ಭಾರತದ ಹ್ಯಾರಿ ಹೌದಿನಿ ಆಗಲು ಹೋದವ ಗಂಗಾ ನದಿಯಲ್ಲಿ ಜಲಸಮಾಧಿಯಾದ, ಇನ್ನೂ ಪತ್ತೆಯಾಗದ ಶವ

ಕೋಲ್ಕತ: ಭಾರತದ ಹ್ಯಾರಿ ಹೌದಿನಿಯಾಗುತ್ತೇನೆ. ಅವರಂತೆ ಕಣ್ಣು, ಕೈ, ಕಾಲು ಕಟ್ಟಿಕೊಂಡು ನೀರಿನಾಳಕ್ಕೆ ಇಳಿಸಿದ ಪಂಜರದಿಂದ ಬಿಡುಗಡೆಯಾಗಿ ಕೆಲವೇ ನಿಮಿಷಗಳಲ್ಲಿ ಮೇಲೆ ಬರುವ ಚಮತ್ಕಾರ ತೋರುತ್ತೇನೆ ಎಂದು ಹೊರಟವ ಜಲಸಮಾಧಿಯಾಗಿದ್ದಾನೆ.

ಚಂಚಲ್​ ಲಹಿರಿ ಜಲಸಮಾಧಿಯಾಗಿರುವಾತ. ಈತನ ಶವಕ್ಕಾಗಿ ಸಾಕಷ್ಟು ಶೋಧಿಸಲಾಗುತ್ತಿದೆಯಾದರೂ ಇದುವರೆಗೂ ಪತ್ತೆಯಾಗಿಲ್ಲ ಎಂದು ಕೋಲ್ಕತ ಪೊಲೀಸರು ತಿಳಿಸಿದ್ದಾರೆ.

ಕಣ್ಣು, ಕೈ, ಕಾಲು ಕಟ್ಟಿಸಿಕೊಂಡು ನೀರು ತುಂಬಿದ ಬೃಹತ್​ ಕ್ಯಾನ್​ಗಳ ಒಳಗೆ ಹೋದರೂ, ಬೀಗ ಮುರಿದುಕೊಂಡು ಜೀವಂತವಾಗಿ ಹೊರಬರುವ ಚಮತ್ಕಾರಕ್ಕೆ ಅಮೆರಿಕದ ಜಾದೂಗಾರ ಹ್ಯಾರಿ ಹೌದಿನಿ ಹೆಸರುವಾಸಿಯಾಗಿದ್ದ. ಈತನಂತೆ ತಾನು ಕೈ, ಕಾಲು ಮತ್ತು ಕಣ್ಣನ್ನು ಕಟ್ಟಿಕೊಂಡು ಪಂಜರದಲ್ಲಿ ಬಂಧಿಯಾಗಿ ಗಂಗಾ ನದಿಯ ಆಳವಾದ ಸ್ಥಳದೊಳಗೆ ಹೋಗಿ ಜೀವಂತವಾಗಿ ಮೇಲೆ ಬರುವ ಸಾಹಸ ಪ್ರದರ್ಶಿಸುವುದಾಗಿ ಚಂಚಲ್​ ಲಹಿರಿ ಹೇಳಿದ್ದ. ಅದರಂತೆ ಹೌರಾ ಸೇತುವೆ ಸಮೀಪದ ಕೋಲ್ಕತ ಮಿಲೇನಿಯಂ ಪಾರ್ಕ್​ ಬಳಿ ಕ್ರೇನ್​ ಸಹಾಯದಿಂದ ತಾನು ಬಂಧಿಯಾಗಿದ್ದ ಪಂಜರವನ್ನು ಭಾನುವಾರ ಸಂಜೆ ಆಳವಾದ ನೀರಿನೊಳಗೆ ಇಳಿಸಿಸಿಕೊಂಡಿದ್ದ.

ಒಂದೆರಡು ನಿಮಿಷಗಳಲ್ಲಿ ಈತ ಮೇಲೆ ಬರಬೇಕಾಗಿತ್ತು. ಆದರೆ 10 ನಿಮಿಷ ಕಳೆದರೂ ಮೇಲೆ ಬಾರದಿದ್ದಾಗ ಜನರು ನಾರ್ತ್​ ಪೋರ್ಟ್​ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದರು. ತಕ್ಷಣವೇ ಸ್ಥಳಕ್ಕೆ ಬಂದ ಅವರು ಲಹಿರಿಗಾಗಿ ಹುಡುಕಾಡಿದರೂ ಆತನಿದ್ದ ಪಂಜರವಾಗಲಿ ಅಥವಾ ಆತನಾಗಲಿ ಪತ್ತೆಯಾಗಿಲ್ಲ. ಬಹುಶಃ ನೀರಿನ ಭಾರಿ ಸೆಳೆತಕ್ಕೆ ಸಿಲುಕಿ ಆತನಿದ್ದ ಪಂಜರವು ಕೊಚ್ಚಿ ಹೋಗಿರಬಹುದು. ನೀರಿನಲ್ಲಿ ಮುಳುಗಿ ಆತ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸೋಮವಾರ ಕೂಡ ಶವಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಇನ್ನೂ ಪತ್ತೆಯಾಗಿಲ್ಲ ಎನ್ನಲಾಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *