ಕಾಮಗಾರಿ ಸ್ಥಗಿತಗೊಳಿಸಿದ ಸಾರ್ವಜನಿಕರು

ಕೊಲ್ಹಾರ: ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ ವಸತಿ ಮತ್ತು ನಿರ್ಮಾಣ ವತಿಯಿಂದ ಪಟ್ಟಣದಲ್ಲಿ ನಿರ್ವಿುಸುತ್ತಿರುವ ವಾಣಿಜ್ಯ ಸಂಕೀರ್ಣ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಸಾರ್ವಜನಿಕರು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.

ಸುದ್ದಿ ತಿಳಿದು ಕೆಬಿಜೆಎನ್​ಎಲ್ ಸಹಾಯಕ ಅಭಿಯಂತರ ಎಸ್.ಟಿ. ಬಬಲೇಶ್ವರ ಸ್ಥಳಕ್ಕಾಗಮಿಸಿ, ನೀಲಿನಕ್ಷೆ ಪ್ರಕಾರ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಕಳಪೆಯಿಂದ ಕೂಡಿಲ್ಲ ಎಂದು ಸ್ಪಷ್ಟನೆ ನೀಡಲೆತ್ನಿಸಿದಾಗ ಹಾಗಾದರೆ ನೀಲಿನಕ್ಷೆ ನಮಗೆ ತೋರಿಸಿ ಎಂದು ಸಾರ್ವಜನಿಕರು ಒತ್ತಾಯಿಸಿದರು.

ನೀವು ಕೇಳಿದ ತಕ್ಷಣ ಅಂದಾಜು ಪ್ರತಿ ತೋರಿಸಲು ಆಗುವುದಿಲ್ಲ. ಕೇಳುವ ಅಧಿಕಾರ ಕೂಡ ನಿಮಗಿಲ್ಲ ಎಂದು ಅಭಿಯಂತರ ಬಬಲೇಶ್ವರ ಉದ್ಧಟತನದಿಂದ ಉತ್ತರಿಸಿದಾಗ ಸಿಟ್ಟಾದ ಸಾರ್ವಜನಿಕರು, ಹಾಗಾದರೆ ಕಳಪೆ ಕಾಮಗಾರಿಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು. ನೀಲಿನಕ್ಷೆ ಹಾಗೂ ಅಂದಾಜು ಪ್ರತಿ ಸದ್ಯಕ್ಕೆ ನನ್ನಲ್ಲಿಲ್ಲ. ನಾಳೆ ತಂದು ತೋರಿಸುತ್ತೇನೆ ಎಂದು ಅಭಿಯಂತರ ಸಮಜಾಯಿಸಿ ನೀಡಿದರು.

ಕಾಮಗಾರಿ ನೀಲಿನಕ್ಷೆ ಬರುವವರೆಗೆ ಕೆಲಸ ಮಾಡಬೇಡಿ. ನೀಲಿನಕ್ಷೆಗೆ ಅನುಗುಣವಾಗಿ ಸಮರ್ಪಕವಾಗಿ ಕಾಮಗಾರಿ ಮಾಡಬೇಕು ಎಂದು ಗುತ್ತಿಗೆದಾರನಿಗೆ ಸಾರ್ವಜನಿಕರು ಎಚ್ಚರಿಕೆ ನೀಡಿ ಕಾಮಗಾರಿ ಸ್ಥಗಿತಗೊಳಿಸಿದರು.

ಪಪಂ ಸದಸ್ಯ ವಿರೂಪಾಕ್ಷಿ ಕೋಲಕಾರ, ನಾಮನಿರ್ದೇಶಿತ ಸದಸ್ಯ ಬಸವರಾಜ ಹುಲ್ಯಾಳ, ಸಿ.ಎಸ್. ಗಿಡ್ಡಪ್ಪಗೋಳ್, ಟಿ.ಟಿ. ಹಗೇದಾಳ, ಕಾಶೀಂ ವಾಲಿಕಾರ, ವಿಲಾಸ ಪತ್ತಾರ, ಅಲ್ಲಾಭಕ್ಷ ಗಿರಗಾಂವಿ, ಚಂದ್ರಶೇಖರ ಪತಂಗಿ, ನಿಂಗು ಗಣಿ, ಮುನ್ನಾ ಕಮತಗಿ, ಸಾರ್ವಜನಿಕರು ಇದ್ದರು.

ವಾಣಿಜ್ಯ ಸಂಕೀರ್ಣ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಸಹಾಯಕ ಅಭಿಯಂತರ ಹಾಗೂ ಗುತ್ತಿಗೆದಾರರು ಉದ್ಧಟತನದಿಂದ ವರ್ತಿಸುತ್ತಿದ್ದಾರೆ. ನಿಯಮದಂತೆ ಸಮರ್ಪಕವಾಗಿ ಕಾಮಗಾರಿ ಮಾಡಬೇಕು.

| ವಿರೂಪಾಕ್ಷಿ ಕೋಲಕಾರ, ಪಪಂ ಸದಸ್ಯ