ಪಂಕ್ತಿಸೇವೆಯಲ್ಲಿ ಬಾಡೂಟದ ಘಮಲು!

ಕೊಳ್ಳೇಗಾಲ:  ಚಿಕ್ಕಲ್ಲೂರಿನಲ್ಲಿ ನಡೆಯುತ್ತಿರುವ ಪವಾಡ ಪುರುಷ ಸಿದ್ದಪ್ಪಾಜಿ ಜಾತ್ರೆಯಲ್ಲಿ ಪ್ರಾಣಿಬಲಿ ನಿಷೇಧಿಸಿರುವುದರಿಂದ ಭಕ್ತರು ಜಾತ್ರೆ ಮೈದಾನದ ಹೊರಗಿನ ಜಮೀನುಗಳಲ್ಲಿ ಹರಕೆಗೆ ಬಿಟ್ಟಿದ್ದ ಕುರಿ, ಕೋಳಿ ಆಡುಗಳನ್ನು ಕತ್ತರಿಸಿ ತಂದು, ಹೂಡಿದ್ದ ಬಿಡಾರಗಳಲ್ಲಿ ಮಾಂಸಾಹಾರ ತಯಾರಿಸಿ ಪಂಕ್ತಿಸೇವೆ ನೆರವೇರಿಸಿದರು. ನೂರಾರು ಎಕರೆ ಪ್ರದೇಶದ ಜಾತ್ರೆ ಆವರಣದಲ್ಲಿ ಪ್ರಾಣಿಬಲಿಗೆ ಅವಕಾಶ ಇಲ್ಲದ ಕಾರಣ ಭಕ್ತರು ಜಮೀನುಗಳು, ತೋಟಗಳಲ್ಲಿ ಕುರಿ, ಕೋಳಿ, ಆಡುಗಳನ್ನು ಕತ್ತರಿಸಿ ತಂದರು. ಇನ್ನು ಕೆಲವರು ತೋಟ ಹಾಗೂ ಜಮೀನುಗಳಲ್ಲೇ ಕತ್ತರಿಸಿ ಮಾಂಸಾಹಾರ ತಯಾರಿಸಿ ಸೇವಿಸಿದರು.
ಜಾತ್ರೆ ಮೈದಾನದಲ್ಲಿ ಹಾಕಿಕೊಂಡಿದ್ದ ಬಿಡಾರದಲ್ಲಿ ರಾಗಿ ಮುದ್ದೆ, ಕೋಳಿ, ಕುರಿ, ಮೇಕೆಗಳ ಸಾಂಬಾರ್ ತಯಾರಿಸಿದರು. ನಂತರ ನೀಲಗಾರರು ಸಿದ್ದಪ್ಪಾಜಿ ನಾಗಬೆತ್ತ ಹಾಗೂ ಕಂಡಾಯಕ್ಕೆ ಪೂಜೆ ಸಲ್ಲಿಸಿ ಎಡೆಯಿಟ್ಟು, ನೆಂಟರಿಷ್ಟರ ಜತೆ ಪಂಕ್ತಿಸೇವೆ ನೆರವೇರಿಸಿ ಬಾಡೂಟ ಸವಿದರು. ಪ್ರಾಣಿಬಲಿ ನಿಷೇಧಿಸುವ ಕುರಿತು ಹೈಕೋರ್ಟ್ ಆದೇಶವನ್ನು ಪೊಲೀಸರು ಕಟ್ಟುನಿಟ್ಟಾಗಿ ಪಾಲಿಸಿದರು. ಜಾತ್ರೆ ಮೈದಾನದಲ್ಲಿ ಮಾತ್ರ ಪ್ರಾಣಿಬಲಿಗೆ ಜಿಲ್ಲಾಡಳಿತ ಅವಕಾಶ ನೀಡದ ಕಾರಣ ಭಕ್ತರ ಪಾಲಿಗೆ ಅಧಿಕಾರಿ ವರ್ಗ ಖಳನಾಯಕರಂತೆ ಕಂಡರು. ಜಾತ್ರೆ ಮೈದಾನದಿಂದ 2 ಕಿ.ಮೀ. ದೂರದಲ್ಲಿ ಕುರಿ, ಮೇಕೆ ಹಾಗೂ ಕೋಳಿಯನ್ನು ಕತ್ತರಿಸಿ ತರಬೇಕಾಯಿತು. ದೇವರ ಸೇವೆಗೂ ಅಧಿಕಾರಿಗಳು ತೊಂದರೆ ನೀಡುವುದು ಸರಿಯಲ್ಲ ಎಂದು ಹಲವು ಭಕ್ತರು ಅಸಮಾಧಾನ ವ್ಯಕ್ತಪಡಿಸಿದರು. 500 ವರ್ಷಗಳಿಂದ ಈ ಸೇವೆಯನ್ನು ನೆರವೇರಿಸಿಕೊಂಡು ಬರುತ್ತಿದ್ದೇವೆ. ಈಗ ಪ್ರಾಣಿಬಲಿ ನಿಷೇಧ ಕಾನೂನಿನ ಹೆಸರಿನಲ್ಲಿ ಸಿದ್ದಪ್ಪಾಜಿ ಭಕ್ತರಿಗೆ ತೊಂದರೆ ನೀಡುವುದು ಸರಿಯಲ್ಲ. ಇದು ಹೀಗೆಯೇ ಮುಂದುವರಿದರೆ ಜಾತ್ರೆ ತನ್ನ ವೈಭವವನ್ನು ನಿಧಾನವಾಗಿ ಕಳೆದುಕೊಳ್ಳಲಿದೆ ಎಂದು ಭಕ್ತರು ಬೇಸರ ವ್ಯಕ್ತಪಡಿಸಿದರು. 3 ವರ್ಷದ ಹಿಂದೆ ಜಾತ್ರೆ ಪ್ರಮುಖ ಆಚರಣೆಯಾದ ಪಂಕ್ತಿಸೇವೆಯಂದು ಸಿದ್ದಪ್ಪಾಜಿ ಒಕ್ಕಲಿನವರು ಹರಕೆ ಪ್ರಾಣಿಗಳನ್ನು ಚಿಕ್ಕಲ್ಲೂರು ಜಾತ್ರೆಯಲ್ಲಿ ತಂದು ಕತ್ತರಿಸಿ ಮಾಂಸಾಹಾರ ತಯಾರಿಸುತ್ತಿದ್ದರು. ನಂತರ ತಮ್ಮ ಸಂಬಂಧಿಕರು, ಪರಿಚಯಸ್ಥರ ಜತೆ ಪಂಕ್ತಿಯಲ್ಲಿ ಕುಳಿತು ಮಾಂಸಾಹಾರ ಸೇವಿಸುತ್ತಿದ್ದರು.

ಭಕ್ತರ ಸಂಖ್ಯೆ ಇಳಿಮುಖ: ಚಿಕ್ಕಲ್ಲೂರು ಜಾತ್ರೆಯಲ್ಲಿ ಜಿಲ್ಲಾಡಳಿತ ಪ್ರಾಣಿಬಲಿ ನಿಷೇಧಿಸಿದ್ದರಿಂದ ಗುರುವಾರ ಪಂಕ್ತಿಸೇವೆಗೆ ಭಕ್ತರ ಸಂಖ್ಯೆ ಇಳಿಮುಖವಾಗಿತ್ತು. ಭಕ್ತರು ಸ್ನಾನ ಮಾಡಿ ಸಿದ್ದಪ್ಪಾಜಿ ಗದ್ದುಗೆ ಬಳಿ ಉರುಳುಸೇವೆ ಮಾಡಿ, ಕಂಡಾಯಕ್ಕೆ ಪೂಜೆ ಸಲ್ಲಿಸಿದರು. ಎಲ್ಲರೂ ಪಂಕ್ತಿಯಲ್ಲಿ ಕುಳಿತು ಮಾಂಸಾಹಾರ ಸ್ವೀಕರಿಸಿದರು. ಪಾನಪ್ರಿಯರು ಮದ್ಯ ಸೇವಿಸಿ ತೂರಾಡಿದರು. ಸಂಜೆ ಗಂಟು ಮೂಟೆ ಕಟ್ಟುಕೊಂಡು ಗ್ರಾಮಗಳತ್ತ ತೆರಳುತ್ತಿದ್ದರು.

ಜಾತ್ರೆ ಮೈದಾನದಲ್ಲಿ ಜಾಗ ನಿಗದಿಗೊಳಿಸಿ
ಜಾತ್ರೆ ಮೈದಾನದ ಇಂತಿಷ್ಟು ವ್ಯಾಪ್ತಿಯಲ್ಲಿ ಪ್ರಾಣಿಬಲಿ ನೀಡಬಾರದು ಎಂದು ಜಾಗ ನಿಗದಿ ಮಾಡಬೇಕೆಂದು ಭಕ್ತರು ಆಗ್ರಹಿಸಿದರು. ಮಂಟೇಸ್ವಾಮಿ ಪರಂಪರೆಯ ಸಿದ್ದಪ್ಪಾಜಿ ಜಾತ್ರೆ ಸಾವಿರಾರು ಎಕರೆ ಪ್ರದೇಶದಲ್ಲಿ ಯಾವುದೇ ಕಟ್ಟುಪಾಡುಗಳಿಲ್ಲದೆ ನಡೆಯುತ್ತದೆ. ಬಹುತೇಕ ತಳವರ್ಗದ ಶ್ರಮಿಕ ಜನರು ಯಾವುದೇ ಭೇದ ಭಾವವಿಲ್ಲದೆ ಪಾಲ್ಗೊಳ್ಳುತ್ತಾರೆ. ಭಕ್ತರ ಭಾವನಾತ್ಮಕ ಶ್ರದ್ಧೆಗೆ ಅಡ್ಡಿಯಾಗಬಾರದು ಎಂದು ಇರ್ದಾಳ್‌ದೊಡ್ಡಿ ಕಾಂತರಾಜ್ ಹೇಳಿದರು. ಈ ವಿಚಾರದಲ್ಲಿ ಸ್ಥಳೀಯ ಶಾಸಕರು ಹಾಗೂ ಸಂಸದರು ನಿರ್ಲಕ್ಷ್ಯ ವಹಿಸಿದ್ದಾರೆ. ಕೆ.ಆರ್.ನಗರ ತಾಲೂಕಿನ ಕಪ್ಪಡಿಯಲ್ಲಿ ನಡೆಯುವ ರಾಚಪ್ಪಾಜಿ ಜಾತ್ರೆಯಲ್ಲಿ ಶಾಸಕ ಸಾ.ರಾ.ಮಹೇಶ್, ಮೈಸೂರು ಜಿಲ್ಲಾಡಳಿತ ಜತೆ ಚರ್ಚಿಸಿ ಜಾಗ ನಿಗದಿ ಮಾಡಿಸಿದ್ದರು. ನಮ್ಮ ಸಂಸದರು, ಶಾಸಕರು ಏಕೆ ಮೌನ ವಹಿಸಿದ್ದಾರೆ ಎಂದು ಆರೋಪಿಸಿದರು.