ಸಾರಿಗೆ ಬಸ್‌ಗೆ ಬೆಂಕಿ

ಕೊಲ್ಹಾರ: ವಿಜಯಪುರದಿಂದ ಬೀಳಗಿ ಮಾರ್ಗವಾಗಿ ಬಾಗಲಕೋಟೆಗೆ ಸಂಚರಿಸುತ್ತಿದ್ದ ಬೀಳಗಿ ಘಟಕದ ಕೆಎ-29, ಎ್-1106 ಸಂಖ್ಯೆಯ ಸರ್ಕಾರಿ ಬಸ್‌ಗೆ ಕೊಲ್ಹಾರ ಯುಕೆಪಿ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಫೆ.19 ರಂದು ಸಂಜೆ ಬೆಂಕಿ ತಗುಲಿ ಅಂದಾಜು 35 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬಸ್‌ನ ಡೀಸೆಲ್ ಟ್ಯಾಂಕ್ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡಿದ್ದನ್ನು ಗಮನಿಸಿದ ಚಾಲಕ ಕೆ.ಎಸ್. ಚೂರಿ ಹಾಗೂ ನಿರ್ವಾಹಕ ವಿ.ಎಂ. ಬಿರಾದಾರ ಪ್ರಯಾಣಿಕರನ್ನು ಕೂಡಲೇ ಕೆಳಗಿಳಿಸಿದ್ದಾರೆ. ಬೆಂಕಿ ಹೊತ್ತಿಕೊಂಡ ಸುದ್ದಿ ತಿಳಿದ ಪ್ರಯಾಣಿಕರು ಗಾಬರಿಯಿಂದ ಕೆಳಗೆ ಇಳಿಯುವ ಭರದಲ್ಲಿ ಒಬ್ಬರ ಮೇಲೊಬ್ಬರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಪತ್ರಿಕೆಗೆ ತಿಳಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಸಿಬ್ಬಂದಿ ವೈಫಲ್ಯ
ಪ್ರತಿಯೊಂದು ಬಸ್ ರಸ್ತೆಗೆ ಇಳಿಯುವ ಮುನ್ನ ಕೆಎಸ್‌ಆರ್‌ಟಿಸಿ ಮೆಕ್ಯಾನಿಕ್‌ಗಳು ಸಮರ್ಪಕವಾಗಿ ಪರಿಶೀಲಿಸಿ ರಸ್ತೆಗೆ ಬಿಡಬೇಕು ಎನ್ನುವ ನಿಯಮವಿದೆ. ಆದರೆ ಸಿಬ್ಬಂದಿ ಕರ್ತವ್ಯದಲ್ಲಿ ಲೋಪ ಎಸಗಿದ್ದಾರೆ ಎಂದು ಪ್ರಯಾಣಿಕರು, ಸಾರ್ವಜನಿಕರು ಆರೋಪಿಸಿದ್ದಾರೆ.

ತರಾತುರಿಯಲ್ಲಿ ಬಸ್ ಸ್ಥಳಾಂತರ
ಘಟನೆ ಸ್ಥಳದಲ್ಲಿದ್ದ ಸಾರ್ವಜನಿಕರು ಬೆಂಕಿ ನಂದಿಸಿದ ತಕ್ಷಣ ಬೀಳಗಿ ಕೆಎಸ್‌ಆರ್‌ಟಿಸಿ ಘಟಕದ ಸಿಬ್ಬಂದಿ ಬಸ್‌ನ್ನು ಡಿಪೋಗೆ ಸ್ಥಳಾಂತರಿಸಿದ್ದಾರೆ. ಬಸ್‌ಗೆ ಬೆಂಕಿ ಹೊತ್ತಿಕೊಂಡ ಬಗ್ಗೆ ಚಿಕ್ಕದೊಂದು ಪ್ರಕರಣವನ್ನೂ ಕೊಲ್ಹಾರ ಠಾಣೆಯಲ್ಲಿ ದಾಖಲಿಸಿಲ್ಲ. ಸಾರಿಗೆ ಸಂಸ್ಥೆ ಹಿರಿಯ ಸಿಬ್ಬಂದಿ ಘಟನೆ ನಡೆದ ಸ್ಥಳಕ್ಕೆ ಬರದೆ ತರಾತುರಿಯಲ್ಲಿ ಎಲ್ಲ ಪ್ರಯಾಣಿಕರನ್ನು ಬೇರೆ ಬಸ್‌ಗೆ ಕಳುಹಿಸಿದ್ದಾರೆ. ಒಟ್ಟಾರೆ ಪ್ರಯಾಣಿಕರ ಅಮೂಲ್ಯ ಜೀವಗಳೊಂದಿಗೆ ಚಲ್ಲಾಟವಾಡಿದ ಸಂಬಂಧಿತ ಸಾರಿಗೆ ಅಧಿಕಾರಿಗಳ ಮೇಲೆ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿರುವುದು ಸಾರ್ವಜನಿಕರಲ್ಲಿ ಸಂಶಯ ಉಂಟು ಮಾಡಿದೆ.

ಸಾರಿಗೆ ಘಟಕದಿಂದ ಹೊರಡುವಾಗ ಬಸ್‌ನ್ನು ಸಂಪೂರ್ಣ ಪರಿಶೀಲಿಸಲಾಗಿದೆ. ಆದರೂ ಬೆಂಕಿ ತಗುಲಿದೆ. ವಿಚಾರಣೆ ನಡೆಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ಎಸ್.ಆರ್. ಒಡೆಯರ್ ಬೀಳಗಿ ಸಾರಿಗೆ ಘಟಕ ವ್ಯವಸ್ಥಾಪಕ

ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದಕ್ಕೆ ಪ್ರಯಾಣಿಕರು ಕೂಗುತ್ತಾ ಇಳಿದು ಓಡುತ್ತಿದ್ದರು. ಬಸ್‌ಗೆ ಬೆಂಕಿ ತಗುಲಿದ್ದನ್ನು ಗಮನಿಸಿ 20ಕ್ಕೂ ಹೆಚ್ಚು ನಿಮಿಷ ಸಾರ್ವಜನಿಕರೊಂದಿಗೆ ನೀರು ಎರಚಿ ಬೆಂಕಿ ನಂದಿಸಲಾಗಿದೆ.
– ಮೈನುದ್ದೀನ್ ಗಿರಗಾಂವಿ ಬೆಂಕಿ ನಂದಿಸಿದ ವ್ಯಕ್ತಿ, ಪ್ರತ್ಯಕ್ಷೃದರ್ಶಿ