More

    ಒಳ್ಳೆಯದು-ಕೆಟ್ಟದರ ಚರ್ಚೆಯಾಗಬೇಕೇ ವಿನಾ ಜಾತಿ-ಧರ್ಮದ ಬಗ್ಗೆಯಲ್ಲ

    ಕೋಲಾರ: ಸಮಾಜದಲ್ಲಿಂದು ಮೌಲ್ಯ-ಅಪಮೌಲ್ಯ, ಒಳ್ಳೆಯದು-ಕೆಟ್ಟದರ ಬಗ್ಗೆ ಚರ್ಚೆಯಾಗಬೇಕೇ ವಿನಾ ಜಾತಿ-ಧರ್ಮದ ಬಗ್ಗೆ ಚರ್ಚೆ ಅವಶ್ಯಕತೆಯಿಲ್ಲ ಎಂದು ಉಪ ವಿಭಾಗಾಧಿಕಾರಿ ಸೋಮಶೇಖರ್ ಹೇಳಿದರು.

    ತಾಲೂಕಿನ ಧನಟ್ನಹಳ್ಳಿ ಶ್ರೀ ಯೋಗಿನಾರೇಯಣ ಆಶ್ರಮದಲ್ಲಿ ಅರಿವು ಭಾರತ ವತಿಯಿಂದ ಭಾನುವಾರ ಆಯೋಜಿಸಿದ್ದ ತತ್ವಪದಕಾರರ ಸಮ್ಮೇಳನ ಹಾಗೂ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಯಾವ ಜಾತಿ ಶ್ರೇಷ್ಠವೂ ಅಲ್ಲ, ಕನಿಷ್ಠವೂ ಅಲ್ಲ. ಸಮಾಜ ಸುಧಾರಕರು ಜಾತಿ ಧರ್ಮವನ್ನು ಮೀರಿ ಬೆಳೆದವರು. ಇಂದು ಜಯಂತಿ ಹೆಸರಲ್ಲಿ ಆ ಮಹನೀಯರಿಗೆ ಜಾತಿಯ ಚೌಕಟ್ಟು ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ವಿಷಾದಿಸಿದರು.

    ಜಿಡ್ಡುಗಟ್ಟಿದ ಜಾತಿ ವ್ಯವಸ್ಥೆ, ಅಸ್ಪ್ರಶ್ಯತೆ, ಸತಿಸಹಗಮನ ಪದ್ಧತಿ ಇನ್ನಿತರ ಅನಿಷ್ಟ ಪದ್ಧತಿಗಳು ಮಿತಿಮೀರಿದಾಗ ಸಮಾಜ ಸುಧಾರಕರು ತೊಡೆದುಹಾಕಲು ಪ್ರಯತ್ನಿಸಿದ್ದಾರೆ. ತತ್ವ ಪದಕಾರರು ಪದಗಳ ಮೂಲವೇ ಸಮಾನತೆಯನ್ನು ಪ್ರತಿಪಾದಿಸುತ್ತಾ ಬಂದಿದ್ದರು. ತತ್ವಪದಕಾರರು ಪದಗಳ ಅರ್ಥ ತಿಳಿದು ಹಾಡಿ ಅದರಂತೆ ನಡೆದರೆ ಮಹಾಪುರುಷರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದರು.
    ಬದಲಾವಣೆ ಜಗದ ನಿಯಮ. ಎಲ್ಲವೂ ಮಿತಿಮೀರಿದಾಗ ಕೇಂದ್ರೀಕೃತ ವ್ಯವಸ್ಥೆ ವಿರುದ್ಧ ನಿಸರ್ಗ ನ್ಯಾಯವೇ ಪಾಠ ಕಲಿಸುತ್ತದೆ. ಇಂತಹ ಕಾರ್ಯಕ್ರಮಗಳಿಂದ ಸಾಮಾಜಿಕ ಬದಲಾವಣೆಗೆ ಇನ್ನಷ್ಟು ವೇಗ ಸಿಗಲಿ ಎಂದು ಆಶಿಸಿದರು.

    ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಮಾತನಾಡಿ, ಮೂಲೆಗುಂಪಾಗಿರುವ ತತ್ವಪದಕಾರರನ್ನು ಗುರುತಿಸುವ ಕೆಲಸ ಅಗಬೇಕು.ತತ್ವ ಪದಕಾರರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಅಗತ್ಯ ಉತ್ತೇಜ ನೀಡುವುದಾಗಿ ತಿಳಿಸಿದರು.

    ಆಶಯ ನುಡಿಗಳನ್ನಾಡಿದ ಅರಿವು ಭಾರತದ ಸಂಚಾಲಕ ಡಾ ಅರಿವು ಶಿವಪ್ಪ, ಬದಲಾವಣೆಯ ಹಂತ ಯಾವ ದಿಕ್ಕಿನಲ್ಲಿ ಹೋಗಬೇಕಿತ್ತೋ ಆ ದಿಕ್ಕಿನಲ್ಲಿ ಆಗುತ್ತಿಲ್ಲ.ಇಂದಿಗೂ ಕೂಡ ಸಣ್ಣ ಲೋಪಗಳನ್ನು ತಿದ್ದಿದರೆ ಹಳ್ಳಿಗಳು ಮತ್ತಷ್ಟು ಕಾಲ ಉಳಿಯುವ ಸತ್ವ ಹೊಂದಿದೆ. ಇಂದು ಇಡೀ ಜಗತ್ತು ನಗರಮುಖಿಯಾಗಿ ಪಡಬಾರದ ಕಷ್ಟ ಪಡುತ್ತಿದ್ದಾರೆ. ಇದನ್ನು ಬದಲಿಸುವ ನಿಟ್ಟಿನಲ್ಲಿ ನಮ್ಮದು ಪುಟ್ಟ ಪ್ರಯತ್ನ. ಜಿಲ್ಲೆಯ ಪ್ರತಿ ಹೋಬಳಿಗಳಲ್ಲೂ ತತ್ವಪದಕಾರರ ಸಮ್ಮೇಳನ ಆಯೋಜಿಸುವ ಮೂಲಕ ತತ್ವಪದಗಳ ದಾಖಲೀಕರಣಗೊಳಿಸುವ ಕೆಲಸ ಮಾಡಲಾಗುವುದು ಎಂದರು.

    ರಂಗಭೂಮಿ ಕಲಾವಿದ ಮದ್ದೇರಿ ಮುನಿರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಬಳ್ಳಾರಿಯ ಪತ್ರಕರ್ತ ನರಸಿಂಹಮೂರ್ತಿ, ಆದಿಮ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಮುನಿಸ್ವಾಮಿ, ನಿವೃತ್ತ ಜಿಲ್ಲಾಧಿಕಾರಿ ಚೌಡಪ್ಪ, ಶೆಟ್ಟಿಹಳ್ಳಿ ಗ್ರಾಪಂ ಅಧ್ಯಕ್ಷೆ ಜಯಮ್ಮ ಮುನಿನಾರಾಯಣಪ್ಪ, ಟಿ. ವಿಜಯಕುಮಾರ್, ಉಪನ್ಯಾಸಕ ಸಿ.ಎ. ರಮೇಶ್, ಡಾ. ಮುನಿರಾಜು, ಮುಖಂಡ ವೆಂಕಟಾಚಲಪತಿ, ಕೃಷ್ಣೇಗೌಡ, ಜನ್ನಘಟ್ಟ ಕೃಷ್ಣಮೂರ್ತಿ, ಮುನಿಆಂಜಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts