ಸಿದ್ಧಗಂಗಾ ಶ್ರೀಗಳ ಭಾವಚಿತ್ರ ತೆರವಿಗೆ ಆಕ್ರೋಶ

ಕೊಳ್ಳೇಗಾಲ: ಪಟ್ಟಣದಲ್ಲಿ ಭಾನುವಾರ ರಾತ್ರಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಶ್ರೀಗಳ ಭಾವಚಿತ್ರ ಮೆರವಣಿಗೆ ವೇಳೆ ನಗರಸಭೆ ಪೌರಕಾರ್ಮಿಕರು ಹಾಗೂ ಕೆಲ ಯುವಕರ ನಡುವೆ ಗಲಾಟೆ ನಡೆದ ಪ್ರಸಂಗ ಜರುಗಿತು.

ಶ್ರೀಗಳ ಸ್ಮರಣೆ ಸಮಾರಂಭ ಹಿನ್ನೆಲೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ಮತ್ತು ಶ್ರೀ ಸಿದ್ಧಗಂಗಾ ಶ್ರೀಗಳ ಭಕ್ತ ವೃಂದದಿಂದ ಪಟ್ಟಣದ ಮುಖ್ಯ ರಸ್ತೆ ಬದಿ ಮತ್ತು ಆಯ್ದ ವೃತ್ತಗಳಲ್ಲಿ ಶ್ರೀಗಳ ಭಾವಚಿತ್ರವಿರುವ ಪ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಈ ನಡುವೆ ಸಂಜೆ ಸಾರ್ವತ್ರಿಕ ಲೋಕಸಭಾ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಗೊಂಡ ಹಿನ್ನೆಲೆ ಕಸ ಸಾಗಿಸುವ ಆಟೋ ಟಿಪ್ಪರ್‌ಗಳಲ್ಲಿ ಆಗಮಿಸಿದ ನಗರಸಭೆ ಪೌರ ಕಾರ್ಮಿಕರು ಪಟ್ಟಣದ ಎಡಿಬಿ ಮತ್ತು ಎಸ್.ವಿ.ಕೆ. ಕಾಲೇಜು ವೃತ್ತದ ಬಳಿ ಅಳವಡಿಸಿದ್ದ ಸಿದ್ಧಗಂಗಾ ಶ್ರೀಗಳ ಪ್ಲೆಕ್ಸ್‌ಗಳನ್ನು ಏಕಾಏಕಿ ತೆರವುಗೊಳಿಸಿದರು.

ಇತ್ತ ಮೆರವಣಿಗೆಯಲ್ಲಿ ಸಾಗುತ್ತಿದ್ದ ಕೆಲ ಯುವಕರು ಫ್ಲೆಕ್ಸ್ ತೆರವುಗೊಳಿಸುತ್ತಿರುವುದನ್ನು ಕಂಡು ಪೌರ ಕಾರ್ಮಿಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಲವರು ಆಟೋ ಟಿಪ್ಪರ್ ವಾಹನದ ಮುಂಭಾಗದ ಕ್ಲಾಸ್ ಅನ್ನು ಜಖಂಗೊಳಿಸಿ ಪೌರ ಕಾರ್ಮಿಕರ ಮೇಲೆ ಹಲ್ಲೆ ಮಾಡಿದರು. ಅಲ್ಲದೇ ಮೆರವಣಿಗೆಯನ್ನು ಸ್ಥಗಿತಗೊಳಿಸಿ ನಗರಸಭೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಉದ್ರಿಕ್ತ ಗುಂಪು ಮುಂದಾಯಿತು.

ಈ ಪರಿಸ್ಥಿತಿ ಮನಗಂಡ ಸರ್ಕಲ್ ಇನ್ಸ್‌ಪೆಕ್ಟರ್ ಆರ್.ಶ್ರೀಕಾಂತ್ ಅವರು ಉದ್ರಿಕ್ತ ಗುಂಪನ್ನು ವೀರಶೈವ ಮುಖಂಡ ಸಹಕಾರದೊಂದಿಗೆ ನಯವಾಗಿಯೇ ಚದುರಿಸಿದರು. ಅರ್ಧಗಂಟೆ ಬಳಿಕ ಪರಿಸ್ಥಿತಿ ತಿಳಿಗೊಂಡಿತು. ಮೆರವಣಿಗೆ ಎಂಜಿಎಸ್‌ವಿ ಕಾಲೇಜಿನ ಸಮಾರಂಭದ ವೇದಿಕೆ ತಲುಪಿತು.

