ಕೋಲಿ ಸಮಾಜಕ್ಕೆ ಮೀನುಗಾರಿಕೆಗೆ ಅವಕಾಶ ನೀಡಿ

ವಡಗೇರಾ: ಜಿಲ್ಲೆಯ ಕೆರೆಗಳ ಹೂಳೆತ್ತುವ ಮೂಲಕ ಕೆರೆ ತುಂಬಿಸುವ ಕಾರ್ಯವನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಬೇಕು ಎಂದು ಟೋಕರಿ ಕೋಲಿ ಸಮಾಜದ ಅಧ್ಯಕ್ಷ ಉಮೇಶ ಕೆ. ಮುದ್ನಾಳ್ ಆಗ್ರಹಿಸಿದರು.


ತಡಿಬಿಡಿ ಗ್ರಾಮದ ಕೆರೆ ಆವರಣದಲ್ಲಿ ಕೋಲಿ ಸಮಾಜದ ಸಭೆ ನಡೆಸಿ ಜಿಲ್ಲೆಯಲ್ಲಿರುವ ಕೆರೆಗಳನ್ನು ಹೂಳೆತ್ತಲು ತಕ್ಷಣ ಕ್ರಮ ಕೈಗೊಳ್ಳಬೇಕು. ಬೇಸಿಗೆಯಲ್ಲಿ ಕೆರೆ ಬತ್ತಿದ್ದರಿಂದ ಹೂಳೆತ್ತುವುದು ಸುಲಭ. ಅಲ್ಲದೇ ಫಲವತ್ತಾದ ಮಣ್ಣು ರೈತರಿಗೆ ಉಚಿತವಾಗಿ ಕೃಷಿ ಇಲಾಖೆಯಿಂದಲೇ ಸಾಗಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಮರೋಪಾದಿಯಲ್ಲಿ ಹೂಳೆತ್ತುವ ಕೆಲಸ ಹಾಗೂ ಕೆರೆಯಲ್ಲಿಯೇ ಟೆಮಟ್ ಹಾಕಿ, ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.


ಜಿಲ್ಲೆಯ ಕೆರೆಗಳಲ್ಲಿ ಅನ್ಯ ಜಿಲ್ಲೆಯವರಿಗೆ, ಪ್ರಭಾವಿಗಳಿಗೆ ಮೀನುಗಾರಿಕೆಗೆ ವಹಿಸಿಕೊಡದೆ, ನೈಜ ಮೀನುಗಾರರಿಗೆ ನೀಡಬೇಕು. ಬೇರೆ ಜಿಲ್ಲೆಯವರಿಗೆ, ಮೀನುಗಾರರಲ್ಲದವರಿಗೆ ಕೆರೆಗಳನ್ನು ವಹಿಸಿಕೊಡಲಾಗುತ್ತಿದೆ. ಜಿಲ್ಲೆಯಲ್ಲೂ ಕೆಲವು ಮೀನುಗಾರರಲ್ಲದವರಿಗೆ ಕೆರೆಗಳನ್ನು ಗುತ್ತಿಗೆ ಪಡೆದುಕೊಂಡು, ಬೇರೆಯವರಿಗೆ ಹೆಚ್ಚಿನ ಹಣ ಪಡೆದು ನೀಡುತ್ತಿದ್ದರುವುದು ಸರಿಯಲ್ಲ ಎಂದು ಹೇಳಿದರು.


ನಿಜವಾದ ಮೀನುಗಾರರಿಗೆ ಸರ್ಕಾರಿ ಸೌಲಭ್ಯ ದೊರೆಯುತ್ತಿಲ್ಲ. ತಿಂಗಳಿಗೊಮ್ಮೆ ಸಭೆ ನಡೆಸಿ ಸಭೆಯಲ್ಲಿ ಸೌಲಭ್ಯಗಳ ಕುರಿತು ಮಾಹಿತಿ ನೀಡಬೇಕು. ಚುನಾವಣೆ ನೀತಿ ಸಂಹಿತೆ ನೆಪ ಹೇಳದೆ ಆದ್ಯತೆ ಮತ್ತು ಅವಶ್ಯಕತೆಗೆ ತಕ್ಕಂತೆ ಕಾಮಗಾರಿ ಆರಂಭಿಸಬೇಕು. ನಿತ್ಯ ಕೆಲಸ ನಡೆಸಬೇಕು. ನೆಪ ಹೇಳಿದರೆ ಆಯಾ ಪಂಚಾಯಿತಿ ಪಿಡಿಓ ಅವರನ್ನೇ ಹೊಣೆಯಾಗಿಸಬೇಕು ಎಂದು ಆಗ್ರಹಿಸಿದರು.


ಈ ವಿಷಯವನ್ನು ಆದ್ಯತೆ ಮೆರೆಗೆ ಕೈಗೆತ್ತಿಕೊಂಡು ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ಅವರು ಕ್ರಮ ಕೈಗೊಳ್ಳಬೇಕು. ಹೂಳು ಎತ್ತುವುದರಿಂದ ಕೆರೆಯಲ್ಲಿ ಹೆಚ್ಚು ನೀರು ಶೇಖರಣೆಯಾಗುತ್ತದೆ. ಅಂತರ್ಜಲ ಮಟ್ಟ ಹೆಚ್ಚುತ್ತದೆ. ಒಳನಾಡು ಮೀನುಗಾರಿಕೆಗೆ ನೆರವಾಗುತ್ತದೆ ಎಂದು ಹೇಳಿದರು.


ಲಕ್ಷ್ಮಣ, ನಾಗಪ್ಪ, ಮಲ್ಲಿಕಾಜರ್ುನ, ಶಿವರಾಜ, ಶಂಕರ, ರವಿಕುಮಾರ, ರಡ್ಡೆಪ್ಪ, ಯಂಕಪ್ಪ, ಶಿವಪ್ಪ, ದೇವಪ್ಪ, ಬಸವರಾಜ, ಶರಣಪ್ಪ, ಯಲ್ಲಪ್ಪ ಹಾಗೂ ಅಂಬಿಗರ ಚೌಡಯ್ಯ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.