ಕೊಳ್ಳೆಗಾಲದ ಬಿಎಸ್​ಪಿ ಶಾಸಕ ಎನ್​. ಮಹೇಶ್​ ಪಕ್ಷದಿಂದ ಉಚ್ಚಾಟನೆ: ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ

ನವದೆಹಲಿ: ಕೊಳ್ಳೆಗಾಲದ ಬಿಎಸ್​ಪಿ ಶಾಸಕ ಎನ್​. ಮಹೇಶ್​ ಅವರನ್ನು ಪಕ್ಷದಿಂದ ಉಚ್ಚಾಟಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಆದೇಶಿಸಿದ್ದಾರೆ.

ವಿಶ್ವಾಸಮತಯಾಚನೆಯಲ್ಲಿ ಎಚ್​.ಡಿ. ಕುಮಾರಸ್ವಾಮಿ ಸರ್ಕಾರಕ್ಕೆ ಸೋಲಾಗುತ್ತಲೇ ಟ್ವೀಟ್​ ಮಾಡಿರುವ ಮಾಯಾವತಿ, ಎಚ್​.ಡಿ. ಕುಮಾರಸ್ವಾಮಿ ಸರ್ಕಾರದ ಪರವಾಗಿ ಮತ ಚಲಾಯಿಸುವಂತೆ ನೀಡಿದ್ದ ಪಕ್ಷದ ಸೂಚನೆಯನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಹೇಳಿದ್ದಾರೆ.

ಎಚ್​.ಡಿ. ಕುಮಾರಸ್ವಾಮಿ ವಿಶ್ವಾಸಮತ ಯಾಚನೆಯ ವಿಷಯ ತಿಳಿದ ಬಳಿಕ ಎಚ್​.ಡಿ. ಕುಮಾರಸ್ವಾಮಿ ಪರವಾಗಿ ಮತಚಲಾಯಿಸುವಂತೆ ಎನ್​. ಮಹೇಶ್​ಗೆ ಮಾಯಾವತಿ ಸೂಚಿಸಿದ್ದರು. ಎನ್​. ಮಹೇಶ್​ ಅವರು ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಏನು ಮಾಡಬೇಕು ಎಂಬ ಬಗ್ಗೆ ತಮ್ಮ ಪಕ್ಷದ ರಾಷ್ಟ್ರೀಯ ನಾಯಕರಿಂದ ಯಾವುದೇ ಸೂಚನೆ ಬಂದಿಲ್ಲ. ಹಾಗಾಗಿ ಮತಯಾಚನೆಯ ಪ್ರಕ್ರಿಯೆಗೆ ಗೈರು ಹಾಜರಾಗಲು ನಿರ್ಧರಿಸಿರುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮಾಯಾವತಿ ಈ ಸೂಚನೆ ನೀಡಿದ್ದರು ಎನ್ನಲಾಗಿದೆ.

ಆದರೆ ಮಂಗಳವಾರ ಸದನ ಕಲಾಪಕ್ಕೆ ಗೈರು ಹಾಜರಾಗಿದ್ದ ಎನ್​. ಮಹೇಶ್​ ವಿಶ್ವಾಸಮತ ಯಾಚನೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರಲಿಲ್ಲ. ಈ ವಿಷಯ ಗಮನಕ್ಕೆ ಬರುತ್ತಲೇ ಮಹೇಶ್​ ಅವರನ್ನು ಪಕ್ಷದಿಂದ ಉಚ್ಚಾಟಿಸಲು ಮಾಯಾವತಿ ನಿರ್ಧರಿಸಿದರು ಎನ್ನಲಾಗಿದೆ.

Leave a Reply

Your email address will not be published. Required fields are marked *