ಅಲ್ಲಿಯೂ ಗ್ರಾಮಾಂತರ ಪ್ರದೇಶದಿಂದ ಮೆರವಣಿಗೆಗೆ ಬಂದಿದ್ದ ಯುವಕರನ್ನು ಸಮಾಧಾನಗೊಳಿಸಿ ಊರಿಗೆ ಹೊರಡಿಸಲಾಯಿತು. ಈ ವೇಳೆ ಘಟನೆ ಕುರಿತು ತಪ್ಪಿತಸ್ಥರ ನಗರಸಭಾ ಪೌರ ಕಾರ್ಮಿಕರ ವಿರುದ್ಧ ಪೊಲೀಸ್ ಠಾಣೆಗೆ ಸೋಮವಾರ ದೂರು ನೀಡಲು ತೀರ್ಮಾನಿಸಿ ಮುಖಂಡರು ವಾಪಸ್ಸಾದರು.

ಆಯುಕ್ತರಿಂದ ಕ್ಷಮೆಯಾಚನೆ: ಘಟನೆ ಕುರಿತು ಸೋಮವಾರ ವೀರಶೈವ ಲಿಂಗಾಯತ ಮುಖಂಡರು ಸರ್ಕಲ್ ಇನ್ಸ್‌ಪೆಕ್ಟರ್‌ಗೆ ದೂರು ನೀಡಿದರು. ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಮೆರವಣಿಗೆ ನಂತರ ನಾವೇ ಶ್ರೀಗಳ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿಕೊಳ್ಳಲು ನಿರ್ಧರಿಸಿದ್ದೆವು. ಅದಕ್ಕೂ ಮೊದಲು ಶ್ರೀಗಳ ಪ್ಲೆಕ್ಸ್‌ಗಳನ್ನು ತೆರವುಗೊಳಿಸಿ ಏಕಾಏಕಿ ಕಸ ಸಾಗಿಸುವ ಆಟೋ ಟಿಪ್ಪರ್‌ಗಳಲ್ಲಿತುಂಬಿದ್ದು ಸರಿಯಲ್ಲ. ಇದರಿಂದ ಸಾಕಷ್ಟು ಜನರ ಮನಸ್ಸಿಗೆ ನೋವು ಉಂಟಾಗಿದೆ. ಶ್ರೀಗಳ ಪ್ಲೆಕ್ಸ್‌ಗಳಿಗೆ ಅಪಮಾನ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಸರ್ಕಲ್ ಇನ್ಸ್‌ಪೆಕ್ಟರ್ ಮತ್ತು ವೀರಶೈವ ಮುಖಂಡರ ಸಮ್ಮುಖದಲ್ಲಿ ಹೆಲ್ತ್ ಇನ್ಸ್‌ಪೆಕ್ಟರ್ ಭೂಮಿಕಾ ಅವರ ಜತೆಗೂಡಿ ಆಗಮಿಸಿದ ನಗರಸಭೆ ಆಯುಕ್ತ ನಾಗಶೆಟ್ಟಿ ಘಟನೆ ಕುರಿತು ಕ್ಷಮೆಯಾಚಿಸಿ, ಈ ವಿಷಯವನ್ನು ಇಲ್ಲಿಗೆ ಬಿಡುವಂತೆ ಮನವಿ ಮಾಡಿದರು.

‘ನೀತಿ ಸಂಹಿತೆ ಹಿನ್ನೆಲೆ ಪೌರ ಕಾರ್ಮಿಕರು ರಾಜಕೀಯ ಪಕ್ಷಗಳ ಪ್ಲೆಕ್ಸ್ ತೆರವುಗೊಳಿಸಬೇಕಿತ್ತು. ಆದರೆ ಏಕಾಏಕಿ ಶ್ರೀಗಳ ಪ್ಲೆಕ್ಸ್ ತೆರವುಗೊಳಿಸಿ ಅಚಾತುರ್ಯವೆಸಗಿದ್ದಾರೆ. ಈ ಬಗ್ಗೆ ಅವರಿಗೆ ನೋಟಿಸ್ ನೀಡಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡುವ ಮೂಲಕ ಪ್ರಕರಣಕ್ಕೆ ತೆರೆ ಎಳೆದರು. ಇದಕ್ಕೆ ಮುಖಂಡರು ಸಮ್ಮತಿಸಿದರು.