ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ದಿಢೀರ್ ಪ್ರತಿಭಟನೆ

ಕೊಳ್ಳೇಗಾಲ: ತಾಲೂಕಿನ ಮಧುವನಹಳ್ಳಿ ಗ್ರಾಮದ ಬ್ಯಾಂಕ್ ಆಫ್ ಮಹಾರಾಷ್ಟ್ರ ವ್ಯವಸ್ಥಾಪಕ ಶಿವಪ್ರಸಾದ್ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಮಂಗಳವಾರ ಬ್ಯಾಂಕ್ ಮುಂದೆ ದಿಢೀರ್ ಪ್ರತಿಭಟನೆ ನಡೆಸಿದರು.

ಸಂಘದ ತಾಲೂಕು ಉಪಾಧ್ಯಕ್ಷ ಜೋಯಿಲ್ ನಿವಾಸ್ ಎಂಬುವರು, ಸೋಮವಾರ ಬ್ಯಾಂಕ್ ವ್ಯವಸ್ಥಾಪಕರನ್ನು ಭೇಟಿ ಮಾಡಿ ರಾಜ್ಯ ಸರ್ಕಾರ ಆದೇಶಿಸಿರುವ ರೈತರ ಸಾಲ ಮನ್ನಾ ಕುರಿತು ವಿವರ ಕೇಳಿ, ರೈತರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಕೇಳಿದ್ದಾರೆ. ಈ ವೇಳೆ ಸೌಜನ್ಯದಿಂದ ವರ್ತಿಸಬೇಕಾದ ವ್ಯವಸ್ಥಾಪಕರು ರೈತರ ಕುರಿತು ಲಘುವಾಗಿ ಮಾತನಾಡಿದ್ದಾರೆ ಎಂದು ದೂರಿದ ಸಂಘದ ಪದಾಧಿಕಾರಿಗಳು ಬ್ಯಾಂಕ್ ಎದುರು ದಿಢೀರ್ ಜಮಾಯಿಸಿ ಧರಣಿ ನಡೆಸಿ ಘೋಷಣೆ ಕೂಗಿದರು.

ಸಾಲ ಪಡೆಯುವ ರೈತರು ಪ್ರತಿ ಬಾರಿಯೂ ಬ್ಯಾಂಕ್‌ಗೆ ಸಾಲ ಪಾವತಿಸುವುದಿಲ್ಲ. ಸರ್ಕಾರ ಸಾಲ ಮನ್ನಾ ಮಾಡುವುದನ್ನೇ ಕಾದು ಕುಳಿತುಕೊಳ್ಳುವ ಕಾಯಕ ನಿಮ್ಮದಾಗಿದೆ. ಇದನ್ನು ಬಿಟ್ಟು ನಿಮಗೆ ಬೇರೆ ಯಾವ ಕೆಲಸವಿಲ್ಲ ಎಂದು ರೈತರನ್ನು ಕುರಿತು ವ್ಯವಸ್ಥಾಪಕರು ಲಘುವಾಗಿ ಮಾತನಾಡಿದ್ದಾರೆ. ಇವರ ವಿರುದ್ಧ ಮೇಲಧಿಕಾರಿಗಳು ಸ್ಥಳದಲ್ಲಿಯೇ ಶಿಸ್ತು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಇದೇ ವೇಳೆ ರೈತ ಸಂಘದ ಮಧುವನಹಳ್ಳಿ ಶಾಖೆ ಅಧ್ಯಕ್ಷ ಬಸವರಾಜು ಮಾತನಾಡಿ, ಬ್ಯಾಂಕ್ ವ್ಯವಸ್ಥಾಪಕ ಶಿವಪ್ರಸಾದ್, ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿಲ್ಲ. ರೈತರಿಗೆ ಬ್ಯಾಂಕ್‌ನಲ್ಲಿ ದೊರೆಯುವ ಸಾಲ ಸೌಲಭ್ಯ ಕೊಡುವಲ್ಲಿ ತಾತ್ಸಾರ ತೋರುತ್ತಾರೆ. ಬ್ಯಾಂಕ್‌ನಲ್ಲಿ ತಾವು ಅಡವಿಟ್ಟಿದ್ದ ಚಿನ್ನವನ್ನು ವಾಯಿದೆಗೂ ಮುನ್ನ ಹರಾಜು ಮಾಡಲು ಮುಂದಾಗಿದ್ದರು. ಈ ಬಗ್ಗೆ ಪ್ರಶ್ನಿಸಿದ ನಂತರ ಸುಮ್ಮನಾದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ತಾಲೂಕು ಘಟಕದ ಅಧ್ಯಕ್ಷ ಗೌಡೇಗೌಡ, ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಕಾನೂನು ಕ್ರಮವಾಗಬೇಕು. ಸ್ಥಳಕ್ಕೆ ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಆಗಮಿಸಿ ಕ್ರಮದ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಪಟ್ಟು ಹಿಡಿದರು.

ಕ್ಷಮೆಯಾಚಿಸಿದ ವ್ಯವಸ್ಥಾಪಕ: ಗ್ರಾಮಾಂತರ ಠಾಣೆಯ ಪಿಎಸ್‌ಐ ಸಿ.ವನರಾಜು ಮಧ್ಯ ಪ್ರವೇಶ ಮಾಡಿ, ರೈತರನ್ನು ಸಮಾಧಾನಪಡಿಸಿ, ರೈತರ ಬಗ್ಗೆ ಲಘುವಾಗಿ ಮಾತನಾಡಿರುವ ಬ್ಯಾಂಕ್ ವ್ಯವಸ್ಥಾಪಕರಿಗೆ ತಿಳಿ ಹೇಳಿ ಅವರಿಂದ ಬಹಿರಂಗ ಕ್ಷಮೆ ಕೇಳಿಸುವಲ್ಲಿ ಯಶಸ್ವಿಯಾದರು. ನಂತರ ರೈತರು ಧರಣಿ ವಾಪಸ್ ಪಡೆದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಶಿವರಾಮ್, ಕಾರ್ಯಾಧ್ಯಕ್ಷ ಶ್ರೀಕಂಠಸ್ವಾಮಿ, ತಾಲೂಕು ಘಟಕದ ಕಾರ್ಯದರ್ಶಿ ರವಿನಾಯ್ಡು, ಪದಾಧಿಕಾರಿಗಳಾದ ಮಲ್ಲಣ್ಣ, ಬಸವಣ್ಣ, ಕೊಳಂದೈಸ್ವಾಮಿ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *