ಚಿಲಕವಾಡಿಯಲ್ಲಿ ಹಾಲರವಿ ಉತ್ಸವ

ಕೊಳ್ಳೇಗಾಲ: ತಾಲೂಕಿನ ಚಿಲಕವಾಡಿ ಗ್ರಾಮದಲ್ಲಿ ಸೋಮವಾರ ಶ್ರೀ ದುರ್ಗಾದೇವಿ ಹಾಗೂ ಶ್ರೀ ಶಂಭುಲಿಂಗೇಶ್ವರಸ್ವಾಮಿಯ ಹಾಲರವಿ ಉತ್ಸವ ಸಂಭ್ರಮದಿಂದ ನಡೆಯಿತು.

ಗ್ರಾಮಕ್ಕೆ ಹೊಂದಿಕೊಂಡಿರುವ ಶಂಭುಲಿಂಗೇಶ್ವರ ಬೆಟ್ಟದಲ್ಲಿರುವ ಸ್ವಾಮಿಗೆ ಪ್ರತಿವರ್ಷದಂತೆ ಈ ಬಾರಿಯೂ ಸುತ್ತಮುತ್ತಲ ಗ್ರಾಮಸ್ಥರು ಹಾಲರವಿ ಪೂಜಾ ಕೈಂಕರ್ಯ ನೆರವೇರಿಸಿದರು. ಹರಕೆ ಹೊತ್ತ ಭಕ್ತರು ದೇವರಿಗೆ ಧೂಪ, ದೀಪಾರತಿ ಬೆಳಗಿ ಭಕ್ತಿ ಸಮರ್ಪಿಸಿದರು.

ಈ ನಡುವೆ ಗ್ರಾಮದೊಳಗಿನ ದೇವಸ್ಥಾನದಿಂದ ಭಕ್ತರು ಉತ್ಸವ ಮೂರ್ತಿಯನ್ನು ಕೇಲ್ ಹಾಗೂ ಮಂಗಳವಾದ್ಯ ಸಮೇತ ಬೆಟ್ಟದ ದೇವಸ್ಥಾನಕ್ಕೆ ರಾತ್ರಿ ಕೊಂಡೋಯ್ದಿದ್ದು, ದೇವಾಲಯದ ಸುತ್ತ ಪ್ರದಕ್ಷಣೆ ನರೆವೇರಿಸಿ ರಾತ್ರಿಯಿಡಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮಂಗಳವಾರ ಮುಂಜಾನೆವರೆಗೆ ಜಾಗರಣೆ ನಡೆಸಲಿದ್ದಾರೆ. ಗ್ರಾಮದ ಬೀದಿಗಳನ್ನು ಹಸಿರು ತಳಿರು ತೋರಣಗಳಿಂದ ಸಿಂಗರಿಸಲಾಗಿದೆ.

ಬೆಳಗ್ಗೆ ಬೆಟ್ಟದ ದೇಗುಲದಿಂದ ಉತ್ಸವ ಮೂರ್ತಿಗಳನ್ನು ಗ್ರಾಮದ ಬೀದಿಗಳಿಗೆ ಹೊತ್ತು ತಂದು ಮೆರವಣಿಗೆ ಕೈಗೊಳ್ಳಲಿದ್ದಾರೆ. ಹಾಲರವೆ ಉತ್ಸವದಲ್ಲಿ ಚಿಲಕವಾಡಿ, ಕೆಸ್ತೂರು, ಹೊನ್ನೂರು, ಟಗರಪುರ, ಸಿಲ್ಕಲ್‌ಪುರ, ಕುಂತೂರು, ಕುಂತೂರು ಮೋಳೆ, ಕಟ್ನವಾಡಿ ಸೇರಿದಂತೆ ಮತ್ತಿತರರ ಗ್ರಾಮಸ್ಥರು ಭಾಗವಹಿಸಿದರು. ಗ್ರಾಮಾಂತರ ಠಾಣಾ ಪೊಲೀಸರು ಬಿಗಿಬಂದೋಬಸ್ತ್ ಕಲ್ಪಿಸಿದ್ದರು.