More

  ಬೆಂಬಲ ಬೆಲೆ ಯೋಜನೆಯಲ್ಲಿ ರಾಗಿ ಖರೀದಿ ನೋಂದಣಿ ಅವಧಿ ಫೆ.29ರವರೆಗೆ ವಿಸ್ತರಣೆ

  ಕೋಲಾರ: 2019-20ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಲ್ಲಿ ರಾಗಿ ಖರೀದಿ ನೋಂದಣಿ ಅವಧಿಯನ್ನು ಫೆಬ್ರವರಿ 29ರವರೆಗೆ ವಿಸ್ತರಿಸಿರುವುದರಿಂದ ರೈತರು ನಿಟ್ಟುಸಿರು ಬಿಡುತ್ತಿದ್ದು, ಬೆಳೆ ಸರ್ವೇಯಲ್ಲಿನ ವ್ಯತ್ಯಾಸದಿಂದ ನೋಂದಣಿಗೆ ಪರದಾಡುವಂತಾಗಿದೆ.

  ರಾಜ್ಯ ಸರ್ಕಾರವು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮೂಲಕ ಸಣ್ಣ ಮತ್ತು ಮಧ್ಯಮ ರೈತರಿಂದ ಎಫ್‌ಎಕ್ಯೂ (ಫೇರ್ ಆವರೇಜ್ ಕ್ವಾಲಿಟಿ) ಗುಣಮಟ್ಟದ ಕ್ವಿಂಟಾಲ್ ರಾಗಿಗೆ 3150 ರೂ. ಬೆಂಬಲ ಬೆಲೆಗೆ ರೈತರಿಂದ ಗರಿಷ್ಠ 75 ಕ್ವಿಂಟಾಲ್‌ನಂತೆ ಖರೀದಿಸಲು ನೋಂದಣಿಗೆ ಜ.1ರಿಂದ 10 ಕೊನೇ ದಿನವಾಗಿ ನಿಗದಿಪಡಿಸಿತ್ತು.

  ನೋಂದಣಿಗೆ ಕಡಿಮೆ ಅವಧಿ ಬಗ್ಗೆ ರೈತರಿಂದ ವ್ಯಕ್ತವಾದ ಅಭಿಪ್ರಾಯ ಆಧರಿಸಿ ಕಾಲಾವಧಿ ವಿಸ್ತರಿಸಿದೆ. ರಾಗಿ ತುಂಬಿಸಿ ತರುವ ಗೋಣಿ ಚೀಲದಲ್ಲೇ ಖರೀದಿಸುವ ಸಲುವಾಗಿ ಪ್ರತಿ ಚೀಲಕ್ಕೆ 12ರೂ. ನಂತೆ ನೇರ ನಗದು ವರ್ಗಾವಣೆ ಮೂಲಕ ರೈತರಿಗೆ ಪಾವತಿಸಲು ನಿರ್ಧರಿಸಿದೆ.

  ನೋಂದಣಿ ಭರಾಟೆ: ಜ.3ರಿಂದ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಇದುವರೆಗೆ ಕೋಲಾರ-500 ರೈತರು, ಮುಳಬಾಗಿಲಿನಲ್ಲಿ 12, ಮಾಲೂರಿನಲ್ಲಿ 23, ಬಂಗಾರಪೇಟೆಯಲ್ಲಿ 85, ಶ್ರೀನಿವಾಸಪುರದಲ್ಲಿ 52 ಹಾಗೂ ಕೆಜಿಎಫ್‌ನಲ್ಲಿ ಒಬ್ಬ ರೈತ ಸೇರಿ 673 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ.

  ಫ್ರೂಟ್ಸ್ ಐಡಿ: ಈ ಬಾರಿ ಆಹಾರ, ಕೃಷಿ ಮತ್ತು ಕಂದಾಯ ಇಲಾಖೆ ಅಂಕಿ-ಅಂಶ ಆಧರಿಸಿ ಅಭಿವೃದ್ಧಿಪಡಿಸಿರುವ ಫ್ರೂಟ್ಸ್ (ಫಾರ್ಮರ್ ರಿಜಿಸ್ಟ್ರೇಷನ್ ಆ್ಯಂಡ್ ಯೂನಿಫೈಡ್ ಬೆನಿಫೀಷಿಯರ್ಸ್‌ ಇನ್‌ರ್‌ಮೇಷನ್) ತಂತ್ರಾಂಶ ಬಳಸಲಾಗುತ್ತಿದೆ. ರೈತರು ರೈತ ಸಂಪರ್ಕ ಕೇಂದ್ರದಿಂದ ಫ್ರೂಟ್ಸ್ ಐಡಿ ಪಡೆದು ಖರೀದಿ ಕೇಂದ್ರಕ್ಕೆ ಬಂದರೆ ಈ ಸಂಖ್ಯೆಯನ್ನು ನಿಗಮದ ತಂತ್ರಾಂಶದಲ್ಲಿ ನಮೂದಿಸಿದ ತಕ್ಷಣ ಸಂಪೂರ್ಣ ವಿವರ ಲಭ್ಯವಾಗುವ ಜತೆಗೆ ರೈತ ಎಷ್ಟು ಕ್ವಿಂಟಾಲ್ ರಾಗಿ ತರಬಹುದೆಂಬುದು ದಾಖಲಾಗುತ್ತದೆ.

  ನೋಂದಣಿಗೆ ಪರದಾಟ: ಮುಂಗಾರು ಹಂಗಾಮಿನಲ್ಲಿ ಬೆಳೆಯ ಜಿಪಿಎಸ್ ಆಧಾರಿತ ಸರ್ವೇ ನಡೆಸಲಾಗಿದ್ದು, ಈ ಮಾಹಿತಿ ಫ್ರೂಟ್ಸ್ ತಂತ್ರಾಂಶಕ್ಕೆ ಜೋಡಣೆಯಾಗಿದೆ. ಸರ್ವೇ ಲೋಪದಿಂದ ಕೆಲ ರೈತರ ಪಹಣಿಯಲ್ಲಿ ರಾಗಿ ಬದಲು ನೀಲಗಿರಿ, ಟೊಮ್ಯಾಟೊ ಇನ್ನಿತರ ಬೆಳೆಗಳು ತಪ್ಪಾಗಿ ನಮೂದಾಗಿದೆ. ಕೆಲವು ರೈತರದ್ದು ಬೆಳೆ ಕಾಲಂ ಖಾಲಿ ಬಿಡಲಾಗಿದೆ. ಮಾವಿನ ತೋಟದ ಮಧ್ಯೆ ರಾಗಿ ಬೆಳೆದಿದ್ದರೂ ಸರ್ವೇಯಲ್ಲಿ ಮಾವು ಮಾತ್ರ ನಮೂದಾಗಿ ರಾಗಿ ಬೆಳೆ ದಾಖಲಾಗದಿರುವುದರಿಂದ ಈ ರೈತರು ಬೆಂಬಲ ಬೆಲೆಗೆ ರಾಗಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ.

  ಇದೀಗ ಫ್ರೋಟ್ಸ್‌ನಲ್ಲಿ ಲಭ್ಯವಿರದ ಮಾಹಿತಿ ಹಾಗೂ ತಪ್ಪಾಗಿರುವ ಮಾಹಿತಿ ಪರಿಷ್ಕರಣೆಗಾಗಿ ಕೃಷಿ ಇಲಾಖೆ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಎಡತಾಕುವಂತಾಗಿದೆ. ಕೆಲ ರೈತರು ಅವಕಾಶ ವಂಚಿತರಾಗುವುದು ಗ್ಯಾರಂಟಿ. ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

  ಖರೀದಿ ಕೇಂದ್ರಗಳು: ಕೋಲಾರ-ಗದ್ದೆಕಣ್ಣೂರು ಗ್ರಾಮದ ಸಗಟು ಮಳಿಗೆ, ಮಾಲೂರು-ಕೈಗಾರಿಕಾ ಪ್ರದೇಶದಲ್ಲಿನ ಸಗಟು ಮಳಿಗೆ. ಬಂಗಾರಪೇಟೆ-ಕೆ.ಸಿ.ರೆಡ್ಡಿ ಕಾಲೇಜು ಬಳಿಯ ಸಗಟು ಮಳಿಗೆ, ಮುಳಬಾಗಿಲು-ಎಪಿಎಂಸಿ ಯಾರ್ಡ್, ಶ್ರೀನಿವಾಸಪುರ-ಹೊಸ ಬಸ್ ನಿಲ್ದಾಣ ಪಕ್ಕದಲ್ಲಿನ ಸಗಟು ಮಳಿಗೆ ಹಾಗೂ ಕೆಜಿಎಫ್-ಕೆಎಸ್‌ಆರ್‌ಟಿಸಿ ಹೊಸ ಬಸ್ ನಿಲ್ದಾಣ ಬಳಿಯ ಸಗಟು ಮಳಿಗೆ.

  ರಾಗಿ ಬೆಂಬಲ ಬೆಲೆ ಖರೀದಿ ಸಂಬಂಧ ನೊಂದಣಿ ಪ್ರಕ್ರಿಯೆಗೆ ಫೆ.29ರವರೆಗೆ ಕಾಲಾವಕಾಶ ಇರುವುದರಿಂದ ರೈತರು ಆತಂಕಪಡಬೇಕಿಲ್ಲ. ಈ ವರ್ಷ ರಾಗಿ ಉತ್ತಮ ಫಸಲು ಬಂದಿರುವುದರಿಂದ 50,000 ಕ್ವಿಂಟಾಲ್ ಅಧಿಕ ಖರೀದಿಯಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
  ಶಿವಣ್ಣ, ಕೆಎಫ್‌ಸಿಎಸ್‌ಸಿ ಜಿಲ್ಲಾ ವ್ಯವಸ್ಥಾಪಕ

  ಮೂರು ಎಕರೆಯಲ್ಲಿ ರಾಗಿ ಬೆಳೆದಿದ್ದು, 30 ಕ್ವಿಂಟಾಲ್ ರಾಗಿ ಮಾರಲು ಉದ್ದೇಶಿಸಿದ್ದೆ. ಬೆಳೆ ಸರ್ವೇ ಲೋಪದಿಂದ ಪಹಣಿಯಲ್ಲಿ ಟೊಮ್ಯಾಟೊ, ನೀಲಗಿರಿ ಎಂದು ದಾಖಲಾಗಿದ್ದರಿಂದ ಅವಕಾಶ ವಂಚಿತನಾಗುವಂತಾಗಿದ್ದು, ಅಧಿಕಾರಿಗಳು ಗಮನಹರಿಸಿ ಸಮಸ್ಯೆ ಬಗೆಹರಿಸಿಕೊಡಬೇಕು.
  ಬುಸನಹಳ್ಳಿ ಮುನೇಗೌಡ, ಕೋಲಾರ

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts