ಕೊಕಟನೂರ: ಅಸಪರ್ಮಕ ನೀರು ಪೂರೈಕೆಗೆ ವಿರೋಧ

ಕೊಕಟನೂರ: ಅಸಮರ್ಪಕ ಕುಡಿಯುವ ನೀರಿನ ಪೂರೈಕೆ ಖಂಡಿಸಿ ಅಥಣಿ ತಾಲೂಕಿನ ಕಟಗೇರಿ ಗ್ರಾಮಸ್ಥರು ಸ್ಥಳೀಯ ಗ್ರಾಪಂ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಮಂಗಳವಾರ ಪ್ರತಿಭಟಿಸಿದರು.

ಜೀವ ಜಲಕ್ಕೆ ನಿತ್ಯ ಸಮಸ್ಯೆ ಎದುರಿಸುವಂತಾಗಿದೆ. ಗ್ರಾಮದಲ್ಲಿರುವ ಸರ್ಕಾರಿ ಬಾವಿಯಲ್ಲಿ ನೀರಿದ್ದರೂ ಆ ನೀರನ್ನು ಗ್ರಾಮದ ಜನರಿಗೆ ಪೂರೈಸುವ ಬದಲು ಖಾಸಗಿ ಜಮೀನಿಗೆ ಪೂರೈಸಲಾಗುತ್ತಿದೆ. ಟ್ಯಾಂಕರ್ ಮೂಲಕ ಪೂರೈಸಲಾಗುತ್ತಿರುವ ನೀರು ಸವಳು-ಜವಳಾಗಿದ್ದು ಕುಡಿಯಲು ಅನುಪಕ್ತವಾಗಿದೆ. ಗುಣಮಟ್ಟದ ನೀರು ಪೂರೈಸಲು ಗ್ರಾಪಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷೃದಿಂದಾಗಿ ಗ್ರಾಮದ ಮಹಿಳೆಯರೇ ತೋಟದ ವಸತಿಗೆ ತೆರಳಿ ನೀರು ತರುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪಿಡಿಒ ಬಿ.ಎಚ್.ಬಲೋಜಿ, ಗ್ರಾಪಂ ಸದಸ್ಯ ಲಗಮಣ್ಣ ಪೂಜಾರಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮಾತನಾಡಿ, ಗ್ರಾಪಂನಿಂದ ಗ್ರಾಮಸ್ಥರಿಗೆ ಕುಡಿಯುವ ನೀರು ಒದಗಿಸಲು ಬೋರ್‌ವೆಲ್ ಕೊರೆಯಿಸಲಾಗಿದೆ. ಎರಡು ದಿನದಲ್ಲಿ ಪೈಪ್‌ಲೈನ್ ಮಾಡಿ ನೀರು ಪೂರೈಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.

ಸಾಯವ್ವ ಗೋಟಾಳೆ, ಲಕ್ಕವ್ವ ತುಪ್ಪದ, ಮಹನಂದ ಮಠಪತಿ, ಶೋಭಾ ಮಂಟೂರ, ರಾಮಪ್ಪ ಕುರಬರ, ಹನುಮಂತ ಸೊನ್ನದ, ಮಹೇಶ ಕಳ್ಳಿ, ಸದಾಶಿವ ಕನಾಳ, ಸಚಿನ ಹಿರೇಮಠ, ಮಹದೇವ ಕಳ್ಳಿ, ಮಹಾಂತಯ್ಯ ಮಠಪತಿ, ಅಪ್ಪಣ್ಣ ಪಾಟೀಲ, ಸದಾಶಿವ ಮಠಪತಿ ಮತ್ತಿತರರಿದ್ದರು.

Leave a Reply

Your email address will not be published. Required fields are marked *