ಕೋಲಾರ ನಗರಸಭೆ ಕೈ ವಶ

ಕೋಲಾರ: ಕೋಲಾರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಕಾಂಗ್ರೆಸ್‌ನ ಸದಸ್ಯೆ ಲಕ್ಷ್ಮೀದೇವಮ್ಮ ಹಾಗೂ ಉಪಾಧ್ಯಕ್ಷೆಯಾಗಿ ಪಕ್ಷೇತರ ಸದಸ್ಯೆ ಸಂಗೀತಾ ಅವಿರೋಧ ಆಯ್ಕೆಯಾದರು.

ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಲಕ್ಷ್ಮೀದೇವಮ್ಮ, ಕಾಂಗ್ರೆಸ್ ಬಂಡಾಯವಾಗಿ ಬಿ.ಎಂ.ಮುಬಾರಕ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಸದಸ್ಯರಾದ ಅಪೂರ್ವಾ ಮತ್ತು ಸಂಗೀತಾ ನಾಮಪತ್ರ ಸಲ್ಲಿಸಿದ್ದರು.
ಬಿ.ಎಂ.ಮುಬಾರಕ್ ಮತ್ತು ಅಪೂರ್ವಾ ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಲಕ್ಷ್ಮೀದೇವಮ್ಮ ಮತ್ತು ಸಂಗೀತಾ ಅವಿರೋಧ ಆಯ್ಕೆಯಾದರು ಎಂದು ಉಪವಿಭಾಗಾಧಿಕಾರಿಯೂ ಆದ ಚುನಾವಣಾಧಿಕಾರಿ ಡಾ.ಮೈತ್ರಿ ಫಲಿತಾಂಶ ಘೋಷಿಸಿದರು.
ನಗರಸಭೆಯಲ್ಲಿ ಒಟ್ಟು 35 ಸದಸ್ಯರಿದ್ದು, ಇಬ್ಬರು ಎಂಎಲ್ಸಿ, ಎಂಪಿ, ಶಾಸಕರು ಮತದಾನದ ಹಕ್ಕು ಹೊಂದಿದ್ದರು. ಅಧ್ಯಕ್ಷರಾಗಿ ಆಯ್ಕೆಯಾಗಲು 20 ಸಂಖ್ಯಾಬಲ ಬೇಕಾಗಿತ್ತು. ಅಽಕಾರಕ್ಕೇರಲು ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಬಂಡಾಯ ಬಿ.ಎಂ.ಮುಬಾರಕ್, ಜೆಡಿಎಸ್ ಲಾಬಿ ನಡೆಸಿತ್ತು.
ಚುನಾವಣೆಗೆ ಎರಡು ತಾಸು ಇರುವಾಗ ಕಾಂಗ್ರೆಸ್‌ನಿಂದ ಲಕ್ಷ್ಮೀದೇವಮ್ಮ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಯಿತು. ಬಿ.ಎಂ.ಮುಬಾರಕ್ 11 ಮಂದಿ ಸಂಖ್ಯಾಬಲ ಇಟ್ಟುಕೊಂಡು ಅಧಿಕಾರದ ಚುಕ್ಕಾಣಿ ಹಿಡಿಲು ಜೆಡಿಎಸ್ ಬಾಗಿಲು ತಟ್ಟಿದ್ದರು. ಇದಕ್ಕೆ ಪರೋಕ್ಷವಾಗಿ ಜೆಡಿಎಸ್‌ನ ಕೆಲ ಸದಸ್ಯರು ಹಾಗೂ ಎಂಎಲ್ಸಿ ಗೋವಿಂದರಾಜು ಬೆಂಬಲ ಸೂಚಿಸಿದ್ದರು.
ನಾಮಪತ್ರ ವಾಪಸ್: ಪ್ರವಾಸ ತೆರಳಿದ್ದ ಕಾಂಗ್ರೆಸ್ ಸದಸ್ಯರು ನೇರವಾಗಿ ನಗರಸಭೆಗೆ ಆಗಮಿಸಿದರು. ಈ ವೇಳೆ ಕಾಂಗ್ರೆಸ್ ಸದಸ್ಯರೊಟ್ಟಿಗೆ ಕೆಲವು ಪಕ್ಷೇತರ, ಜೆಡಿಎಸ್ ಸದಸ್ಯರು ಇದ್ದದ್ದು ಕುತೂಹಲ ಮೂಡಿಸಿತು. ಇದರ ಬೆನ್ನಲ್ಲೇ ಬಿ.ಎಂ.ಮುಬಾರಕ್ ತಂಡದ ಸದಸ್ಯರು ಆಗಮಿಸಿದರು. ಈ ತಂಡದಲ್ಲಿ ಇಬ್ಬರು ಸದಸ್ಯರು ಗೈರಾಗಿದ್ದರು. ಜೆಡಿಎಸ್ ಹಾಗೂ ಕಾಂಗ್ರೆಸ್ ಬಂಡಾಯ ಸದಸ್ಯರೊಟ್ಟಿಗೆ ಎಂಎಲ್ಸಿ ಇಂಚರ ಗೋವಿಂದರಾಜು ಹಾಜರಾಗಿದ್ದರು. ಸಂಖ್ಯಾಬಲ ಇಲ್ಲದ ಕಾರಣ ಬಿ.ಎಂ.ಮುಬಾರಕ್ ನಾಮಪತ್ರ ವಾಪಸ್ ಪಡೆದರು. ಇದರಿಂದಾಗಿ ಇಂಚರ ಗೋವಿಂದರಾಜು ಮತ್ತು ಜೆಡಿಎಸ್ ಸದಸ್ಯರು ಕಚೇರಿಯಿಂದ ಕಾಲ್ಕಿತ್ತರು. ಸಂಸದ ಎಂ.ಮಲ್ಲೇಶ್‌ಬಾಬು ಹಾಗೂ ಇಬ್ಬರು ಸದಸ್ಯರು ಗೈರಾಗಿದ್ದರು.
ಗುರಿ ಸಾಧಿಸಿದ ಕಾಂಗ್ರೆಸ್
ಕಾಂಗ್ರೆಸ್‌ನ 12 ಸದಸ್ಯರ ಪೈಕಿ 4 ಮಂದಿ ಬಂಡಾಯ ತಂಡದೊAದಿಗೆ ಹೋಗಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಮುಬಾರಕ್‌ನನ್ನು ಕಾಂಗ್ರೆಸ್‌ನಿಂದ ಪ್ರಚಾರ ಸಮಿತಿ ಸದಸ್ಯರನ್ನಾಗಿ ಮಾಡಲಾಗಿತ್ತು. ಆದರೆ, ಸಮರ್ಪಕ ಕೆಲಸ ಮಾಡಿದ ಹಿನ್ನೆಲೆಯಲ್ಲಿ ಅವರನ್ನು ಉಚ್ಚಾಟನೆ ಮಾಡಲಾಗಿತ್ತು. ಕೆಲ ಕಾಂಗ್ರೆಸ್ ಸದಸ್ಯರು ಮುಬಾರಕ್ ಒಟ್ಟಿಗೆ ಹೋಗಿದ್ದರಿಂದ ಪಕ್ಷದಿಂದ ಉಚ್ಚಾಟಿಸುವ ಬೆದರಿಕೆ ಒಡ್ಡಿ ವಾಪಸ್ ಕರೆಸಿಕೊಳ್ಳಲಾಗಿತ್ತು. ಇದರಿಂದ ಸಹಜವಾಗಿಯೇ ಕಾಂಗ್ರೆಸ್ ಬಂಡಾಯದಲ್ಲಿ ಸಂಖ್ಯಾಬಲ ಕುಸಿದು, ಕಾಂಗ್ರೆಸ್ ತನ್ನ ಗುರಿ ಸಾಧಿಸಿತು.

ವಿಪ್ ಹರಿದು ಹಾಕಿ ಆಕ್ರೋಶ
ಕಾಂಗ್ರೆಸ್ ಬಂಡಾಯ ಸದಸ್ಯರೆಲ್ಲ ನಗರಸಭೆಗೆ ಆಗಮಿಸಿದಾಗ ಕೆಪಿಸಿಸಿ ಉಪಾಧ್ಯಕ್ಷ ನಾರಾಯಣಸ್ವಾಮಿ, ನಗರಸಭೆ ಸದಸ್ಯ ಬಿ.ಎಂ.ಮುಬಾರಕ್ ಸೇರಿ ಸದಸ್ಯರಿಗೆ ವಿಪ್ ಪತ್ರ ನೀಡಿದಾಗ ಬಿ.ಎಂ.ಮುಬಾರಕ್ ವಿಪ್ ಹರಿದು ಬಿಸಾಡಿದರು. ನಾವು ಸಹ ಕಾಂಗ್ರೆಸ್‌ನವರೆ, ಯಾರೋ ಆರ್‌ಎಸ್‌ಎಸ್‌ನವರನ್ನು ಕಾಂಗ್ರೆಸ್‌ನವರು ಎಂದು ಹೇಳಿ ಅಧಿಕಾರ ಕೊಡುತ್ತೀದಿರಲ್ಲ, ನಾಚಿಕೇಯಾಗಬೇಕು ಎಂದು ಮುಬಾರಕ್ ಕಿಡಿಕಾರಿದರು. ಕಾಂಗ್ರೆಸ್ ಸದಸ್ಯರನ್ನು ಯಾವತ್ತಾದರು ಕರೆದು ಸಭೆ ನಡೆಸಿದ್ದೀರಾ, ಇನ್ನೇನು ಕೆಲವೇ ದಿನಗಳು ಬಾಕಿ ಇದ್ದಾಗ ಗೆಸ್ಟ್ ಹೌಸ್‌ಗಳಿಗೆ ಕರೆಯಿಸಿ ಸಭೆ ನಡೆಸಿದರೆ ಏನರ್ಥ, ಕೋಲಾರದಲ್ಲಿ ಕಾಂಗ್ರೆಸ್ ಕಚೇರಿಯಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಕೆಪಿಸಿಸಿ ಉಪಾಧ್ಯಕ್ಷ ನಾರಾಯಣಸ್ವಾಮಿ ಅವರು ಏನೂ ಉತ್ತರ ಕೊಡದೆ ಮುಜುಗರಕ್ಕೆ ಒಳಗಾಗಬೇಕಾಯಿತು.

ಬಿಗಿ ಬಂದೋಬಸ್ತ್
ನಗರಸಭೆ ಸುತ್ತಮುತ್ತ ಸೆಕ್ಷನ್ 144 ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಜತೆಗೆ ರಂಗಮಂದಿರ ಹಾಗೂ ಕಾಂಗ್ರೆಸ್ ಕಚೇರಿ ಕಡೆ ಬ್ಯಾರಿಕೇಡ್ ಹಾಕಿ ನಗರಸಭೆ ರಸ್ತೆಯಲ್ಲಿ ವಾಹನಗಳ ಸಂಚಾರ ಬಂದ್ ಮಾಡಲಾಗಿತ್ತು. ಬಿಗಿಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಸದಸ್ಯರ ಅಭಿಪ್ರಾಯ ಸಂಗ್ರಹಿಸಿಯೇ ತೀರ್ಮಾನ
ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಎಂಎಲ್ಸಿ ನಜೀರ್ ಅಹ್ಮದ್ ಮಾತನಾಡಿ, ಕಾಂಗ್ರೆಸ್‌ಗೆ ಬೇರೆ ಪಕ್ಷಗಳ ಬೆಂಬಲವು ಸಿಕ್ಕಿದೆ, ಇದರಿಂದಾಗಿ ಕಾಂಗ್ರೆಸ್ ಬೆಂಬಲಿತರು ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಯಿತು. ನಗರದ ಅಭಿವೃದ್ಧಿಗಾಗಿ ಸದಸ್ಯರೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.
ಎಲ್ಲ ಸದಸ್ಯರ ಅಭಿಪ್ರಾಯ ಸಂಗ್ರಹಿಸಿಯೇ ಅಧ್ಯಕ್ಷ, ಉಪಾಧ್ಯಕ್ಷರ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

ಅಭಿವೃದ್ಧಿಗೆ ಸಂಪೂರ್ಣ ಸಹಕಾರ
ಅಭಿವೃದ್ಧಿ ದೃಷ್ಟಿಯಿಂದ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಅವಿರೋಧವಾಗಿದೆ. ಕೋಲಾರ ನಗರವು ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದ್ದು, ಅದನ್ನು ಮುಂದೆ ತೆಗೆದುಕೊಂಡು ಹೋಗಬೇಕು ಎನ್ನುವುದು ಎಲ್ಲರ ಆಸೆ, ಇದಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಹೇಳಿದರು.

Share This Article

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…

Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…