ಕೋಲಾರ: ಮಹನೀಯರ ಜಯಂತಿ ಆಚರಣೆ ಸಂಬಂಧ ವಿವಿಧ ಸಮುದಾಯಗಳಿಂದ ಅಭಿಪ್ರಾಯ ಸಂಗ್ರಹಿಸಲು ಸರ್ಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅಧ್ಯಕ್ಷತೆಯಲ್ಲಿ ಮಂಗಳವಾರ ಡಿಸಿ ಕಚೇರಿಯಲ್ಲಿ ನಡೆದ ಚಿಂತನ-ಮಂಥನ ಸಭೆ ಸಮ ಸಮಾಜಕ್ಕೆ ದನಿಯಾಗಿತ್ತು.
ಜಯಂತಿಗಳನ್ನು ಸರ್ಕಾರದಿಂದ ಆಚರಿಸಬೇಕೇ, ಆಚರಣೆಯ ಸ್ವರೂಪ ಹೇಗಿರಬೇಕೆಂಬ ವಿಚಾರವಾಗಿ ಸಭೆಯಲ್ಲಿ ವಿವಿಧ ಸಮುದಾಯದ ಮುಖಂಡರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಮನಬಿಚ್ಚಿ ಮಾತನಾಡಿ, ಜಯಂತಿ ಆಚರಣೆ ನಿಲ್ಲಿಸಬಾರದು, ರಜೆ ಘೋಷಿಸದೆ ಸರಳವಾಗಿ ಆಚರಿಸಬೇಕು, ಎಲ್ಲ ಜಯಂತಿಗಳ ಆಚರಣೆಗೆ ಎಲ್ಲರನ್ನೊಳಗೊಂಡ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಮೂಡಿಬಂದ ಅಭಿಪ್ರಾಯಗಳನ್ನು ವಾರದೊಳಗೆ ಸರ್ಕಾರಕ್ಕೆ ವರದಿ ಮಾಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
ಜೇನುಗೂಡಿಗೆ ಕಲ್ಲು: ಸರ್ಕಾರ ಮಹನೀಯರ ಜಯಂತಿಗಳನ್ನು ರದ್ದುಪಡಿಸಿದರೆ ಜೇನುಗೂಡಿಗೆ ಕೈ ಹಾಕಿದಂತಾಗುತ್ತದೆ, ಅನುದಾನ ಹೆಚ್ಚು ನೀಡಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲು ಚಿಂತನೆ ಮಾಡಬೇಕೆಂದು ವಿಶ್ವ ಕರ್ಮ ಸಮಾಜದ ಮುಖಂಡ, ಕಲಾವಿದ ವಿಷ್ಣು ಒತ್ತಾಯಿಸಿದರು.
ರಜೆ ಬೇಡ: ಯಾದವ ಸಮಾಜದ ಮುಖಂಡ ಗೋಕುಲ್ ನಾರಾಯಣಸ್ವಾಮಿ, ಜಯಂತಿ ಆಚರಣೆಯಿಂದ ಸಣ್ಣ-ಸಣ್ಣ ವರ್ಗಗಳನ್ನು ಒಗ್ಗೂಡಿಸಲು ವೇದಿಕೆಯಾಗುತ್ತದೆ. ಸರ್ಕಾರವೇ ಜಯಂತಿ ಆಚರಿಸಲಿ, ಸರ್ಕಾರಿ ರಜೆ ಬೇಡ ಎಂದರು.
ಮುಖಂಡ ಡಾ.ಚಂದ್ರಶೇಖರ್, ಜಯಂತಿ ರದ್ದುಪಡಿಸದೆ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಬೇಕು. ಎಲ್ಲ ಜಯಂತಿಗಳಲ್ಲಿ ಎಲ್ಲ ಸಮುದಾಯದವರು ಭಾಗವಹಿಸುವಂತಾಗಬೇಕು ಎಂದರು.
ದಾಸೋಹ: ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಬಿ.ಎಂ.ಚನ್ನಪ್ಪ ಮಾತನಾಡಿ, ಜಯಂತಿಯ ದಿನ ಪಲ್ಲಕ್ಕಿಗಳ ಮೆರವಣಿಗೆ ಬೇಡ, ಮಹನೀಯರ ಹೆಸರಿನಲ್ಲಿ ಅನ್ನ ದಾಸೋಹ ಮಾಡುವುದು ಸೂಕ್ತ ಎಂದರು.
ಮೆಗಾ ಶೋ ಬೇಕಿಲ್ಲ: ಜನಪದ ಕಲಾವಿದ ರಾಜಪ್ಪ ಮಾತನಾಡಿ, ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯದ ಅಸ್ಮಿತೆಯನ್ನು ತೋರಿಸಲು ಜಯಂತಿ ಆಚರಣೆ ಮುಖ್ಯ, ಆದರೆ ಜಯಂತಿ ಅಂಗವಾಗಿ ಟ್ಯಾಬ್ಲೋಗಳ ಮೆಗಾ ಶೋ ನಡೆಸುವ ಅಗತ್ಯವಿಲ್ಲ. ಡಿಸಿ ಅಧ್ಯಕ್ಷತೆಯಲ್ಲೇ ಜಯಂತಿಗಳ ಆಚರಣೆಗೆ ಸಮಿತಿ ರಚನೆಯಾಗಬೇಕು ಎಂದರು.
ಅಭಿವೃದ್ಧಿಗೆ ಆದ್ಯತೆ ಸಿಗಲಿ: ಮಹನೀಯರ ಜಯಂತಿಯನ್ನು ಕಾಟಾಚಾರಕ್ಕೆ ಆಚರಿಸದೆ, ಸರ್ಕಾರದ ಅನುದಾನವನ್ನು ಆಯಾ ಸಮುದಾಯದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಬೇಕು. ಕೆರೆ-ಕಾಲುವೆ, ಕಲ್ಯಾಣಿಗಳನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು, ದಲಿತ ಕಾಲನಿಗಳಲ್ಲಿ ಆರೋಗ್ಯ ಶಿಬಿರ ಹಮ್ಮಿಕೊಂಡು ಸಮಾಜಮುಖಿ ಸೇವೆಗೆ ಆದ್ಯತೆ ನೀಡಬೇಕು ಎಂದು ಹಿರಿಯ ಪತ್ರಕರ್ತ ಪಾ.ಶ್ರೀ.ಅನಂತರಾಮ್ ಹೇಳಿದರು.
ಸರ್ಕಾರದಿಂದ ಗಾಂಧಿ, ಅಂಬೇಡ್ಕರ್ ಜಯಂತಿ ಮಾತ್ರ ನಡೆಯಲಿ ಎಂದರೆ, ಅಲ್ಲಮ ಪ್ರಭು, ಪುರಂದರದಾಸರ ಜಯಂತಿಯನ್ನೂ ಆಚರಿಸಬೇಕೆಂದು ಹರಿಕಥಾ ವಿದ್ವಾನ್ ಎನ್.ಆರ್. ಜ್ಞಾನಮೂರ್ತಿ ಮನವಿ ಮಾಡಿದರು.
ಗ್ರಾಪಂ ಸದಸ್ಯೆ ಮಮತಾರೆಡ್ಡಿ, ಕಸಾಪ ಕೆಜಿಎಫ್ ತಾಲೂಕು ಅಧ್ಯಕ್ಷ ದೇಶಪಾಂಡೆ, ಮುಖಂಡರಾದ ತಂಬಿಹಳ್ಳಿ ಮುನಿಯಪ್ಪ, ಮಾಲೂರು ಲೋಕೇಶ್, ಹಾರೋಹಳ್ಳಿ ನಾರಾಯಣಸ್ವಾಮಿ, ಮಹದೇವಯ್ಯ, ಶ್ರೀನಿವಾಸರಾವ್, ಮುನಿಕೃಷ್ಣ, ಗೋಪಾಲಕೃಷ್ಣ, ಚೇತನ್ ಬಾಬು, ಾಲ್ಗುಣ, ದಲಿತ ನಾರಾಯಣಸ್ವಾಮಿ ಅಭಿಪ್ರಾಯ ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಉಪಸ್ಥಿತರಿದ್ದರು.
ಜಯಂತಿಗಳು ರಂಗಮಂದಿರಕ್ಕೆ ಸಿಮೀತವಾಗದೆ ವಿಕೇಂದ್ರೀಕರಣವಾಗಲಿ, ಶಾಲಾ ಕಾಲೇಜುಗಳಲ್ಲಿ ಈ ಕುರಿತು ಅರಿವು ಮೂಡಿಸಬೇಕು, ಪ್ರಬಂಧ, ಭಾಷಣ, ಚರ್ಚಾ ಸ್ಪರ್ಧೆ ಆಯೋಜಿಸಿ ಬಹುಮಾನ ನೀಡಬೇಕು. ಜಯಂತಿಗಳ ಆಚರಣೆಗೆ ಶಿಷ್ಟಾಚಾರ ಅಗತ್ಯವಿಲ್ಲ.
ಜೆ.ಜಿ. ನಾಗರಾಜ್, ಕಸಾಪ ಮಾಜಿ ಜಿಲ್ಲಾಧ್ಯಕ್ಷ