ಹಣ ವಾಪಸ್‌ಗೆ ಆಗ್ರಹಿಸಿ ಪ್ರತಿಭಟನೆ

ಕೊಲ್ಹಾರ: ರೋಣಿಹಾಳ ಸಿಂಡಿಕೇಟ್ ಬ್ಯಾಂಕ್ ಗ್ರಾಹಕ ಮಿತ್ರ ಭೀಮಸಿ ತೆಲಗಿ ಕೈಚಳಕದಿಂದ 95 ಲಕ್ಷ ಕಳೆದುಕೊಂಡು ಪರಿತಪಿಸುತ್ತಿರುವ ಕುಪಕಡ್ಡಿ ಗ್ರಾಮದ ಗ್ರಾಹಕರು ಬ್ಯಾಂಕ್‌ನವರು ಕೊಟ್ಟ ಮಾತಿನಂತೆ ದುಡ್ಡು ಮರಳಿಸದಿರುವುದನ್ನು ಖಂಡಿಸಿ ರೋಣಿಹಾಳ ಸಿಂಡಿಕೇಟ್ ಬ್ಯಾಂಕ್ ಶಾಖೆ ಮುಂದೆ ಪ್ರತಿಭಟನೆ ನಡೆಸಿದರು.

ಬ್ಯಾಂಕ್ ಹಿರಿಯ ಅಧಿಕಾರಿಗಳು ನೀಡಿದ ಭರವಸೆ ಹುಸಿಯಾಗಿದೆ. ದುಡ್ಡು ದೋಚಿ ಪರಾರಿಯಾಗಿದ್ದ ವ್ಯಕ್ತಿ ಜಾಮೀನಿನ ಮೇಲೆ ರಾಜಾರೋಷವಾಗಿ ತಿರುಗಾಡುತ್ತಿದ್ದಾನೆ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದರು. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕು. ಕೂಡಲೇ ಸಮಸ್ಯೆ ಬಗೆಹರಿಸಬೇಕು. ನಮ್ಮ ದುಡ್ಡು ಮರಳಿಸಬೇಕು ಎಂದು ಅಳಲು ತೋಡಿಕೊಂಡರು.

ಆತ್ಮಹತ್ಯೆಗೆ ಯತ್ನ: ದುಡ್ಡು ಸಿಗದೆ ಹೋದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವ್ಯಕಿಯೊಬ್ಬ ನೇಣು ಬಿಗಿದುಕೊಳ್ಳಲು ಯತ್ನಿಸಿದಾಗ ಪೊಲೀಸರು ತಡೆದರು. ಇನ್ನೊಬ್ಬ ವ್ಯಕ್ತಿಯ ಕೈಯಲ್ಲಿದ್ದ ಪೆಟ್ರೋಲ್ ಕ್ಯಾನ್ ಕಸಿದುಕೊಂಡು ಮುಂದೆ ಸಂಭವಿಸಲಿದ್ದ ಅನಾಹುತವನ್ನು ಪೊಲೀಸರು ತಪ್ಪಿಸಿದರು. ಸಿಪಿಐ ಮಹಾದೇವ ಶಿರಹಟ್ಟಿ, ಕೊಲ್ಹಾರ ಪಿಎಸ್‌ಐ ವಸಂತ್ ಬಂಡಗಾರ ಹಾಗೂ ಸಿಬ್ಬಂದಿ ಬಂದೋಬಸ್ತ್ ಕೈಗೊಂಡಿದ್ದರು.

ಗ್ರಾಹಕರು ಕಳೆದುಕೊಂಡ ದುಡ್ಡನ್ನು ಶೀಘ್ರ ಮರಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ. ವ್ಯಾಜ್ಯ ನ್ಯಾಯಾಲಯದಲ್ಲಿದ್ದರೂ ಬ್ಯಾಂಕ್ ಹಿರಿಯ ಅಧಿಕಾರಿಗಳಾದ ಇಡಿಒ ಮತ್ತು ಜಿಎಂ ಅವರೊಂದಿಗೆ ಚರ್ಚಿಸಿ ಗ್ರಾಹಕರ ಸಮಸ್ಯೆ ಪರಿಹರಿಸಲಾಗುವುದು.
– ಎನ್. ಶ್ರೀಕಾಂತ ಪ್ರಾದೇಶಿಕ ವ್ಯವಸ್ಥಾಪಕರು, ಸಿಂಡಿಕೇಟ್ ಬ್ಯಾಂಕ್ ವಿಜಯಪುರ