ಹೊಂಡ ಮುಚ್ಚದೆ ಸಾರ್ವಜನಿಕರಿಗೆ ಸಂಕಷ್ಟ

ಅನಂತ ನಾಯಕ್ ಮುದ್ದೂರು, ಕೊಕ್ಕರ್ಣೆ
ಕೊಕ್ಕರ್ಣೆ ಗ್ರಾಪಂ ವ್ಯಾಪ್ತಿಯ ವಿವಿಧೆಡೆ ಖಾಸಗಿ ಕಂಪನಿಯವರು ಕೇಬಲ್ ಅಳವಡಿಸಲು ತೋಡಿದ ಹೊಂಡಗಳು ಅಪಾಯ ಆಹ್ವಾನಿಸುತ್ತಿವೆ.

ಕೊಕ್ಕರ್ಣೆ, ಹಣಾರ್‌ಬೆಟ್ಟು, ನುಕ್ಕೂರು, ಬೈದೆಬೆಟ್ಟು, ಪಾದೇಮಠ, ಚೆಗ್ರಿಬೆಟ್ಟು, 38ನೇ ಕಳ್ತೂರು ಗ್ರಾಪಂ ವ್ಯಾಪ್ತಿಯ ಕೆಂಜೂರು, ಬಲ್ಲೆಬೈಲು, ಸಂತೆಕಟ್ಟೆ ಕಳ್ತೂರು, ನಾಲ್ಕೂರು ಗ್ರಾಪಂ ವ್ಯಾಪ್ತಿಯ ಮಾರಾಳಿ, ದಾಸಾನುಕಟ್ಟೆ, ಮಿಯಾರು,ನಂಚಾರು ಹಾಗೂ ಗೋಳಿಯಂಗಡಿ ತನಕ ಖಾಸಗಿ ಮೊಬೈಲ್ ಕಂಪನಿಯವರು ಕೇಬಲ್‌ಗಳನ್ನು ಅಳವಡಿಸಲು 15 ಫೀಟ್ ಆಳದ ಹೊಂಡಗಳನ್ನು ನಿರ್ಮಿಸಿದ್ದು, ಕಾಮಗಾರಿ ಅಪೂರ್ಣವಾಗಿದೆ.

ಕೊಕ್ಕರ್ಣೆ, ಚೆಗ್ರಿಬೆಟ್ಟು, ಬೈದೆಬೆಟ್ಟು, ಪಾದೇಮಠ, ಸಂತೆಕಟ್ಟೆ ಮುಖ್ಯ ಮಾರ್ಗದಲ್ಲೂ ಕೂಡ ಇಂತಹ ಹೊಂಡಗಳನ್ನು ನಿರ್ಮಿಸಿದ್ದಾರೆ. ಇದರಿಂದ ಏಕಮುಖ ಸಂಚಾರ ಮಾತ್ರ ಸಾಧ್ಯವಾಗಿದೆ. ಕಾಮಗಾರಿಗಾಗಿ ಹೊಂಡ ತೆಗೆದು 6 ತಿಂಗಳು ಕಳೆದಿದೆ. ಆದರೆ ಕೆಲವೆಡೆ ಪೈಪುಗಳನ್ನು ಅಳವಡಿಸಿದರೂ ಹೊಂಡಗಳನ್ನು ಮುಚ್ಚಿಲ್ಲ. ಇದರಿಂದಾಗಿ ವಾಹನ ಸವಾರರು ಸೈಡ್ ನೀಡಲು ಜಾಗದ ಕೊರತೆಯಿಂದಾಗಿ ವಾಹನಗಳು ಅಪಘಾತಕ್ಕೀಡಾದ ನಿದರ್ಶನಗಳೂ ಇವೆ. ಇದಲ್ಲದೆ ಧೂಳಿನಿಂದಾಗಿ ವಾಹನ ಸವಾರರು ಹೈರಾಣಾಗಿದ್ದಾರೆ.

ಕಂಪನಿಯವರು ಕಾಮಗಾರಿ ಪ್ರಾರಂಭಿಸುವ ಮೊದಲು ಸಂಬಂಧಪಟ್ಟ ಗ್ರಾಪಂಗೆ ತಿಳಿಸಬೇಕಿತ್ತು. ಆದರೆ ಗುತ್ತಿಗೆದಾರರು ಡಿವಿಜನ್ ಇಂಜಿನಿಯರ್ ಮೂಲಕ ಅನುಮತಿ ಪಡೆದು ಏಕಾಏಕಿ ಕಾಮಗಾರಿ ಪ್ರಾರಂಭಿಸಿದ್ದಾರೆ. 2 ಮೀಟರ್ ಅಂತರ ಕಾಯ್ದುಕೊಂಡು ಪೈಪ್ ಅಳವಡಿಸಲು ಹೊಂಡಗಳನ್ನು ನಿರ್ಮಿಸಬೇಕಿತ್ತು. ಆದರೆ ನಿಯಮಗಳನ್ನು ಗಾಳಿಗೆ ತೂರಿ ಕಾಮಗಾರಿ ನಡೆದಿದೆ.

ಅವೈಜ್ಞಾನಿಕ ಕಾಮಗಾರಿಯಿಂದಾಗಿ ಹಲವು ಸಮಸ್ಯೆಗಳು ಉಂಟಾಗಿವೆ. ಹೊಂಡಗಳನ್ನು ಅತೀ ಶೀಘ್ರದಲ್ಲಿ ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ನಿಯಮಗಳನ್ನು ಗಾಳಿಗೆ ತೂರಿ ಕಾಮಗಾರಿ ನಡೆಸುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟವರು ಸೂಕ್ತ ಕ್ರಮಗಳನ್ನು ಕೈಗೊಂಡು ಕಾನೂನುಬದ್ಧವಾಗಿ ವ್ಯವಸ್ಥೆ ಮಾಡಲಿ.
|ಕೊಕ್ಕರ್ಣೆ, ಕೆಂಜೂರು ಗ್ರಾಮಸ್ಥರು