More

  ಕೋಲಾರ ಜಿಲ್ಲೆಯಲ್ಲಿ ಚುರುಕು ಪಡೆಯದ ಜಾನುವಾರುಗಳಿಗೆ ಕಿವಿ ಓಲೆ ಅಳವಡಿಕೆ

  ಕೋಲಾರ: ಜಾನುವಾರುಗಳಿಗೆ ವಿಶೇಷ ಸಂಖ್ಯೆಯುಳ್ಳ ಕಿವಿಓಲೆ ಅಳವಡಿಸಿ ಇನಾಫ್ (ಇನ್‌ರ್ಮೇಷನ್ ನೆಟ್‌ವರ್ಕ್ ಫಾರ್ ಅನಿಮಲ್ ಪ್ರೊಡೆಕ್ಟಿವಿಟಿ ಆ್ಯಂಡ್ ಹೆಲ್ತ್) ತಂತ್ರಾಂಶದಲ್ಲಿ ಅಳವಡಿಸುವ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿದೆ.

  ಜಾನುವಾರುಗಳ ದತ್ತಾಂಶ ಸಂಗ್ರಹ ದೃಷ್ಟಿಯಿಂದ ಆಧಾರ್ ಮಾದರಿಯ 12 ಸಂಖ್ಯೆಗಳ ವಿಶಿಷ್ಟ ಗುರುತಿನ ಕಿವಿ ಓಲೆಗಳನ್ನು ಕಡ್ಡಾಯವಾಗಿ ಅಳವಡಿಸಲು ಕೇಂದ್ರ ಸರ್ಕಾರ ಸೂಚಿಸಿದ್ದು, ಜ.15ರೊಳಗೆ ಪೂರ್ಣಗೊಳಿಸಬೇಕಾಗಿದೆ.

  ಜಿಲ್ಲೆಯಲ್ಲಿ ಅಂದಾಜು 2.40 ಲಕ್ಷ ಜಾನುವಾರುಗಳಿದ್ದು, ಜ.10ರವರೆಗೆ ಸಾಧಿಸಿರುವ ಪ್ರಗತಿಯನ್ವಯ 1,05,042 ಲಕ್ಷ ಜಾನುವಾರುಗಳಿಗೆ ಕಿವಿ ಓಲೆ (ಶೇ.44) ಅಳವಡಿಸಲಾಗಿದೆ.

  ಕೇಂದ್ರ ಪುರಸ್ಕೃತ ರಾಷ್ಟ್ರೀಯ ಗೋಕುಲ್ ಮಿಷನ್ ಯೋಜನೆಯಲ್ಲಿ ವಿಶೇಷ ಗುರುತಿನ ಸಂಖ್ಯೆಯುಳ್ಳ ಕಿವಿ ಓಲೆ ಹಾಕಿ ತಂತ್ರಾಂಶದಲ್ಲಿ ಅಳವಡಿಸುವ ಕಾರ್ಯಕ್ರಮ 2005ರಿಂದ ಆರಂಭಗೊಂಡಿತ್ತು. ಕಳೆದ ವರ್ಷದವರೆಗೆ ಹಾಲು ಹಿಂಡುವ ದನ ಮತ್ತು ಎಮ್ಮೆಗಳಿಗೆ ಮಾತ್ರ ಸೀಮಿತಗೊಳಿಸಿ ವಾರ್ಷಿಕ ಭೌತಿಕ ಗುರಿ ನಿಗದಿಪಡಿಸಲಾಗಿ 1.19 ಲಕ್ಷ ಗುರಿಯಲ್ಲಿ ಶೇ.83 ಸಾಧನೆ ಮಾಡಲಾಗಿತ್ತು.

  ಕಿವಿ ಓಲೆ ಕಡ್ಡಾಯ: 16ನೇ ಹಂತದ ಕಾಲುಬಾಯಿ ಲಸಿಕಾ ಕಾರ್ಯಕ್ರಮವು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ನಡೆದಿದೆ. ಮುಂದಿನ ಹಂತದಲ್ಲಿ ಕೇಂದ್ರ ಸರ್ಕಾರವೇ ಕಾಲುಬಾಯಿ ಜ್ವರದ ವಿರುದ್ಧ ಲಸಿಕೆ ಪೂರೈಸಲಿರುವುದರಿಂದ ಜಾನುವಾರುಗಳ ದತ್ತಾಂಶ ಸಂಗ್ರಹಣೆ ಕಡ್ಡಾಯ ಮಾಡಿದೆ. ಕಿವಿ ಓಲೆ ಇಲ್ಲದಿದ್ದರೆ ಕಾಲುಬಾಯಿ ಜ್ವರದ ಲಸಿಕೆ ಹಾಕದಿರುವ ಬಗ್ಗೆ ಸ್ಪಷ್ಟ ಸೂಚನೆ ನೀಡಿರುವುದರಿಂದ ಪಶುಪಾಲನಾ ಇಲಾಖೆ ಮುಂದೆ ಸವಾಲಿನ ಗುರಿ ಇದೆ. ಈ ಬಗ್ಗೆ ಹೈನುಗಾರರಿಗೆ ಅರಿವು ಮೂಡಿಸದಿದ್ದಲ್ಲಿ ಗುರಿ ಸಾಧನೆ ಕಷ್ಟಕರ.
  ಏನಿದು ಕಿವಿ ಓಲೆ: ಜಾನುವಾರುಗಳಿಗೆ ಎಡ ಕಿವಿಗೆ ಓಲೆ ಅಳವಡಿಸಿ ತಂತ್ರಾಂಶದಲ್ಲಿ ಮಾಲೀಕನ ಹೆಸರು, ಜಾನುವಾರುವಿನ ವಯಸ್ಸು, ಲಿಂಗ, ತಳಿ, ಹಾಕಿರುವ ಲಸಿಕೆ ವಿವರ, ವಿಮೆ, ಹಾಲಿನ ಪ್ರಮಾಣ, ಎಷ್ಟನೇ ಕರು ಹೀಗೆ ಸಂಪೂರ್ಣ ಮಾಹಿತಿ ದಾಖಲಿಸಬೇಕು. ಜಾನುವಾರು ಮೃತಪಟ್ಟಾಗ ಆ ಮಾಹಿತಿಯನ್ನೂ ದಾಖಲಿಸಬೇಕು. ಯಾವುದೇ ಭಾಗಕ್ಕೆ ಮಾರಾಟವಾದರೂ ಖರೀದಿದಾರ ತನ್ನ ಹೆಸರಿಗೆ ಮರು ನೋಂದಣಿ ಮಾಡಿಸಬೇಕು.

  ಕೆಲವರ ಹಿಂದೇಟು: ಜಾನುವಾರುಗಳಿಗೆ ಕಿವಿ ಓಲೆ ಅಳವಡಿಸಲು ಪಶುಪಾಲನಾ ಇಲಾಖೆ ಸಿಬ್ಬಂದಿ ಮುಂದಾಗುವ ಸಂದರ್ಭದಲ್ಲಿ ಕೆಲ ಮಾಲೀಕರು ಹಿಂದೇಟು ಹಾಕುತ್ತಿರುವ, ಇಲ್ಲದ ತಾಪತ್ರಯ ಏಕೆ ಎಂದು ಕಿವಿ ಓಲೆಯನ್ನೇ ಕಿತ್ತುಹಾಕುತ್ತಿರುವುದು ಇಲಾಖೆ ಗಮನಕ್ಕೆ ಬಂದಿದೆ. ಪ್ರಸ್ತುತ ಮೊದಲ ಹಂತದಲ್ಲಿ ಓಲೆ ಅಳವಡಿಸುವ ಪ್ರಕ್ರಿಯೆ ನಡೆಸಲಾಗುತ್ತಿದ್ದು, ಸಿಬ್ಬಂದಿ ಕೊರತೆ ಇರುವುದರಿಂದ ತಂತ್ರಾಂಶದಲ್ಲಿ ಸಮಗ್ರ ಮಾಹಿತಿ ಅಳವಡಿಸುವ ಪ್ರಕ್ರಿಯೆಯನ್ನು ನಿಧಾನವಾಗಿ ಪೂರ್ಣಗೊಳಿಸಲಾಗುವುದು ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
  ಬಹುತೇಕ ಹುದ್ದೆ ಖಾಲಿ: ಜಿಲ್ಲೆಯಲ್ಲಿ 26 ಪಶು ಆಸ್ಪತ್ರೆ, 59 ಪಶು ಚಿಕಿತ್ಸಾಲಯ, 22 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರ, 5 ಸಂಚಾರಿ ಪಶು ಚಿಕಿತ್ಸಾಲಯ, ಜಿಲ್ಲಾ ಕೇಂದ್ರದಲ್ಲಿ ಪಾಲಿ ಕ್ಲಿನಿಕ್ ಸೇರಿ ಒಟ್ಟು 113 ಸಂಸ್ಥೆಗಳಿವೆ. ಮಂಜೂರಾದ 490 ಹುದ್ದೆಗಳ ಪೈಕಿ 246 ಹುದ್ದೆಗಳು ಭರ್ತಿಯಾಗಿದ್ದರೆ, 244 ಹುದ್ದೆಗಳು ಖಾಲಿ ಇದ್ದು, ಪ್ರಕ್ರಿಯೆ ನಿಧಾನಕ್ಕೆ ಸಿಬ್ಬಂದಿ ಕೊರತೆಯೂ ಕಾರಣಗಳಲ್ಲಿ ಒಂದು.

  ಜಾನುವಾರುಗಳಿಗೆ ಕಿವಿ ಓಲೆ ಅಳವಡಿಸುವ ಪ್ರಕ್ರಿಯೆಗೆ ಪಶು ವೈದ್ಯಾಧಿಕಾರಿಗಳು, ಎಲ್ಲ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೋಚಿಮುಲ್ ಸಹಕಾರ ಪಡೆಯಲಾಗುತ್ತಿದೆ. ಸರ್ಕಾರದ ಸೂಚನೆಯಂತೆ ಮುಂದಿನ ಹಂತದಲ್ಲಿ ಜಿಲ್ಲೆಯಲ್ಲಿ ಸುಮಾರು 6 ಲಕ್ಷ ಕುರಿ, ಮೇಕೆ, 5200 ಹಂದಿಗಳಿಗೂ ಇಯರ್‌ಟ್ಯಾಗ್ ಅಳವಡಿಸಬೇಕಿದೆ.
  ಡಾ.ಜಗದೀಶ್‌ಕುಮಾರ್, ಉಪನಿರ್ದೇಶಕ (ಪ್ರಭಾರ), ಪಶುಪಾಲನಾ ಇಲಾಖೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts