More

    ಫೆ.11 ಮತ್ತು 12ರಂದು ನಡೆಯುವ ಬೃಹತ್ ಉದ್ಯೋಗ ಮೇಳ ಯಶಸ್ವಿಗೆ ಸಹಕಾರ ನೀಡಿ

    ಕೋಲಾರ: ನಗರದ ಹೊರವಲಯದ ಸಿಬಿಐಟಿ ಕಾಲೇಜಿನಲ್ಲಿ ಫೆ.11 ಮತ್ತು 12ರಂದು ನಡೆಸಲು ಉದ್ದೇಶಿಸಿರುವ ಬೃಹತ್ ಉದ್ಯೋಗ ಮೇಳಕ್ಕೆ ಕೈಗಾರಿಕೋದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮನವಿ ಮಾಡಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ವಿವಿಧ ಕೈಗಾರಿಕೆಗಳ ಮುಖ್ಯಸ್ಥರು, ಸಿಇಒ ಹಾಗೂ ಎಚ್‌ಆರ್‌ಗಳೊಂದಿಗೆ ಸಭೆ ನಡೆಸಿ, ಉದ್ಯೋಗ ಮೇಳದಲ್ಲಿ ಭಾಗವಹಿಸುವ ಕೈಗಾರಿಕೆಗಳಿಗೆ ಜಿಲ್ಲಾಡಳಿತದಿಂದ ಎಲ್ಲ ಮೂಲಸೌಕರ್ಯ ಕಲ್ಪಿಸುವುದಾಗಿ ಹೇಳಿದರು.

    ಈ ಹಿಂದೆ ನಡೆದಿರುವ ಎರಡು ಉದ್ಯೋಗ ಮೇಳದ ಬಗ್ಗೆ ಉದ್ಯೋಗದಾತರು, ಅಭ್ಯರ್ಥಿಗಳು ಹಾಗೂ ಸಾರ್ವಜನಿಕರಿಂದ ವ್ಯಕ್ತವಾಗಿರುವ ಅಭಿಪ್ರಾಯ, ಟೀಕೆ, ಟಿಪ್ಪಣಿ ಆಧರಿಸಿ ಈ ಬಾರಿ ಯಾವುದೇ ಗೊಂದಲಕ್ಕೆ ಎಡೆಯಾಗದ ರೀತಿಯಲ್ಲಿ ಅಚ್ಚುಕಟ್ಟಾಗಿ ಮೇಳ ಆಯೋಜಿಸಲು ನಿರ್ಧರಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೈಗಾರಿಕೆಗಳು ಭಾಗವಹಿಸಿ ಉದ್ಯೋಗ ಕಲ್ಪಿಸಿದಲ್ಲಿ ನಿರುದ್ಯೋಗ ಸಮಸ್ಯೆಗೆ ತಕ್ಕ ಮಟ್ಟಿಗೆ ಪರಿಹಾರ ಸಿಗುತ್ತದೆ ಎಂದರು.

    ಮೇಳವನ್ನು ಕಾಟಾಚಾರಕ್ಕೆ ನಡೆಸುತ್ತಿಲ್ಲ. ಯುವಕರಿಗೆ ಕೌಶಲ ಅಭಿವೃದ್ಧಿಗೂ ಇದರಿಂದ ಸಹಾಯವಾಗಬೇಕೆಂಬ ಹಂಬಲವಿದೆ. ನಾವು ಜನರನ್ನು ಕೊಡುತ್ತೇವೆ, ಅರ್ಹರನ್ನು ಆಯ್ಕೆ ಮಾಡಿ ಕೆಲಸ ಕೊಡಿ ಎಂದು ಕೋರಿದರು.

    ಕೆಲಸ ಸಿಗುತ್ತದೆ ಎಂದರೆ ಜನ ಬಂದೇ ಬರುತ್ತಾರೆ, ಯಾವ ಹುದ್ದೆಗೆ ಯಾರನ್ನು ನೇಮಿಸಿಕೊಳ್ಳಬೇಕೆಂಬ ಮಾನದಂಡದ ಆಧಾರದ ಮೇಲೆ ಅಭ್ಯರ್ಥಿಗಳ ಸಂದರ್ಶನ ನಡೆಸಿ ಅದಷ್ಟು ಸ್ಥಳೀಯರಿಗೆ ಹೆಚ್ಚು ಉದ್ಯೋಗ ನೀಡಬೇಕು ಎಂದು ಸಲಹೆ ನೀಡಿದರು.

    ಮೇಳದ ಪ್ರಯುಕ್ತ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ನಿರುದ್ಯೋಗಿ ಯುವಕರಿಗೆ ಮಾರ್ಗದರ್ಶಿ ಶಿಬಿರ ಏರ್ಪಡಿಸಿ ಸಂದರ್ಶನ ಹೇಗೆ ಎದುರಿಸಬೇಕೆಂದು ಅರಿವು ಮೂಡಿಸಲಾಗುತ್ತದೆ ಎಂದು ಉದ್ಯೋಗ ಮೇಳದ ನೋಂದಣಿ ವಿಭಾಗದ ಪ್ರತಿನಿಧಿ ಶ್ರೀವತ್ಸ ವಿವರಿಸಿದರು.

    ಮಾಲೂರು ಕೈಗಾರಿಕಾ ವಸಹತು ಪ್ರದೇಶದ ಉದ್ಯಮಿಗಳ ಸಂಘದ ಅಧ್ಯಕ್ಷ ಶ್ರೀ ಪ್ರಕಾಶ್ ಮಾತನಾಡಿ, ಆರ್ಥಿಕ ಬಿಕ್ಕಟ್ಟಿನಿಂದ ಕಂಪನಿಗಳು ಕಳೆದ 6 ತಿಂಗಳಿಂದ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಆದರೂ ಉದ್ಯೋಗ ಮೇಳದಲ್ಲಿ ಭಾಗವಹಿಸಿ ನಮಗೆ ಅವಶ್ಯಕತೆ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು ಎಂದರು.

    ಜಿಲ್ಲಾ ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಆರ್.ಬಾಲಸುಬ್ರಮಣ್ಯಂ, ಜಿಲ್ಲಾ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಸಿದ್ದಲಿಂಗಪ್ಪ ಪೂಜಾರ್, ಉಪ ನಿರ್ದೇಶಕ ರವಿಚಂದ್ರನ್, ಜವಳಿ ಇಲಾಖೆ ಉಪನಿರ್ದೇಶಕಿ ಎಂ.ಸೌಮ್ಯಾ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts