ಕೊಳೆರೋಗ ಸಿಗುವುದೇ ಪರಿಹಾರ?

– ವೇಣುವಿನೋದ್ ಕೆ.ಎಸ್. ಮಂಗಳೂರು
ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಮುಂದುವರಿದ ಮಳೆಯಿಂದಾಗಿ ಅಡಕೆ ಕೃಷಿಗೆ ಕೊಳೆರೋಗದಿಂದ ಬಲವಾದ ಹೊಡೆತ ಬಿದ್ದಿದೆ.
2007, 2013ರ ನಂತರ ಮತ್ತೊಮ್ಮೆ ಸಂಕಷ್ಟಕರ ಪರಿಸ್ಥಿತಿ ಅಡಕೆ ಬೆಳೆಗಾರರಿಗೆ ಎದುರಾಗಿದೆ. 2013ರಲ್ಲಿ ಸರ್ಕಾರ ಸುಮಾರು 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೊಳೆರೋಗ ಬಾಧಿಸಿದ ಹಿನ್ನೆಲೆಯಲ್ಲಿ 30 ಕೋಟಿ ರೂ.ಗಳ ಪ್ಯಾಕೇಜ್ ಘೋಷಣೆ ಮಾಡಿತ್ತು. ಅದಕ್ಕೂ ಹಿಂದೆ 2007ರಲ್ಲಿ ಸುಮಾರು 20 ಸಾವಿರ ಕೃಷಿಕರನ್ನು ಬಾಧಿಸಿದ್ದಾಗ ಸರ್ಕಾರ 4.59 ಕೋಟಿ ರೂ. ಪರಿಹಾರ ಕೊಟ್ಟಿತ್ತು.
ಈ ಬಾರಿಯೂ ಸೂಕ್ತ ಪರಿಹಾರ ಅಥವಾ ಇತರ ಧನಾತ್ಮಕ ಪ್ರೋತ್ಸಾಹ ಕ್ರಮಗಳಿಗಾಗಿ ಕೃಷಿಕರು ಕಾದಿದ್ದಾರೆ. ಈ ಬಾರಿ ಶೇ.33ಕ್ಕಿಂತಲೂ ಹೆಚ್ಚು ಪ್ರದೇಶದಲ್ಲಿ ಕೊಳೆರೋಗ ಹರಡಿದೆ ಎಂದು ತೋಟಗಾರಿಕೆ ಅಧಿಕಾರಿಗಳು ಹೇಳುತ್ತಾರೆ. ಒಟ್ಟಾರೆ ಜಿಲ್ಲೆಯಲ್ಲಿ 40 ಸಾವಿರ ಹೆಕ್ಟೇರ್ ಜಾಗದಲ್ಲಿ ಅಡಕೆ ಬೆಳೆಯಲಾಗುತ್ತದೆ.
ಪ್ರಮುಖವಾಗಿ ಸುಳ್ಯ, ಪುತ್ತೂರು, ಕಡಬ ಹಾಗೂ ಬೆಳ್ತಂಗಡಿಯ ಹಲವೆಡೆ ಈ ಬಾರಿ ಕೊಳೆರೋಗ ಹೆಚ್ಚಿದೆ. ಕೆಲವೆಡೆ ಮರಗಳೇ ಸಾಯುವ ಹಂತ ತಲುಪಿವೆ ಎನ್ನುತ್ತಾರೆ ಅಖಿಲ ಭಾರತ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್.
ಅನೇಕ ಕಡೆಗಳಲ್ಲಿ ಕೃಷಿಕರು ಮೇ ತಿಂಗಳಲ್ಲೇ ಕೊಳೆರೋಗ ಬಾರದಂತೆ ಬೋರ್ಡೋ ಸಿಂಪಡಣೆ ಮಾಡಿದ್ದರು, ಆದರೆ ಮೇ ಕೊನೆಯಿಂದ ನಿರಂತರವಾಗಿ ಮಳೆ ಸುರಿಯುತ್ತಲೇ ಇದ್ದ ಕಾರಣ ರೋಗ ಹರಡಿದೆ. ಕೆಲವೆಡೆ ಮಳೆ ಚಿಕ್ಕ ವಿರಾಮ ನೋಡಿ ಮದ್ದು ಸಿಂಪಡಿಸಿದ್ದು ಫಲ ನೀಡಿಲ್ಲ. ಹಲವು ಕಡೆಗಳಲ್ಲಿ ಬೋರ್ಡೋ ದ್ರಾವಣ ಸಿದ್ಧಪಡಿಸಿ ಇರಿಸಲಾಗಿತ್ತು, ಬಿಡುವುದಕ್ಕೆ ಆಳುಗಳೂ ಇದ್ದರೂ ಮಳೆ ವಿರಾಮ ಕೊಡದೆ ಸುರಿದ ಕಾರಣ ಅದೆಲ್ಲ ಹಾಳಾಗಿದೆ ಎನ್ನುತ್ತಾರೆ ಪಟೋಳಿಯ ರಮೇಶ್ ಭಟ್ ಎಂಬ ಕೃಷಿಕರು.

60 ಕೋಟಿ ರೂ. ಬೇಕು:  ಅಧಿಕೃತ ಮಾಹಿತಿ ಪ್ರಕಾರ 33,395 ಹೆಕ್ಟೇರ್‌ಗಿಂತಲೂ ಹೆಚ್ಚು ಕಡೆ ಅಡಕೆ ಬೆಳೆಗೆ ಕೊಳೆರೋಗ ತಗುಲಿದೆ. ಈ ಬಗ್ಗೆ ನಾವು ವರದಿ ನೀಡಿದ್ದು, ಜಿಲ್ಲಾಧಿಕಾರಿಯವರ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದು ಕೇಂದ್ರ ಸರ್ಕಾರಕ್ಕೂ ಹೋಗಲಿದ್ದು, ಪರಿಹಾರ ಯಾವಾಗ ಬರುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು. ಜಿಲ್ಲೆಯಲ್ಲಿ ಅಡಕೆ ಕೊಳೆರೋಗಕ್ಕೆ ಪರಿಹಾರ ಕೊಡಲು 60 ಕೋಟಿ ರೂ. ಬೇಕಾಗಬಹುದು. ಇದನ್ನು ರಾಷ್ಟ್ರೀಯ ವಿಕೋಪ ನಿಧಿಯಿಂದ ಸೂಕ್ತ ನಿಯಮಾವಳಿ ಪ್ರಕಾರ ವಿತರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2016-17ರಲ್ಲಿ ಅಡಕೆ ಇಳುವರಿ ಕಡಿಮೆಯಿತ್ತು. ಆ ಸಂದರ್ಭದಲ್ಲಿ ವಾಡಿಕೆಗಿಂತ ಶೇ.50 ಬೆಳೆ ಕಡಿಮೆ ಇತ್ತು. ಆದರೆ ಹೆಚ್ಚಿನವರಿಗೆ ಗಮನಕ್ಕೆ ಬಂದದ್ದು ಬೆಳೆ ಕಟಾವು ಆದ ಬಳಿಕ. ಆದ್ದರಿಂದ ಸಾಮಾಜಿಕವಾಗಿ ಈ ವಿಷಯ ಚರ್ಚೆ ಆಗಿಲ್ಲ. ಕೊಳೆರೋಗದ ಬಗ್ಗೆ ಸರ್ಕಾರದಿಂದ ಯಾವಾಗಲೋ ಒಮ್ಮೇ ಸಣ್ಣ ಪ್ರಮಾಣದಲ್ಲಿ ಸಹಾಯ ದೊರಕಿದೆ. ಅದು ನಗಣ್ಯ.
– ರಾಧಾಕೃಷ್ಣ ಕೋಟೆ, ಅಡಕೆ ಕೃಷಿಕ

 

ಈ ಬಾರಿ ಮಳೆಯಿಂದಾಗಿ ಹೆಚ್ಚಿನ ಭಾಗಗಳಲ್ಲಿ ಶೇ.65ರಷ್ಟು ಅಡಕೆ ಹಾಗೂ ಶೇ.10 ಅಡಕೆ ಮರ ನಾಶವಾಗಿದೆ. ಇಲಾಖೆ ವತಿಯಿಂದ ಸ್ಥಳೀಯವಾಗಿ ವರದಿ ಸಂಗ್ರಹಿಸಿದ್ದಾರೆ, ಸರ್ಕಾರಕ್ಕೆ ಇದರ ಗಂಭೀರತೆ ಮನಗಂಡಿದೆಯೋ ಗೊತ್ತಿಲ್ಲ. ಈ ಹಿಂದೆ ಕೊಳೆರೋಗ ಬಾಧಿಸಿದಾಗ ಅಲ್ಪ ಸ್ವಲ್ಪ ಪರಿಹಾರ ಕೊಟ್ಟಿದ್ದರು, ರೈತರಿಗೆ ಬೆಳೆವಿಮೆ ಇತ್ಯಾದಿ ವಿಷಯಗಳ ಮೇಲೆ ಮಾಹಿತಿ ನೀಡದೆ ಅಧಿಕಾರಿಗಳು ವಿಫಲರಾಗಿದ್ದಾರೆ. ಈ ಜಿಲ್ಲೆಯ ಜೀವನಾಧಾರವಾದ ಬೆಳೆಯೇ ಕೈಕೊಟ್ಟು, ಸರ್ಕಾರದ ಪರಿಹಾರ ಸಿಗದೇ ಇದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಆರ್ಥಿಕ ಚಟುವಟಿಕೆ ಕುಂಠಿತವಾಗುತ್ತದೆ.
– ಪ್ರಸನ್ನ ಕೆ, ಕೃಷಿಕ, ಎಣ್ಮೂರು, ಸುಳ್ಯ

 

ಈ ಬಾರಿ ಶೇ.30ರಿಂದ 40ರಷ್ಟು ಅಡಕೆಗೆ ಕೊಳೆರೋಗ ತಟ್ಟಿದೆ, 2013ರಲ್ಲಿ ರಾಜ್ಯ ಸರ್ಕಾರ ಪರಿಹಾರ ನೀಡಿತ್ತು. ಈ ಬಾರಿಯೂ ಆದ್ಯತೆ ಮೇರೆಗೆ ಸರ್ಕಾರ ಪರಿಹಾರ ಒದಗಿಸಬೇಕಿದೆ.
– ಸತೀಶ್ಚಂದ್ರ ಎಸ್.ಆರ್, ಕ್ಯಾಂಪ್ಕೊ ಅಧ್ಯಕ್ಷ