಗಿಸುವ ನಿಟ್ಟಿನಲ್ಲಿ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಸಂಘದ ಕಾರ್ಯದರ್ಶಿ ಎನ್.ಬಸವರಾಜು ಮಾತನಾಡಿ, ವಕೀಲ ರವಿ ವಿರುದ್ಧ ಸರ್ಕಲ್ ಇನ್ಸ್‌ಪೆಕ್ಟರ್ ಬಾಲಕೃಷ್ಣ ಅವರು ದುರುದ್ದೇಶದಿಂದ ಸುಳ್ಳು ಕೇಸು ಹಾಕಿರುವುದನ್ನು ಪೊಲೀಸ್ ಇಲಾಖೆ ವಾಪಸ್ ಪಡೆದುಕೊಳ್ಳಬೇಕು. ಸರ್ಕಲ್ ಇನ್ಸ್‌ಪೆಕ್ಟರ್ ಬಾಲಕೃಷ್ಣ ವಿರುದ್ಧ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಜಿಲ್ಲಾದ್ಯಂತ ವಕೀಲರ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ವಕೀಲರ ಸಂಘದ ಸದಸ್ಯರಾದ ಸೀಗನಾಯ್ಕ, ಎನ್.ರಾಧಾಕೃಷ್ಣ, ಪ್ರದೀಪ್, ಅರುಣ್‌ಕುಮಾರ್, ನಂಜಪ್ಪ, ಪ್ರಸಾದ್, ರಾಜು, ನಟರಾಜು, ಕಾಂತರಾಜು, ಕೆಂಪಣ್ಣ, ಶ್ರೀನಿವಾಸ್, ರಾಜೇಂದ್ರ ಹಾಜರಿದ್ದರು.