ಎಚ್​ಐವಿ ಸೋಂಕಿತರು ಕಂಗಾಲು

ಕೊಲ್ಹಾರ: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಸಮಗ್ರ ಆಪ್ತ ಸಮಾಲೋಚನೆ ಹಾಗೂ ಪರೀಕ್ಷಾ ಕೇಂದ್ರ (ಐಸಿಟಿಸಿ)ವನ್ನು ಬಸವನಬಾಗೇವಾಡಿಗೆ ಸ್ಥಳಾಂತರಿಸಿದ ಹಿನ್ನೆಲೆ ಎಚ್​ಐವಿ ಸೋಂಕಿತರು, ಪ್ರಸಕ್ತ ಎಚ್​ಐವಿ ಪರೀಕ್ಷೆ ಹಾಗೂ ಆಪ್ತ ಸಮಾಲೋಚನೆ ಬಯಸುವವರು ಪರದಾಡುವಂತಾಗಿದೆ.

ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಐಸಿಟಿಸಿ ಕೇಂದ್ರವನ್ನು ಎಫ್​ಐಸಿಟಿಸಿ ಕೇಂದ್ರವಾಗಿ ಬದಲಾವಣೆ ಮಾಡಿ ಬಸವನಬಾಗೇವಾಡಿಗೆ ವರ್ಗಾಯಿಸಲಾಗಿದೆ. ಕೊಲ್ಹಾರ ತಾಲೂಕು ಕೇಂದ್ರವಾಗಿ ರಚನೆಯಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30 ಹಾಸಿಗೆಗಳುಳ್ಳ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲರು ಭರವಸೆ ನೀಡಿದ್ದಾರೆ. ಆದರೆ, ಏಕಾಏಕಿ ಐಸಿಟಿಸಿ ಕೇಂದ್ರವನ್ನು ಎಫ್​ಐಸಿಟಿಸಿ ಕೇಂದ್ರವಾಗಿ ವರ್ಗಾಯಿಸಿರುವುದು ಪಟ್ಟಣ ಹಾಗೂ ಸುತ್ತ ಮುತ್ತಲಿನ ಎಚ್​ಐವಿ ಸೋಂಕಿತರನ್ನು ಚಿಂತಿಗೀಡು ಮಾಡಿದೆ.

ಈ ಕೇಂದ್ರದ ವ್ಯಾಪ್ತಿಯಲ್ಲಿ ತೆಲಗಿ, ಮುಳವಾಡ, ರೋಣಿಹಾಳ ಮತ್ತು ಕೂಡಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಬರುತ್ತವೆ. ಈ ವ್ಯಾಪ್ತಿಯಲ್ಲಿ ಕೆಲವು ಕಡೆ ಎಚ್​ಐವಿ ಸೋಂಕಿತರು ಹಾಗೂ ಕೆಲವು ಲೈಂಗಿಕ ಕಾರ್ಯಕರ್ತೆಯರು ಇದ್ದು, ಅವರಿಗೆ ಸೂಕ್ತ ಸಮಾಲೋಚನೆ ಹಾಗೂ ರಕ್ತ ಪರೀಕ್ಷೆ ಮಾಡುವುದು ಅತ್ಯವಶ್ಯವಾಗಿದೆ. ಇಲ್ಲಿ ಮೇಲಿಂದ ಮೇಲೆ ಸಮಾಲೋಚನೆ ನಡೆಸಿ ಆತ್ಮಸ್ಥೈರ್ಯ ತುಂಬಲಾಗುತ್ತಿತ್ತು ಎಂದು ಏಡ್ಸ್ ಜಾಗೃತಿ ಮಹಿಳಾ ಸಂಘದ ಕಾರ್ಯಕರ್ತೆ ಜಯಶ್ರೀ ಬಿಂಗಿ, ಆಪ್ತ ಸಮಾಲೋಚಕ ರಾಜಕುಮಾರ ಯಾಥನೂರ, ತಂತ್ರಜ್ಞ ಶ್ರೀಕಾಂತ ಜಮಖಂಡಿ ಹೇಳುತ್ತಾರೆ.

ಐಸಿಟಿಸಿ ಕೇಂದ್ರದ ನಿರಂತರ ಜಾಗೃತಿ ಹಾಗೂ ಎಚ್ಚರಿಕೆಯಿಂದ ಪಟ್ಟಣ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಗಣನೀಯ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಹಾಗಾಗಿ ಐಸಿಟಿಸಿ ಕೇಂದ್ರವನ್ನು ಕೊಲ್ಹಾರ ಪಟ್ಟಣದಲ್ಲೇ ಮುಂದುವರಿಸುವುದು ಅವಶ್ಯವಾಗಿದೆ ಎಂದು ವೈದ್ಯಾಧಿಕಾರಿ ಡಾ.ಸುಶಿಷ್ಠ ಎಸ್.ಗಣಾಚಾರಿ ಹಾಗೂ ಆಯುಷ್ ವೈದ್ಯಾಧಿಕಾರಿ ಡಾ.ಎಸ್.ಎಂ. ಪಾಟೀಲರ ಅಭಿಪ್ರಾಯವಾಗಿದೆ.

ಐಸಿಟಿಸಿ ಕೇಂದ್ರ ಸ್ಥಳಾಂತರಗೊಂಡಿರುವ ಕುರಿತು ಆರೋಗ್ಯ ಮತ್ತು ಕಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲರ ಗಮನಕ್ಕೆ ತಂದಿದ್ದೇವೆ. ಶೀಘ್ರ ಐಸಿಟಿಸಿ ಕೇಂದ್ರವನ್ನು ಮರು ಪ್ರಾರಂಭಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ.

| ಆರ್.ಬಿ. ಪಕಾಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