More

    ನ್ಯೂಯಾರ್ಕ್ ಸಿನಿಮೋತ್ಸವಕ್ಕೆ ಕೋಳಿ ತಾಳ್; ಕುಂದಾಪ್ರ ಭಾಷಾ ಸೊಗಡಿನ ಚಿತ್ರ

    ಬೆಂಗಳೂರು: ಚಿತ್ರದ ಹೆಸರು ‘ಕೋಳಿ ತಾಳ್’. ಶೀರ್ಷಿಕೆ ಹೀಗಿದೆ ಎಂದ ಮಾತ್ರಕ್ಕೆ ಇದ್ಯಾವ ಭಾಷೆಯ ಸಿನಿಮಾ ಎಂದುಕೊಳ್ಳಬೇಡಿ. ಇದು ಕನ್ನಡ ಚಿತ್ರ. ಕುಂದಾಪುರ ಭಾಗದ ಭಾಷೆ ಬಳಸಿಕೊಂಡು ‘ಕೋಳಿ ತಾಳ್’ ಹೆಸರಿನ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಅಭಿಲಾಷ್.

    ಅಂದಹಾಗೆ, ಕೋಳಿ ತಾಳ್ ಎಂದರೆ ಚಿಕನ್ ಕರ್ರಿ ಎಂದರ್ಥ. ಈ ಸಿನಿಮಾ ಇದೀಗ ನ್ಯೂಯಾರ್ಕ್ ಇಂಡಿಯನ್ ಸಿನಿಮೋತ್ಸವಕ್ಕೆ ಆಯ್ಕೆಯಾಗಿದೆ. ಸಂಪೂರ್ಣ ಕುಂದಾಪುರ ಭಾಷೆಯ ಸೊಗಡು ಈ ಚಿತ್ರದಲ್ಲಿದ್ದು, ನಿರ್ದೇಶನದ ಜತೆಗೆ ನಟನಾಗಿಯೂ ಅಭಿಲಾಷ್ ನಟಿಸಿದ್ದಾರೆ. ಹಿರಿಯ ನಟರಾದ ರಾಧಾ ರಾಮಚಂದ್ರ ಮತ್ತು ಪ್ರಭಾಕರ್ ಕುಂದರ್ ಪ್ರಮುಖ ಪಾತ್ರದಲ್ಲಿದ್ದಾರೆ.

    ಹಾಗಾದರೆ, ಚಿತ್ರದ ವಿಶೇಷತೆ ಏನು? ಕುಂದಾಪುರ, ಮಲೆನಾಡ ಭಾಗದಲ್ಲಿ ಅಜ್ಜಿ ಮನೆಗೆ ಮೊಮ್ಮಗ ಬಂದರೆ ಕೋಳಿ ಕರ್ರಿ ಮಾಡುವ ಸಂಪ್ರದಾಯವಿದೆ. ಹಾಗೆ ಮೊಮ್ಮಗ ಬಂದ ಹೊತ್ತಲ್ಲಿ ಕರ್ರಿ ಮಾಡಬೇಕಿದ್ದ ಕೋಳಿಯೇ ನಾಪತ್ತೆಯಾಗುತ್ತದೆ. ಆ ಕೋಳಿಯನ್ನು ಹುಡುಕಾಡುವ ಪ್ರಸಂಗವೇ ‘ಕೋಳಿ ತಾಳ್’ ಚಿತ್ರದ ಸಾರಾಂಶ. ಒಂದೂವರೆ ಗಂಟೆಯ ಈ ಸಿನಿಮಾವನ್ನು 15ರಿಂದ 20 ದಿನಗಳ ಅವಧಿಯಲ್ಲಿ ಸಾಗರ, ಬ್ರಹ್ಮಾವರ, ಉಡುಪಿ, ಮಂದಾರ್ತಿಯಲ್ಲಿ ಶೂಟಿಂಗ್ ಮಾಡಲಾಗಿದೆ.

    ಈ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ಅಭಿಲಾಷ್, ‘ಇದೊಂದು ಆಫ್ ಬೀಟ್ ಸಿನಿಮಾ. ಕಮರ್ಷಿಯಲ್ ಅಂಶಗಳ ಎಲ್ಲಿಯೂ ಕಾಣಿಸುವುದಿಲ್ಲ. ಮೂವರ ನಡುವೆ ನಡೆಯುವ ಕಥೆ. ಲಾಕ್​ಡೌನ್​ಗೂ ಮುನ್ನ ಚಿತ್ರದ ಶೂಟಿಂಗ್ ಮಾಡಿದ್ದೇವೆ’ ಎಂಬುದು ಅವರ ಮಾತು. ಸಚಿನ್ ಪಟ್ಟಣಶೆಟ್ಟಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಸ್ವರೂಪ ಯಶವಂತ್ ಛಾಯಾಗ್ರಹಣ, ಬ್ರೆಜಿಲ್ ಮೂಲದ ವಿಥೌರ್ ಮೊರಾಯಿಸ್ ಸೌಂಡ್ ಡಿಸೈನ್ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts