More

    ಕೋಲಾರ ಡಿಸಿಸಿ ಬ್ಯಾಂಕ್​, ಪ್ಯಾಕ್ಸ್​ಗಳ ಗಣಕೀಕರಣ ರಾಜ್ಯಕ್ಕೆ ಮಾದರಿ; ಕೊಡಗು ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಗಣಪತಿ ಮೆಚ್ಚುಗೆ 

    ಕೋಲಾರ: ದಿವಾಳಿಯಾಗಿದ್ದ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್​ ಅತ್ಯಲ್ಪ ಅವಧಿಯಲ್ಲೇ ಆರ್ಥಿಕ ಸ್ಥಿರತೆ ಕಾಪಾಡಿಕೊಂಡು ಗಣಕೀಕರಣದ ಮೂಲಕ ಇಡೀ ರಾಜ್ಯಕ್ಕೆ ಮಾದರಿ ಸಹಕಾರಿ ಬ್ಯಾಂಕಾಗಿ ಅಭಿವೃದ್ಧಿ ಹೊಂದಿದೆ ಎಂದು ಕೊಡಗು ಜಿಲ್ಲಾ ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಕೆ.ಪಿ.ಗಣಪತಿ ಮೆಚ್ಚುಗೆ ವ್ಯಕ್ತಪಡಿಸಿದರು.

    ಕೊಡಗು ಡಿಸಿಸಿ ಬ್ಯಾಂಕಿನ ನಿರ್ದೇಶಕರು, ಅಧಿಕಾರಿಗಳೊಂದಿಗೆ ಕೋಲಾರ ಡಿಸಿಸಿ ಬ್ಯಾಂಕಿನ ಆರ್ಥಿಕ ಪ್ರಗತಿ, ಪ್ಯಾಕ್ಸ್​ಗಳ ಗಣಕೀಕರಣದಲ್ಲಿ ಮಾಡಿರುವ ಸಾಧನೆಯ ಕುರಿತು ಅಧ್ಯಯನ ನಡೆಸಲು ಆಗಮಿಸಿದ್ದ ಅವರು ಮಂಗಳವಾರ ಬ್ಯಾಂಕಿನ ಅಧ್ಯಕ್ಷರಾದ ಬ್ಯಾಲಹಳ್ಳಿ ಗೋವಿಂದಗೌಡ ಅವರಿಂದ ಮಾಹಿತಿ ಪಡೆದು ಮಾತನಾಡಿದರು.

    ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರಮೋದಿ ಅವರ ಪ್ಯಾಕ್ಸ್​ಗಳ ಗಣಕೀಕರಣ ಪ್ರಸ್ತಾವನೆಯ ಮುನ್ನವೇ ಕೋಲಾರ ಡಿಸಿಸಿ ಬ್ಯಾಂಕ್​ ಗಣಕೀಕರಣ ಮಾತ್ರವಲ್ಲ, ತನ್ನೆಲ್ಲ ಪ್ಯಾಕ್ಸ್​ಗಳ ಗಣಕೀಕೃತ ಆಡಿಟ್​, ಆನ್​ಲೈನ್​ ವಹಿವಾಟು ಆರಂಭಿಸುವ ಮೂಲಕ ಸಹಕಾರಿ ರಂಗದಲ್ಲೇ ಮೇಲ್ಪಂಕ್ತಿ ಹಾಕಿ ಕೊಟ್ಟಿದೆ ಎಂದರು.

    ಸಾಲ ವಸೂಲಾತಿಯಲ್ಲಿ ಮಾದರಿ: ರಾಜ್ಯದಲ್ಲೇ ಮಹಿಳಾ ಸಂಗಳಿಗೆ ಅತಿ ಹೆಚ್ಚು ಸಾಲ ಸೌಲಭ್ಯ ಒದಗಿಸಿರುವ ಕೋಲಾರ ಡಿಸಿಸಿ ಬ್ಯಾಂಕ್​ ಸಾಲ ನೀಡಿಕೆ ಮಾತ್ರವಲ್ಲ ವಸೂಲಾತಿಯಲ್ಲೂ ಉತ್ತಮ ಪ್ರಗತಿ ಸಾಧಿಸಿದೆ. ಸಹಕಾರ ಬ್ಯಾಂಕೊಂದು ಸಮಾಜದ ಕಟ್ಟಕಡೆಯ ಪ್ರತಿ ಕುಟುಂಬದ ವ್ಯಕ್ತಿಗೂ ಆರ್ಥಿಕವಾಗಿ ಶಕ್ತಿ ತುಂಬಬಹುದು ಎಂಬುದನ್ನು ಗೋವಿಂದಗೌಡರು ಸಾಕರಿಸಿದ್ದಾರೆ ಎಂದು ಗಣಪತಿ ಹೇಳಿದರು.

    ಕೋಲಾರ ಡಿಸಿಸಿ ಬ್ಯಾಂಕಿನ ಗಣಕೀಕರಣ, ಅಭಿವೃದ್ಧಿಯನ್ನು ಕೊಡಗು ಡಿಸಿಸಿ ಬ್ಯಾಂಕ್​ ಅಳವಡಿಸಿಕೊಳ್ಳುವ ಉದ್ದೇಶದಿಂದ ಈ ಅಧ್ಯಯನ ಪ್ರವಾಸಕೈಗೊಂಡಿದ್ದು, ನಮ್ಮ ಜಿಲ್ಲೆಯಲ್ಲೂ ಇದನ್ನು ಅನುಷ್ಠಾನಗೊಳಿಸುವುದಾಗಿ ತಿಳಿಸಿದರು. ಕೋಲಾರ ಡಿಸಿಸಿ ಬ್ಯಾಂಕ್​, ಪ್ಯಾಕ್ಸ್​ಗಳ ಗಣಕೀಕರಣ ಮಾಡಿಕೊಟ್ಟಿರುವ ವಿ-ಸಾಫ್ಟ್​ ಕಂಪನಿಯ ಸಹಕಾರವನ್ನು ಕೊಡಗು ಡಿಸಿಸಿ ಬ್ಯಾಂಕ್​ ಪಡೆಯಲಿದ್ದು, ಇದೇ ಸಾಫ್ಟ್​ವೇರ್​ ಅಲ್ಲಿಯೂ ಬಳಸಲು ಕ್ರಮವಹಿಸುವುದಾಗಿ ತಿಳಿಸಿದರು.

    ಕೋಲಾರ ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ತಾವು ಅಧಿಕಾರ ವಹಿಸಿಕೊಂಡಾಗ ಮುಚ್ಚುವ ಬ್ಯಾಂಕಿಗೆ ಅಧ್ಯಕ್ಷರು ಎಂದು ವ್ಯಂಗ್ಯ ಮಾಡಿದ್ದರು ಎಂದು ತಿಳಿಸಿ, ಎನ್​ಪಿಎ ಶೇ.44 ರಿಂದ ಇಂದು ಶೇ.1.5ಕ್ಕೆ ಇಳಿದಿದೆ ಇದು ಸಾಧನೆ ಎಂದು ಮನವರಿಕೆ ಮಾಡಿಕೊಟ್ಟರು.

    ಪ್ಯಾಕ್ಸ್​ಗಳಿಗೂ ಭೇಟಿ: ಇದೇ ಸಂದರ್ಭದಲ್ಲಿ ಕೊಡಗು ಜಿಲ್ಲಾ ಡಿಸಿಸಿ ಬ್ಯಾಂಕ್​ ಅಧ್ಯಕ್ಷರು ಮತ್ತವರ ತಂಡ ತಾಲೂಕಿನ ವಕ್ಕಲೇರಿ, ಕಡಗಟ್ಟೂರು, ಶಿಡ್ಲಟ್ಟ ತಾಲೂಕಿನ ಮಳ್ಳೂರು ಸೊಸೈಟಿಗಳಿಗೆ ಭೇಟಿ ನೀಡಿ, ಅಲ್ಲಿನ ಗಣಕೀಕೃತ ವಹಿವಾಟು, ಆನ್​ಲೈನ್​ ವ್ಯವಸ್ಥೆ ಕುರಿತು ಮಾಹಿತಿ ಪಡೆದುಕೊಂಡಿತು.

    ಕೊಡಗು ಜಿಲ್ಲಾ ಡಿಸಿಸಿ ಬ್ಯಾಂಕ್​ ಉಪಾಧ್ಯಕ್ಷ ಕೆ.ಎಸ್​.ಪೂವಯ್ಯ, ನಿರ್ದೇಶಕರಾದ ಬಿ.ಡಿ.ಮಂಜುನಾಥ್​, ಎಚ್​.ಎಂ.ರಮೇಶ್​, ತಾಂತ್ರಿಕ ಸಹಾಯಕ ನವೀನ್​ ಚಂದ್ರಶೆಟ್ಟಿ ಮತ್ತಿತರರು ಅಧ್ಯಯನ ತಂಡದಲ್ಲಿದ್ದರು. ಕೊಡಗು ತಂಡಕ್ಕೆ ಕೋಲಾರ ಡಿಸಿಸಿ ಬ್ಯಾಂಕಿನಲ್ಲಿ ಬ್ಯಾಂಕಿನ ಬ್ಯಾಲಹಳ್ಳಿ ಗೋವಿಂದಗೌಡ, ವ್ಯವಸ್ಥಾಪಕ ನಿರ್ದೇಶಕ ಕೃಷ್ಣಮೂರ್ತಿ, ಎಜಿಎಂ ಶಿವಕುಮಾರ್​, ಅಧಿಕಾರಿಗಳಾದ ಪದ್ಮಮ್ಮ, ಹ್ಯಾರಿಸ್​ ಮತ್ತಿತರರು ಅಗತ್ಯ ಮಾಹಿತಿ ಒದಗಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts